ಹುಬ್ಬಳ್ಳಿ: ಕಳಸಾ-ಬಂಡೂರಿ ನಾಲಾ ಜೋಡಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜೂ.12ರಂದು ನಡೆಸುವ “ಕರ್ನಾಟಕ ಬಂದ್’ಗೆ ರಾಜ್ಯದ ಜನರು ಬೆಂಬಲಿಸಬೇಕು ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾ- ಬಂಡೂರಿ ನಾಲಾ ಜೋಡಣೆ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಬಯಲು ಸೀಮೆಯಲ್ಲಿ ಕುಡಿಯುವ ನೀರಿನ ಶಾಶ್ವತ ಯೋಜನೆ ಅನುಷ್ಠಾನ ಹಾಗೂ ಕನ್ನಡಿಗರ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಎಂಇಎಸ್ ಸದಸ್ಯರ ಮೇಲೆ ಕ್ರಮಕ್ಕೆ ಆಗ್ರಹಿಸಿ ಜೂ.12ರಂದು ರಾಜ್ಯ ಬಂದ್‌ಗೆ ಕರೆ ನೀಡಲಾಗಿದೆ.
ಅಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಮಾಡಲಾಗುವುದು. ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಲಾಗುವುದು. ರಾಜ್ಯಾದ್ಯಂತ ಸುಮಾರು 2000 ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ ಎಂದರು. ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ ಎಂದು ಜನಪ್ರತಿನಿಧಿಗಳು ಪ್ರಚಾರ ಪಡೆಯುತ್ತಾರೆ.
ಆದರೆ ಈ ಭಾಗಗಳ ಅಭಿವೃದ್ಧಿಗೆ ಯಾವ ಕ್ರಮ ಕೈಗೊಂಡಿದೆ ಎಂಬ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ. ಇದರಿಂದ ಜನರಿಗೆ ಸತ್ಯಾಸತ್ಯತೆ ಏನೆಂಬುದು ಗೊತ್ತಾಗುತ್ತದೆ ಎಂದು ವಾಟಾಳ್ ನಾಗರಾಜ ಹೇಳಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸತ್ಯಾಗ್ರಹ ಹತ್ತಿಕ್ಕಲು ಯತ್ನಿಸುತ್ತಿವೆ.
ಹೋರಾಟಗಾರರೇ ಸೋಲಬೇಕಾದ ಸ್ಥಿತಿ ಎದುರಾಗಿದೆ. ಆದರೆ ನಾವು ಅವಕಾಶ ನೀಡುವುದಿಲ್ಲ. ಕಳಸಾ-ಬಂಡೂರಿ ಹೋರಾಟಗಾರರೊಂದಿಗೆ ನಾವು ಸಾಥ್ ನೀಡುತ್ತೇವೆ. ಬೇಡಿಕೆ ಈಡೇರಿಸುವವರೆಗೂ ಹೋರಾಡುತ್ತೇವೆ. ಮುಂದಿನ ಹಂತದಲ್ಲಿ ರೈಲು ರೋಕೊ, ಗೋವಾ ಚಲೋ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು.
ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ, ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸಯ್ಯದ್‌ಜಿಲಾನಿ ಪಾಷಾ ಖಾದ್ರಿ, ಲೋಕನಾಥ ಹೆಬಸೂರ, ದ್ಯಾಮಣ್ಣ ಜಂಬಗಿ, ಜಯರಾಜ ಹೂಗಾರ ಇದ್ದರು.