Advertisement

ಬೆಳ್ತಂಗಡಿ, ಬಂಟ್ವಾಳ ಕ್ಷೇತ್ರದಲ್ಲಿ ಅರಳಿದ ಕಮಲ

07:55 AM May 16, 2018 | |

ಬೆಳ್ತಂಗಡಿ : ತಾಲೂಕಿನಲ್ಲಿ ಬೆಳಗ್ಗಿನಿಂದಲೇ ಅನುಭವಿ ರಾಜಕಾರಣಿ ಹಾಗೂ ಯುವ ನಾಯಕನ ನಡುವಿನ ಹಣಾಹಣಿ ಫಲಿತಾಂಶ ತಿಳಿದುಕೊಳ್ಳಲು ಜನತೆ ಕುತೂಹಲಭರಿತರಾಗಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಬಂದು ನಿರಾಳರಾದರು. ಬೆಳಗ್ಗಿನಿಂದಲೇ ವಿವಿಧ ಅಂಗಡಿ, ಮುಂಗಟ್ಟುಗಳಲ್ಲಿ ಹಾಕಿದ್ದ ಟಿ.ವಿ. ಮೂಲಕ ಫಲಿತಾಂಶ ಯಾರ ಕಡೆಗಿದೆ ಎಂಬುದನ್ನು ಕುತೂಹಲದಿಂದ ವೀಕ್ಷಿಸಿದರು. ರಿಕ್ಷಾ ಚಾಲಕರು ಹಾಗೂ ಬಾಡಿಗೆಗೆ ಜೀಪ್‌ ಓಡಿಸುವ, ರಿಕ್ಷಾ ಚಾಲಕರು ತಮ್ಮ ಮೊಬೈಲ್‌ ಗ‌ಳಲ್ಲಿ ಫಲಿತಾಂಶ ವೀಕ್ಷಿಸಿ ಕುತೂಹಲ ತಣಿಸಿಕೊಂಡರು.

Advertisement

ಬಿಕೋ ಎನ್ನುತ್ತಿದ್ದ ತಾಲೂಕು ಕೇಂದ್ರ 
ಮಂಗಳವಾರ ಬೆಳಗ್ಗಿನ ಜಾವ 11 ಗಂಟೆಯವರೆಗೂ ಹೆಚ್ಚಿನ ಜನಸಂದಣಿ ಕಂಡುಬರಲಿಲ್ಲ. ಬಿಜೆಪಿ 22 ಸಾವಿರ ಅಂತರದಿಂದ ಸ್ಪಷ್ಟ ಬಹುಮತ ಸಾಧಿಸಿದೆ ಎಂಬ ವಿಚಾರ ತಿಳಿದ ಕಾರ್ಯಕರ್ತರು ತಮ್ಮ ವಾಹನಗಳಲ್ಲಿ ನಗರದಲ್ಲಿ ಘೋಷಣೆ ಕೂಗುತ್ತಾ ಓಡಾಟ ನಡೆಸಿದರು.  ಈ ವೇಳೆ ಕೆಲವೆಡೆ ಟ್ರಾಫಿಕ್‌ ಜಾಮ್‌ ಉಂಟಾಯಿತು. ಸೂಕ್ತ ಪೊಲೀಸ್‌ ವ್ಯವಸ್ಥೆ ಮಾಡಿದ್ದರಿಂದ ಹೆಚ್ಚಿನ ಸಮಸ್ಯೆ ಉಂಟಾಗಲಿಲ್ಲ. ಬಿಜೆಪಿ ಕಾರ್ಯಕರ್ತರು ತಾಲೂಕಿನ ಮೂಲೆ ಮೂಲೆಯಿಂದ ವಾಹನಗಳಲ್ಲಿ ತಾ| ಕೇಂದ್ರಕ್ಕೆ ಆಗಮಿಸಿ ವಿಜಯೋತ್ಸವ ಆಚರಿಸಿದರು.

ಮತದಾರರಿಂದ ಬದಲಾವಣೆ
ತಾಲೂಕಿನಲ್ಲಿ ಹಲವು ಸಮಸ್ಯೆಗಳು ಇನ್ನೂ ಇವೆ. ಮುಖ್ಯವಾಗಿ ಎಂಡೋ ಪೀಡಿತರಿಗೆ ಸಮರ್ಪಕ ಸೌಲಭ್ಯ ಕಲ್ಪಿಸುವ ಪ್ರಕ್ರಿಯೆ ನಡೆದಿಲ್ಲ. ತಾಲೂಕಿನಲ್ಲಿ ಈಗಾಗಲೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಸವಾಲುಗಳು ಬೆಟ್ಟದಷ್ಟಿದೆ. ಶಿರಾಡಿ ಘಾಟಿ ಬಂದ್‌ ನಿಂದ ಬಂಟ್ವಾಳ ವಿಲ್ಲುಪುರಂ ರಾ.ಹೆ.ಯಲ್ಲಿ ವಾಹನದಟ್ಟಣೆ ಹೆಚ್ಚಾಗಿದ್ದು, ಟ್ರಾಫಿಕ್‌ ಜಾಮ್‌ ನಂತಹ ಸಮಸ್ಯೆಯಿದೆ. ತಾಲೂಕಿನ ಹಲವು ಗ್ರಾಮಗಳಲ್ಲಿಯೂ ರಸ್ತೆ ಅಭಿವೃದ್ಧಿ ಕಾರ್ಯ ಸಮರ್ಪಕವಾಗಿ ನಡೆಯಬೇಕಿದೆ. ಚಾರ್ಮಾಡಿ – ಬಾಂಜಾರುಮಲೆ ಇನ್ನೂ ಹಲವಾರು ರಸ್ತೆಗಳ ಅಭಿವೃದ್ಧಿ ಮಾಡುವ ಆವಶ್ಯಕತೆಯಿದೆ. ಮುಖ್ಯವಾಗಿ ಬಹುವರ್ಷಗಳ ಬೇಡಿಕೆಯಾಗಿರುವ ದಿಡುಪೆ – ಎಳನೀರು- ಸಂಸ ರಸ್ತೆ ಅಭಿವೃದ್ಧಿ ನಡೆಯದಿರುವುದು. ತಾಲೂಕಿನ ಒಟ್ಟಾರೆ ಅಭಿವೃದ್ಧಿಗೆ ಜನತೆ ಯುವ ನಾಯಕನ ಮೇಲೆ ಭರವಸೆ ಇಟ್ಟು ಗೆಲ್ಲಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

ಹರಿದಾಡುತ್ತಿದೆ ಕಾರ್ಟೂ​​​​​​​ನ್‌


ಹರೀಶ್‌ ಪೂಂಜ ಗೆಲುವಿಗೆ ಮಾಡಿರುವ ಕಾರ್ಟೂನ್‌ ತಾಲೂಕಿನಲ್ಲಿ ವೈರಲ್‌ ಆಗಿದೆ. ಹರೀಶ್‌ ಪೂಂಜ ಅವರು ಒಂದು ಕೈಯಲ್ಲಿ ಬಿಜೆಪಿ ಬಾವುಟ ಹಾಗೂ ಮತ್ತೂಂದು ಕೈಯಲ್ಲಿ ಎಂ.ಎಲ್‌.ಎ. ಕಪ್‌ ಗೆದ್ದಂತೆ ಬಿಂಬಿಸಲಾಗಿದೆ. ಈ ಕಾರ್ಟೂನನ್ನು ಉಪನ್ಯಾಸಕ ಶೈಲೇಶ್‌ ಅವರು ಬಿಡಿಸಿದ್ದಾರೆ. ಅಳದಂಗಡಿಗೆ ಆಗಮಿಸಿದ್ದ ಸ್ಮೃತಿ ಇರಾನಿಯವರಿಗೂ ಕಾರ್ಟೂನ್‌ ಚಿತ್ರ ನೀಡಿ ಮೆಚ್ಚುಗೆ ಗಳಿಸಿದ್ದರು. ಈ ಚಿತ್ರ ವಾಟ್ಸ್ಯಾಪ್‌ ಡಿಪಿಗಳಲ್ಲಿ, ಗ್ರೂಪ್‌ ಗಳ ಮುಖ್ಯ ಚಿತ್ರಗಳಲ್ಲಿ, ಫೇಸ್‌ಬುಕ್‌ ಮೊದಲಾದೆಡೆ ಹರಿದಾಡುತ್ತಿದೆ.

ಚಪ್ಪಲಿ ಹಾಕುವುದಿಲ್ಲವೆಂದು ಶಪಥ!


ಚುನಾವಣೆ ಘೋಷಣೆಯಾಗಿ ಹರೀಶ್‌ ಪೂಂಜ ಅವರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಇಬ್ಬರು ಬಿಜೆಪಿ ಕಾರ್ಯಕರ್ತರು ಚಪ್ಪಲಿ ಧರಿಸದೆ ಓಡಾಡುತ್ತಿದ್ದಾರೆ. ಹರೀಶ್‌ ಪುಂಜಾ ಅವರು ಶಾಸಕರಾದ ಬಳಿಕವೇ ತಾವು ಚಪ್ಪಲಿ ಧರಿಸುತ್ತೇವೆ ಎಂಬುದು ಇವರ ಅಚಲ ನಿರ್ಧಾರ. ಕೊಕ್ಕಡದ ರಂಜಿತ್‌ ಹಾಗೂ ಭುವನ್‌ ಅವರು ಈ ಇಬ್ಬರು ಯುವಕರು. 

Advertisement

ನೋಟಾ ತಂದ ಕುತೂಹಲ
ತಾಲೂಕಿನಲ್ಲಿ 1,245 ನೋಟಾ ಚಲಾವಣೆಯಾಗಿರುವುದು ಚರ್ಚೆಗೆ ಕಾರಣವಾಗಿದೆ. ಎಲ್ಲಿ ಈ ಮತಗಳು ಚಲಾವಣೆಯಾಗಿದೆ. ಯಾಕಾಗಿ ಚಲಾವಣೆಯಾಗಿದೆ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳ ಒಟ್ಟು ಮತಕ್ಕಿಂತಲೂ ನೋಟಾದ ಸಂಖ್ಯೆ ಹೆಚ್ಚಿದೆ ಎನ್ನುವುದು ವಿಶೇಷ. ತಾಲೂಕಿನಲ್ಲಿ ಅಚ್ಚರಿಯ ಬೆಳವಣಿಗೆ ಕುರಿತು ರಾಜಕೀಯ ಪಕ್ಷಗಳೂ ಗಮನ ಹರಿಸಬೇಕಾದ ಅಗತ್ಯತೆ ಇದೆ ಎನ್ನುವುದು ಸ್ಪಷ್ಟ. 

ಚುನಾವಣಾಧಿಕಾರಿ ಕಚೇರಿ ಖಾಲಿ!
ಚುನಾವಣೆ ಘೋಷಣೆಯಾದ ಬಳಿಕ ತಹಶೀಲ್ದಾರ್‌ ಕಚೇರಿ ಪಕ್ಕದ ಚುನಾವಣಾಧಿಕಾರಿ ಸದಾ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಮಂಗಳವಾರ ಕಚೇರಿ ಯಾವುದೇ ಅಧಿಕಾರಿಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಕರ್ತವ್ಯ ನಿಮಿತ್ತ ಅಧಿಕಾರಿಗಳು ಮಂಗಳೂರಿಗೆ ತೆರಳಿದ್ದರಿಂದ ನೀರವ ಮೌನ ಆವರಿಸಿತ್ತು.
 


ಬಂಟ್ವಾಳ:
ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ  ಬಿಜೆಪಿ ಅಭ್ಯರ್ಥಿ ರಾಜೇಶ್‌ ನಾೖಕ್‌ ಗೆಲುವಿನ ವರದಿ ಆಗುತ್ತಿದ್ದಂತೆ ಬಿ.ಸಿ. ರೋಡ್‌ ಬಿಜೆಪಿ ಕಚೇರಿ ಎದುರು  ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ನೆರೆದು ಹರ್ಷ ವ್ಯಕ್ತ ಪಡಿಸಿದರು. ಯಾವುದೇ ಅಹಿತಕರ ಘಟನೆಗೆ ಅವಕಾಶ ಆಗದಂತೆ ಪೊಲೀಸ್‌, ಅರೆಸೇನಾ ಪಡೆ ಪ್ರದೇಶವನ್ನು ಸುತ್ತುವರಿದು ರಕ್ಷಣೆಯನ್ನು ನೀಡಿದ್ದರು. ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಎಲ್ಲೆಡೆಯಿಂದ ರಾಜೇಶ್‌ ನಾೖಕ್‌ ಅವರಿಗೆ ಅಭಿನಂದನೆ, ಶುಭ ಹಾರೈಕೆ ವ್ಯಕ್ತವಾಗಿತ್ತು.

ಕಾರ್ಯಕರ್ತರು ತಲೆಗೆ ಕೆಸರಿ ಬಿಳಿ ಹಸುರು ಬಣ್ಣದ ಟೊಪ್ಪಿ ಧರಿಸಿದ್ದು, ಮೋದಿಯ ಕಟೌಟ್‌ ಪ್ರದರ್ಶಿಸಿದ್ದರು. ಎಲ್ಲೆಡೆ ಬಿಜೆಪಿ ಪತಾಕೆಯನ್ನು ಎತ್ತಿ ಹಿಡಿದು ಪ್ರದರ್ಶಿಸಿದರು. ಮೆರವಣಿಗೆಯ ವಾಹನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಜ್ಯ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಕಟೌಟ್‌ಗಳನ್ನು ಎತ್ತಿ ಹಿಡಿದು ಬಿಜೆಪಿ ಪಕ್ಷಕ್ಕೆ ಜೈ ಎಂಬ ಜಯಕಾರ ಮೊಳಗಿಸಲಾಗಿತ್ತು. ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ, ಕಮಲಾಕ್ಷಿ ಕೆ. ಪೂಜಾರಿ ಸಹಿತ ಜನಪತ್ರಿನಿಧಿಗಳು, ಪಕ್ಷ ನಾಯಕರು ಸ್ಥಳದಲ್ಲಿ ಇದ್ದು ಕಾರ್ಯಕರ್ತರಿಗೆ ಅಭಿನಂದಿಸಿದರು.

ಪುಂಜಾಲಕಟ್ಟೆಯಲ್ಲಿ
ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರ ವಿಜಯದ ಪ್ರಯುಕ್ತ  ಪುಂಜಾಲಕಟ್ಟೆ, ವಗ್ಗ, ಕಕ್ಯಪದವು, ಸರಪಾಡಿ, ಮಾವಿನಕಟ್ಟೆ, ಪಾಂಡವರಕಲ್ಲು, ಮೂರ್ಜೆ, ವಾಮದಪದವು, ಸಿದ್ದಕಟ್ಟೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು. ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರು ಪೇಟೆಯಲ್ಲಿ ಜಮಾಯಿಸಿ ವಿಜಯೋತ್ಸವದಲ್ಲಿ ತೊಡಗಿಸಿಕೊಂಡರು. ಕಕ್ಯಪದವುನಲ್ಲಿ ಮಹಿಳೆಯರೂ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಪಕ್ಷ ವಲಯ ಕಚೇರಿಗಳಲ್ಲಿ ಕಾರ್ಯಕರ್ತ ಸಂಭ್ರಮವಿದ್ದರೆ, ಕಾಂಗ್ರೆಸ್‌ ವಲಯ ಕಚೇರಿಗಳಲ್ಲಿ ಕಾರ್ಯಕರ್ತರು ಸಪ್ಪೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next