Advertisement

ಇಂದು ಕರ್ನಾಟಕ ಬಂದ್: ಬಿಗು ಭದ್ರತೆ, ಎಲ್ಲಿ ಹೇಗಿದೆ ಪರಿಸ್ಥಿತಿ?

10:12 AM Feb 14, 2020 | keerthan |

ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್ ಇಂದು ಆಚರಿಸಲಾಗುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಸಂಚಾರ ವ್ಯವಸ್ಥೆ ಸಹಜವಾಗಿದ್ದರೂ ಬೆಳಗಿನ ಜಾವ ಹಲವೆಡೆ ಜನ ಸಂಚಾರ ವಿರಳವಾಗಿದೆ, ಕರಾವಳಿ ಜಲ್ಲೆಗಳಲ್ಲಿ ಯಾವುದೇ ಸ್ಪಂದನೆ ದೊರೆತಿಲ್ಲ.

ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಮೀಸಲಾತಿ ಕಲ್ಪಿಸಲು ಸರೋಜಿನಿ ಮಹಿಷಿ ವರದಿಯನ್ನು ಸರಕಾರ ಜಾರಿ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.

Advertisement

ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಖಾಸಗಿ ಸಂಚಾರಿ ಸೇವೆಗಳಲ್ಲಿ ವ್ಯತ್ಯಯವಾಗಿದೆ. ಓಲಾ, ಊಬರ್, ಖಾಸಗಿ ಟ್ಯಾಕ್ಸಿ, ಆಟೋ ರಿಕ್ಷಾಗಳು ಬಂದ್ ಗೆ ಬೆಂಬಲ ಸೂಚಿಸಿದೆ. ಈ ಸೇವೆಗಳನ್ನೇ ನಂಬಿರುವವರು ಇಂದು ಪರದಾಡುತ್ತಿರುವುದು ಕಂಡು ಬಂದಿದೆ.

ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಇವುಗಳ ಸಂಚಾರ ಯಥಾಸ್ಥಿತಿಯಿದೆ. ಆದರೆ ಬಂದ್ ಕಾರಣದಿಂದ ಜನ ಸಂಚಾರ ವಿರಳವಾಗಿದ್ದು, ಬಸ್ ಗಳು ಬಹುತೇಕ ಖಾಲಿ ಖಾಲಿಯಾಗಿ ಸಂಚರಿಸುತ್ತಿವೆ.

ಶಾಲಾ ಕಾಲೇಜುಗಳು ಎಂದಿನಂತೆ ಮುಂದುವರಿದಿದ್ದು, ಯಾವುದೇ ರೀತಿಯ ರಜೆ ಘೋಷಿಸಲಾಗಿಲ್ಲ. ಆದರೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಲಾಗಿದೆ.

ಬಿಗು ಭದ್ರತೆ

ಬೆಂಗಳೂರಿನ ಹಲವೆಡೆ ಬಿಗು ಭದ್ರತೆ ಒದಗಿಸಲಾಗಿದೆ. ಟೌನ್ ಹಾಲ್, ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣ, ಮೈಸೂರು ರಸ್ತೆ, ಮೆಜೆಸ್ಟಿಕ್ ಮುಂತಾದ ಕಡೆಗಳಲ್ಲಿ ಪೊಲೀಸರು ಬಿಗು ಭದ್ರತೆ ಒದಗಿಸಿದ್ದಾರೆ.

 ಕರಾವಳಿ ಜಿಲ್ಲೆಯಲ್ಲಿ ಬಂದ್ ಇಲ್ಲ
ಕರ್ನಾಟಕ ಬಂದ್ ಗೆ ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಯಾವುದೇ ಬೆಂಬಲ ದೊರೆತಿಲ್ಲ. ಗುರುವಾರ ಬೆಳಿಗ್ಗೆ ಎಲ್ಲಾ ಸಂಚಾರ ವ್ಯವಸ್ಥೆ ಎಂದಿನಂತಿದ್ದು, ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದಿಲ್ಲ. ಇಲ್ಲಿನ ಖಾಸಗಿ ಬಸ್ ಗಳು ಯಾವುದೇ ರೀತಿಯ ಬೆಂಬಲ ನೀಡದಿರುವ ಕಾರಣ ಜನಸಂಚಾರ ಯಥಾಸ್ಥಿತಿಯಲ್ಲಿದೆ.

ಮಧ್ಯಕರ್ನಾಟಕ ದಾವಣಗೆರೆಯಲ್ಲಿ ಯಾವುದೇ ಬಂದ್ ವಾತವರಣ ಕಂಡುಬಂದಿಲ್ಲ. ಎಂದಿನಂತೆ ನಡೆಯುತ್ತಿರುವ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ವಾಹನಗಳ ಸಂಚಾರ ಸಹಜಸ್ಥಿತಿಯಲ್ಲಿದೆ.

Advertisement

ಕೊಪ್ಪಳ ಜಿಲ್ಲೆಯಲ್ಲೂ ಯಾವುದೇ ರೀತಿಯ ಬಂದ್ ಬಿಸಿ ತಟ್ಟಿಲ್ಲ. ವ್ಯಾಪಾರ ವ್ಯವಹಾರ, ಸಂಚಾರ ವ್ಯವಸ್ಥೆ, ಶಾಲಾ ಕಾಲೇಜು ಎಂದಿನಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next