ಕಲಬುರಗಿ: ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ಸೇರಿ ವಿವಿಧ ತಿದ್ದುಪಡಿ ಕಾಯ್ದೆಗಳ ವಿರೋಧಿಸಿ ಸೋಮವಾರ ನಡೆಯುತ್ತಿರುವ ಕರ್ನಾಟಕ ಬಂದ್ ಗೆ ಕಲಬುರಗಿಯಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕರ್ನಾಟಕ ಬಂದ್ ಅಂಗವಾಗಿ ಜಿಲ್ಲೆಯ ರೈತ, ಕನ್ನಡ ಪರ ಸಂಘಟನೆಗಳು ಕಲಬುರಗಿ ಬಂದ್ ಆಚರಣೆ ಹೆಸರಲ್ಲಿ ಹೋರಾಟ ಹಮ್ಮಿಕೊಂಡಿದೆ. ಬೆಳಿಗ್ಗೆಯೇ ನಗರದ ಕೇಂದ್ರ ಬಸ್ ನಿಲ್ದಾಣ ಮುಂದೆ ಪ್ರತಿಭಟನೆ ನಡೆಸಲಾಯಿತು. ಇದರಿಂದಿಂದಾಗಿ 10 ಗಂಟೆಯವರೆಗೆ ಬಸ್ ಸಂಚಾರ ಸ್ಥಗಿತಗೊಂಡಿತು.
ಇದನ್ನೂ ಓದಿ:ಮಂಡ್ಯ: ಸಂಘಟನೆಗಳಿಂದ ಪ್ರತಿಭಟನೆ, ಬಸ್ ಓಡಾಟ ಇದ್ದರೂ ಜನಸಂಚಾರ ವಿರಳ
ಅಲ್ಲಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ತಲುಪಿದ್ದು, ಹಲವು ಮುಖಂಡರು ಮಾತನಾಡಿ ರೈತ ಮತ್ತು ಜನ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು. ಬಿಜೆಪಿ ಸರ್ಕಾರ ಜಾರಿ ತರಲು ಮುಂದಾಗಿರುವ ತಿದ್ದುಪಡಿ ಕಾಯ್ದೆಗಳು ಕೇವಲ ರೈತರಿಗೆ ಮಾತ್ರ ಪ್ರತಿಯೊಬ್ಬ ಪ್ರಜೆಯ ಹಿತಾಸಕ್ತಿಗೆ ಹಾನಿ ಉಂಟು ಮಾಡಲಿವೆ ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಬಿ.ಆರ್.ಪಾಟೀಲ್ ಹೇಳಿದರು. ಹಿರಿಯ ಮುಖಂಡ ಮಾರುತಿ ಮಾನ್ಪಡೆ ಸೇರಿ ಹಲವರು ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದಾರೆ.
ಇನ್ನು, ಬಂದ್ ಮತ್ತು ಹೋರಾಟದ ನಡುವೆಯೂ ಆಟೋ ಸೇರಿದಂತೆ ವಾಹನಗಳ ಸಂಚಾರ ಸಹಜವಾಗಿ ಇದೆ. ಅಗತ್ಯ ಸೇವೆಗೆ ಯಾವುದೇ ಅಡ್ಡಿಯಾಗಿಲ್ಲ.