ಮಂಡ್ಯ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂಸುಧಾರಣೆ, ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ನಡೆಯುತ್ತಿರುವ ಕರ್ನಾಟಕ ಬಂದ್ ಗೆ ಮಂಡ್ಯ ಜಿಲ್ಲೆಯಲ್ಲೂ ಬೀದಿಗಿಳಿದ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದೆ.
ಬೆಳ್ಳಂಬೆಳಿಗ್ಗೆಯೇ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ, ಬೈಕ್ ರ್ಯಾಲಿ ಮೂಲಕ ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದರು.
ಜಿಲ್ಲೆಯ ಏಳು ತಾಲ್ಲೂಕಿನ ಪಟ್ಟಣ, ಗ್ರಾಮೀಣ ಪ್ರದೇಶದಲ್ಲೂ ರಸ್ತೆ ತಡೆ ನಡೆಸಲು ರೈತರ ಸಿದ್ಧತೆ ಮಾಡಿಕೊಂಡಿದ್ದಾರೆ.
ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಸಾರಿಗೆ ಬಸ್ ಸಂಚರಿಸದಂತೆ ತಡೆದ ಪ್ರತಿಭಟನಾಕಾರರು ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ:LIVE: ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ತೋರಿದ ಕರಾವಳಿ: ಎಲ್ಲೆಲ್ಲಿ ಹೇಗಿದೆ?
ಬಂದ್ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲೂ ಇಳಿಕೆಯಾಗಿದ್ದು, ಸಾರಿಗೆ ಬಸ್ ಗಳು ನಿಲ್ದಾಣದಲ್ಲೇ ನಿಂತಿವೆ.
ಸುಮಾರು 500ಕ್ಕೂ ಹೆಚ್ಚು ಬೈಕ್ ರ್ಯಾಲಿ ಮೂಲಕ ನಗರದ ಪೇಟೆ ಬೀದಿ, ಗುತ್ತಲು ರಸ್ತೆ, ನೂರಡಿ ರಸ್ತೆ, ವಿವಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪ್ರತಿಭಟನಾಕಾರರು ಬಂದ್ ಮಾಡಿಸುತ್ತಿದ್ದಾರೆ.
ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.