Advertisement

ಇಂದಿನಿಂದ ಅಧಿವೇಶನ:  ಆಡಳಿತ-ವಿಪಕ್ಷದ ಜಂಗೀಕುಸ್ತಿಗೆ ಅಖಾಡ

08:34 PM Feb 09, 2023 | Team Udayavani |

ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನ ಶುಕ್ರವಾರದಿಂದ ಆರಂಭವಾಗಲಿದ್ದು, ಚುನಾವಣೆಯ ಹೊಸ್ತಿಲಿನಲ್ಲಿ ಆಡಳಿತ ಹಾಗೂ ವಿಪಕ್ಷಗಳ ಜಂಗೀಕುಸ್ತಿಯ ಅಖಾಡ ಆಗುವ ಸಾಧ್ಯತೆಯಿದೆ.

Advertisement

ರಾಜ್ಯಪಾಲರು ಜಂಟಿ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಸೋಮವಾರದಿಂದ ಗುರುವಾರದ ವರೆಗೆ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆ ನಡೆಯಲಿದೆ. ಫೆ. 17ರಂದು 2023-24ನೇ ಸಾಲಿನ ಬಜೆಟ್‌ ಮಂಡನೆಯಾಗಲಿದೆ. ಒಟ್ಟು 10 ದಿನಗಳ ಅಧಿವೇಶನ ನಿಗದಿಯಾಗಿದೆ.

ಈ ಸಂದರ್ಭದಲ್ಲಿ 40 ಪರ್ಸೆಂಟ್‌ ಭ್ರಷ್ಟಾಚಾರ ಆರೋಪ ಮತ್ತು ವೈಫ‌ಲ್ಯಗಳನ್ನು ಎತ್ತಿಕೊಂಡು ಸರಕಾರದ ಮೇಲೆ ಮುಗಿಬೀಳಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯತಂತ್ರ ರೂಪಿಸಿವೆ. ಎಸ್‌ಸಿ-ಎಸ್‌ಟಿ ಮೀಸಲಾತಿ, ಲಂಬಾಣಿ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಸೇರಿ ಸರಕಾರದ ಸಾಧನೆಗಳ ಅಂಕಿಅಂಶ ನೀಡಿ ವಿಪಕ್ಷಗಳ ಬಾಯಿ ಮುಚ್ಚಿಸಲು ಬಿಜೆಪಿ ಪ್ರತಿ ತಂತ್ರದಲ್ಲಿ ತೊಡಗಿದೆ.

ಪ್ರತೀ ಹಂತದಲ್ಲೂ ಸರಕಾರದ ಸಾಧನೆಯನ್ನು ಸಮರ್ಥನೆ ಮಾಡಿಕೊಳ್ಳಬೇಕು. ಇದು ಈ ಅವಧಿಯ ಕೊನೆಯ ಬಜೆಟ್‌ ಆಗಿರುವುದರಿಂದ ಸರಕಾರದ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಮಾತನಾಡುವಂತೆ ಬಿಜೆಪಿ ನಾಯಕರು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಅದೇ ರೀತಿ ವಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಧಿವೇಶನವನ್ನು ಸರಕಾರದ ವೈಫ‌ಲ್ಯಗಳನ್ನು ಟೀಕಿಸುವ ವೇದಿಕೆ ಮಾಡಿಕೊಳ್ಳಲು ಮುಂದಾಗಿವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಜಾಧ್ವನಿ ಯಾತ್ರೆಯ ನಡುವೆ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

Advertisement

ಎಸ್‌ಸಿ-ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳ, ಪಂಚಮಸಾಲಿ ಹಾಗೂ ಒಕ್ಕಲಿಗ ಮೀಸಲಾತಿಗಾಗಿ ಪ್ರತ್ಯೇಕ ಕೆಟಗರಿ ಸೃಷ್ಟಿಯ ಮುಂದುವರಿದ ಕ್ರಮ ಏನು ಎಂಬುದರ ಬಗ್ಗೆ ಕಾಂಗ್ರೆಸ್‌ ಪಟ್ಟು ಹಿಡಿಯಲು ತೀರ್ಮಾನಿಸಿದೆ. ಇದೇ ಕಾರಣಕ್ಕೆ ಸಂಪುಟ ಸಭೆಯಲ್ಲಿ ಎಸ್‌ಸಿ-ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಾಂವಿಧಾನಿಕ ಬಲ ತುಂಬುವುದಕ್ಕಾಗಿ ಸಂವಿಧಾನದ ಷೆಡ್ನೂಲ್‌ 9ಕ್ಕೆ ಸೇರ್ಪಡೆಗೆ ಕೇಂದ್ರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ “ಬ್ರಾಹ್ಮಣ ಮುಖ್ಯಮಂತ್ರಿ, “ಪೇಶ್ವೆ’ ವಿವಾದವೂ ಕೋಲಾಹಲ ಮೂಡಿಸುವ ಸಾಧ್ಯತೆಯಿದೆ.

ಬಹುತೇಕರು ಗೈರಾಗುವ ಸಾಧ್ಯತೆ:

ಅಧಿವೇಶನದ ಸಂದರ್ಭದಲ್ಲೇ ಜೆಡಿಎಸ್‌ ಪಂಚರತ್ನ ಯಾತ್ರೆ ಹಾಗೂ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆ ರಾಜ್ಯದ ವಿವಿಧೆಡೆ ನಡೆಯುತ್ತಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಬಹುತೇಕ ಸದನಕ್ಕೆ ಗೈರುಹಾಜರಾಗುವ ಲಕ್ಷಣಗಳೂ ಕಂಡುಬರುತ್ತಿವೆ. ಹೀಗಾಗಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನಕ್ಕೆ ಬರುವಂತೆ, ಚರ್ಚೆಯಲ್ಲಿ ಭಾಗವಹಿಸುವಂತೆ ಶಾಸಕರಿಗೆ ಮನವಿ ಮಾಡಿದ್ದಾರೆ.

ವಿಧಾನ ಮಂಡಲ ಎಂದರೆ ಪ್ರಜಾಪ್ರಭುತ್ವದ ದೇಗುಲ. ಕೊನೆಯ ಅಧಿವೇಶನ ಎಂಬ ಕಾರಣಕ್ಕೆ ಉದಾಸೀನ ಮಾಡದೆ ಕಡ್ಡಾಯವಾಗಿ ಸದನಕ್ಕೆ ಹಾಜರಾಗಿ ಎಂದು ಶಾಸಕರಲ್ಲಿ ಮನವಿ ಮಾಡುತ್ತೇನೆ.ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್‌

Advertisement

Udayavani is now on Telegram. Click here to join our channel and stay updated with the latest news.

Next