Advertisement

ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ! 10ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ನಲ್ಲಿ ಭಾಗಿ

04:17 PM Sep 29, 2020 | sudhir |

ಧಾರವಾಡ: ರೈತ-ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕರೆ ನೀಡಿದ್ದ ಕರ್ನಾಟಕ್‌ ಬಂದ್‌ಗೆ ನಗರದಲ್ಲಿ ಸೋಮವಾರ
ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮಧ್ಯಾಹ್ನದವರೆಗೂ ಸಂಪೂರ್ಣ ಬಂದ್‌ ಇದ್ದರೆ, ಸಂಜೆ ವೇಳೆಗೆ ಮತ್ತೆ ಅಂಗಡಿ ಮುಂಗಟ್ಟುಗಳು ತೆರೆದು ಜನಜೀವನ ಸಹಜ ಸ್ಥಿತಿಗೆ ಬಂತು. ರೈತ ಸೇನಾ ಕರ್ನಾಟಕ, ಕೆಆರ್‌ ಎಸ್‌ ಮತ್ತು ಗ್ರೀನ್‌ ಬ್ರಿಗೇಡ್‌, ದಲಾಲ್‌ ಮತ್ತು ವರ್ತಕರ ಸಂಘ, ಸಮಾಜ ಪರಿವರ್ತನ ಸಮುದಾಯ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸೇರಿದಂತೆ 10ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲದೊಂದಿಗೆ ನಡೆದ ಬಂದ್‌ ಕೇವಲ ಪ್ರತಿಭಟನೆಗೆ ಅಷ್ಟೇ ಸೀಮಿತವಾಗಿತ್ತು.

Advertisement

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಗರದ ಜ್ಯುಬಿಲಿ ವೃತ್ತದಲ್ಲಿ ಜಮಾವಣೆಗೊಂಡ ರೈತ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ತಿದ್ದುಪಡಿ ಕಾಯ್ದೆಗಳ ಪ್ರತಿಕೃತಿ ದಹಿಸಿ ತಮ್ಮ ಅಸಮಾಧಾನ ಹೊರ ಹಾಕಿದರು. ಇದಲ್ಲದೇ ಜೋಡೆತ್ತುಗಳ ಸಮೇತ ಬಂಡಿ ಮುಂದಿಟ್ಟು ಪ್ರತಿಭಟನೆ ಕೈಗೊಂಡು, ಜ್ಯುಬಿಲಿ ವೃತ್ತದ ಸುತ್ತ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಲಾಯಿತು. ಬಸ್‌ ಸಂಚಾರ ಆರಂಭವಾಗಿದ್ದನ್ನು ಕಂಡ ಪ್ರತಿಭಟನಾಕಾರರು ಜುಬಿಲಿ ವೃತ್ತದಲ್ಲಿ ಬಸ್‌,ಲಾರಿಗಳಿಗೆ
ಅಡ್ಡಲಾಗಿ ಮಲಗಿ ಸಂಚಾರ ಬಂದ್‌ ಮಾಡುವಂತೆ ಆಗ್ರಹಿಸಿ ವಾಪಸ್‌ ಕಳುಹಿಸುತ್ತಿದ್ದರು. ಇದಾದ ಕೆಲ ಹೊತ್ತಿನ ಬಳಿಕ ಬಸ್‌
ಗಳು, ವಾಹನಗಳು ಅನ್ಯ ಮಾರ್ಗ ಸಂಚಾರ ನಡೆಸಿದ್ದವು.

ಬಳಿಕ ಡಿಸಿ ಕಚೇರಿ ಎದುರು ಧರಣಿ ಕೈಗೊಂಡು ಕೇಂದ್ರ-ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ಹೊರ ಹಾಕಿ, ಜಿಲ್ಲಾಡಳಿತ
ಮೂಲಕ ಮನವಿ ಸಲ್ಲಿಸಲಾಯಿತು. ಮಧ್ಯಾಹ್ನದವರೆಗೂ ಏರುತ್ತಲೇ ಸಾಗಿದ ಬಂದ್‌ ಬಿಸಿ ಮಾತ್ರ ಮಧ್ಯಾಹ್ನದ ಬಳಿಕ
ತಣ್ಣಗಾಯಿತು.

ಜುಬಿಲಿ ವೃತ್ತದಲ್ಲಿ ಎಲ್ಲ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸುತ್ತಿದ್ದ ಪರಿಣಾಮ ಆ ಭಾಗದ ಸುತ್ತಲಿನ ಅಂಗಡಿಗಳು,
ಮಾರುಕಟ್ಟೆ ಪ್ರದೇಶ ಬಂದಾಗಿತ್ತು. ಇದನ್ನು ಹೊರತುಪಡಿಸಿ ಇತರೆ ಭಾಗಗಳಲ್ಲಿ ವ್ಯಾಪಾರ ವಹಿವಾಟು, ಜನಸಂಚಾರ
ಎಂದಿನಂತ್ತಿತ್ತು.ಕೆಲ ಹೊತ್ತು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಬೈಕ್‌ ಮೇಲೆ ನಗರ ಪ್ರದಕ್ಷಿಣೆ ಹಾಕಿ ಅಂಗಡಿ ಮುಂಗಟ್ಟು ಸೇರಿ ಇತರೆ ವ್ಯಾಪಾರ-ವಹಿವಾಟು ಬಂದ್‌ ಮಾಡಿಸಲು ಪ್ರಯತ್ನಿಸಿದರು. ಸುಭಾಸ ರಸ್ತೆ, ಟಿಕಾರೆ ರಸ್ತೆ ಹಾಗೂ ಜ್ಯುಬಿಲಿ ವೃತ್ತದಲ್ಲಿಯೇ ಅಷ್ಟೇ ಬಂದ್‌ ಲಕ್ಷಣ ಕಾಣ ಸಿಕ್ಕರೆ ಉಳಿದಂತೆ ವಿವಿಧ ಪ್ರದೇಶಗಳಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿತು.

Advertisement

Udayavani is now on Telegram. Click here to join our channel and stay updated with the latest news.

Next