ಬೆಂಗಳೂರು: ರೈತರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಬೆಂಗಳೂರು ಹೊರತುಪಡಿಸಿ ರಾಜ್ಯದ ಎಲ್ಲಾ ಕಡೆ ನಮ್ಮ ಬಂದ್ ಯಶಸ್ವಿಯಾಗಿದೆ. ಅಲ್ಲದೇ ಸಾಲಮನ್ನಾಕ್ಕೆ ಒಂದು ವಾರದ ಗಡುವು ನೀಡಿದ್ದಾರೆ. ಸಾಲಮನ್ನಾ ಮಾಡದಿದ್ದರೆ ಮುಂದಿನ ಹೋರಾಟದ ರೂಪರೇಷೆ ಬಗ್ಗೆ ಚರ್ಚೆ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಹೊರತು ರಾಜ್ಯದ ಜನರ ಮುಲಾಜಿನಲ್ಲಿ ಇಲ್ಲ ಎಂದು ಕುಮಾರಸ್ವಾಮಿ ಅವರು ಹೇಳುವ ಮೂಲಕ ರಾಜ್ಯದ ಆರೂವರೆ ಕೋಟಿ ಜನರಿಗೆ ಅಪಮಾನ ಮಾಡಿದ್ದಾರೆ.
ಸಾಲಮನ್ನಾಕ್ಕೆ ಒಂದು ವಾರ ಕಾಲಾವಕಾಶ ಕೊಡಿ ಎಂದು ಸಿಎಂ ಎಚ್ ಡಿಕೆ ಹೇಳಿದ್ದಾರೆ. ಹೀಗಾಗಿ ಒಂದು ವಾರ ಕಾಯುತ್ತೇವೆ, ಮುಂದೆ ಮತ್ತೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಹಲವೆಡೆ ನಮ್ಮ ಸಂಸದರು, ಶಾಸಕರನ್ನು ಬಂಧಿಸಲಾಗಿದೆ. ಈ ರಾಜ್ಯದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ ಇಲ್ಲವಾ? ಇದು ಆತಂಕಕಾರಿ ಬೆಳವಣಿಗೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ಬಲಪ್ರಯೋಗದ ನಡುವೆಯೂ ಜನ ಪ್ರತಿಭಟನೆ ನಡೆಸಿದ್ದಾರೆ. ಚುನಾವಣೆ ಬಳಿಕವೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದೆ. ರೈತರ ಸಾಲಮನ್ನಾ ಮಾಡಿದ್ದರೆ ಆತ್ಮಹತ್ಯೆ ತಡೆಯಬಹುದಿತ್ತು ಎಂದು ಹೇಳಿದರು.