ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕೇ ದಿನದಲ್ಲಿ ಬಂದ್ ಬಿಸಿ ತಟ್ಟುತ್ತಿದೆ. ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿ ಬೆಂಗಳೂರು ಹೊರತುಪಡಿಸಿ ರಾಜ್ಯದೆಲ್ಲೆಡೆ ಸೋಮವಾರ ಪ್ರತಿಪಕ್ಷ ಬಿಜೆಪಿ ಪ್ರೇರಿತ ಬಂದ್‌ಗೆ ಸಿದ್ಧತೆ ನಡೆದಿದೆ.
ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಹುಮತ ಸಾಬೀತುಪಡಿಸುವ ಮುನ್ನ ಸಂಜೆಯೊಳಗೆ ರೈತರ ಸಾಲ ಮನ್ನಾ ಘೋಷಿಸದಿದ್ದಲ್ಲಿ ಸೋಮವಾರ ರಾಜ್ಯ ಬಂದ್ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಅದರಂತೆ ಸ್ವಯಂ ಪ್ರೇರಿತ ಬಂದ್‌ಗೆ ಬಿಜೆಪಿ ಕರೆನೀಡಿದೆ. ಆದರೆ, ಈ ಬಂದ್‌ಗೆ ರೈತ ಸಂಘಟನೆಗಳು, ಕಬ್ಬು ಬೆಳೆಗಾರರ ಸಂಘಟನೆ, ಕನ್ನಡಪರ ಸಂಘಟನೆಗಳು, ಚಿತ್ರೋದ್ಯಮ, ಖಾಸಗಿ ಶಾಲಾಡಳಿತ ಮಂಡಳಿ, ಹೋಟೆಲ್ ಉದ್ಯಮ, ಆಟೋಚಾಲಕರು ಸೇರಿದಂತೆ ಯಾವುದೇ ಸಂಘಟನೆಗಳು ಬೆಂಬಲಿಸುತ್ತಿಲ್ಲ.
ಇನ್ನೊಂದೆಡೆ ರಾಜ್ಯ ಸರ್ಕಾರವೂ ಬಂದ್ ನಡೆಯದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿದೆ. ಬಂದ್ ಕರೆ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ರಾಜ್ಯದ ನಾಲ್ಕು ವಲಯಗಳ ಐಜಿಪಿ, ಪೊಲೀಸ್ ಆಯುಕ್ತರು, ಜಿಲ್ಲಾ ಎಸ್ಪಿಗಳಿಗೆ ಸೂಚಿಸಿದ್ದು, ಯಾವುದೇ ಅಹಿಕತರ ಘಟನೆಗಳು ಜರುಗದಂತೆ ಕಟ್ಟುನಿಟ್ಟಿನ ಕಾನೂನು ಸುವ್ಯವಸ್ಥೆ ಪಾಲಿಸಲು ತಾಕೀತು ಮಾಡಿದ್ದಾರೆ.
ಅಲ್ಲದೆ, “ಬಂದ್’ ಆಚರಣೆ ಸಂವಿಧಾನ ಬಾಹಿರ ಎಂದು ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ಬಂದ್ ಆಚರಿಸಲು ಮುಂದಾಗುವವರಿಗೆ ಮನದಟ್ಟು ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸರ್ಕಾರದಿಂದ ಸೂಚನೆ ನೀಡಲಾಗಿದೆ.
ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಬಳಿಕ ಮುಖ್ಯಮಂತ್ರಿಗಳ ನಿಲುವು ಖಚಿತಪಡಿಸಿಕೊಂಡು ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು. ಸೋಮವಾರ ನಡೆಸಲಿರುವ ಬಂದ್ ಬಗ್ಗೆ ನಮ್ಮ ಜೊತೆ ಯಾರು ಚರ್ಚಿಸಿಲ್ಲ. ಹೀಗಾಗಿ ಬಂದ್ ಆಚರಣೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ.
– ಕುರುಬೂರು ಶಾಂತಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ
ಸೋಮವಾರ ನಡೆಯುತ್ತಿರುವ ರಾಜಕೀಯ ಪ್ರೇರಿತ ಬಂದ್‌ಗೆ ನಮ್ಮ ಬೆಂಬಲ ಇಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಾಲ ಮನ್ನಾ ಕುರಿತು ತೀರ್ಮಾನ ಕೈಗೊಳ್ಳಲು ಕಾಲಾವಕಾಶ ನೀಡಿ ಸರ್ಕಾರದ ನಿಲುವು ಏನೆಂಬುದನ್ನು ತಿಳಿದುಕೊಳ್ಳಬೇಕು. ಅಲ್ಲದೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೇ 31ರಂದು ರಾಜ್ಯವ್ಯಾಪಿ ರೈತ ಸಂಘಟನೆಗಳ ಪ್ರಮುಖ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
– ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ