Advertisement
ಕಾಂಗ್ರೆಸ್‌ನಿಂದ ಶಾಸಕಿ ಶಕುಂತಳಾ ಶೆಟ್ಟಿ, ಬಿಜೆಪಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಕಣಕ್ಕೆ ಇಳಿದಿದ್ದಾರೆ. ಸ್ವತಂತ್ರ ತುಳುನಾಡ ಪಕ್ಷದಿಂದ ವಿದ್ಯಾಶ್ರೀ, ಜೆಡಿಎಸ್ ಅಭ್ಯರ್ಥಿಯಾಗಿ ಐ.ಸಿ. ಕೈಲಾಸ್, ಜನತಾ ಪಕ್ಷದಿಂದ ಎಂ.ಎಸ್. ರಾವ್, ಜೆಡಿಯುನಿಂದ ಮಜೀದ್ ಎನ್.ಕೆ., ಎಂಇಪಿ ಪಕ್ಷದಿಂದ ಶಬೀನಾ, ಪ್ರಜಾ ಪರಿವರ್ತನಾ ಪಕ್ಷದಿಂದ ಶೇಖರ್ ಮಾಡಾವು ಕಣದಲ್ಲಿದ್ದಾರೆ. ಪಕ್ಷೇತರರಾಗಿ ಬಶೀರ್ ಬೂಡಿಯಾರ್, ಚೇತನ್, ಅಮರನಾಥ್ ಸಾಮರ್ಥ್ಯ ಪರೀಕ್ಷೆಗೆ ಮುಂದಾಗಿದ್ದಾರೆ. ಮತದಾರರ ಒಲವು ಯಾರ ಕಡೆಗೆ ಎನ್ನುವುದು ಸದ್ಯದ ಕುತೂಹಲ.
ಕ್ಷೇತ್ರ ವಿಂಗಡಣೆ
ಆರಂಭದಲ್ಲಿ ಪುತ್ತೂರು ಕ್ಷೇತ್ರಕ್ಕೆ ಪುತ್ತೂರು, ಸುಳ್ಯ ಹಾಗೂ ವಿಟ್ಲದ ಒಂದು ಭಾಗ ಸೇರಿತ್ತು. 1952- 1957ರ ಅವಧಿಯಲ್ಲಿ ಪುತ್ತೂರು ಮದ್ರಾಸ್ ಪ್ರಾಂತ್ಯದ ವ್ಯಾಪ್ತಿಯೊಳಗಿತ್ತು. 1956ರಲ್ಲಿ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ಅನಂತರ 1957ರಲ್ಲಿ ಪುತ್ತೂರನ್ನು ದ್ವಿಸದಸ್ಯ ಕ್ಷೇತ್ರವನ್ನಾಗಿ ಮಾಡಿ ಒಂದು ಸ್ಥಾನವನ್ನು ಸುಳ್ಯ ಎಂದು ವಿಭಾಗಿಸಲಾಯಿತು. ಇದನ್ನು ಮೀಸಲಾಗಿ ಇಡಲಾಯಿತು. 1962ರಲ್ಲಿ ಸುಳ್ಯವು ಸ್ವತಂತ್ರ ಮೀಸಲು ಕ್ಷೇತ್ರವಾಯಿತು. 2008ರಲ್ಲಿ ವಿಟ್ಲ ಕ್ಷೇತ್ರವನ್ನು ಇಬ್ಭಾಗಿಸಿ, ಪುತ್ತೂರು, ಬಂಟ್ವಾಳಕ್ಕೆ ಸೇರಿಸಲಾಯಿತು. ಪುತ್ತೂರಿನ ಭಾಗವಾಗಿದ್ದ ನೆಲ್ಯಾಡಿ, ಶಿರಾಡಿ, ಗೋಳಿತ್ತೂಟ್ಟು, ಕೆಮ್ಮಾರ ಗ್ರಾಮಗಳನ್ನು ಸುಳ್ಯಕ್ಕೆ, ಮಾಣಿಲ, ಪೆರುವಾಯಿ, ಅಳಿಕೆ, ವಿಟ್ಲ ಪುತ್ತೂರು ಕ್ಷೇತ್ರಕ್ಕೆ ಸೇರಿಸಲಾಯಿತು. ಪಕ್ಷಗಳದ್ದೇ ಪಾರಮ್ಯ
ಪುತ್ತೂರಿನಲ್ಲಿ ಇದುವರೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಅಧಿಕಾರವನ್ನು ಅನುಭವಿಸುತ್ತಾ ಬಂದಿವೆ. ಪಕ್ಷೇತರರು ಅಥವಾ ಇತರ ಪಕ್ಷದವರು ಪ್ರಾಬಲ್ಯ ಸಾಧಿಸಲು ಸಾಧ್ಯವಾಗಲೇ ಇಲ್ಲ. ಶಕುಂತಳಾ ಶೆಟ್ಟಿ ಸ್ವಾಭಿಮಾನಿ ಪಕ್ಷ ಕಟ್ಟಿ ಚುನಾವಣೆ ಎದುರಿಸಿದ್ದರು. ಅವರು 25 ಸಾವಿರ ಮತ ಪಡೆದದ್ದು ದೊಡ್ಡ ವಿಷಯವೇ. ಆದರೆ ಜಯಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಪಕ್ಷಗಳ ಜತೆಗಿನ ಮತದಾರರ ನಂಟು. ಇಲ್ಲಿನ ಜನರು ಪಕ್ಷಗಳಿಗೆ ಪ್ರಾಮುಖ್ಯ ನೀಡುವುದು ವೇದ್ಯವಾಗುತ್ತದೆ.
Related Articles
1952ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಜಾ ಸೋಶಿಯಲಿಸ್ಟ್ ಪಾರ್ಟಿಯಿಂದ ಸಾಹಿತಿ ಶಿವರಾಮ ಕಾರಂತ, ಜನಸಂಘದಿಂದ ರಾಮ ಭಟ್, ಸಿಪಿಐಎಂನಿಂದ ಕುಂಡಡ್ಕ ಸಂಜೀವ ರೈ; 1957ರಲ್ಲಿ ಸ್ವತಂತ್ರ ಪಾರ್ಟಿಯ ಉಗ್ಗಪ್ಪ ಶೆಟ್ಟಿ, ಜನಸಂಘದ ರಾಮ ಭಟ್; 1962ರಲ್ಲಿ ಜನಸಂಘದ ರಾಮ ಭಟ್, ಸಿಪಿಐಎಂನ ಸಂಜೀವ ರೈ, ಸ್ವತಂತ್ರ ಪಾರ್ಟಿಯ ನೇಮಿರಾಜ್; 1967ರಲ್ಲಿ ಜನಸಂಘದಿಂದ ರಾಮ ಭಟ್, ಪ್ರಜಾ ಸೋಶಿಯಲಿಸ್ಟ್ ಪಾರ್ಟಿಯಿಂದ ಕಜೆ ಈಶ್ವರ ಭಟ್; 1972ರಲ್ಲಿ ಜನ ಸಂಘದಿಂದ ರಾಮ ಭಟ್, ಪಕ್ಷೇತರರಾಗಿ ಪದ್ಮನಾಭ ಪೈ; 1978ರಲ್ಲಿ ಕಾಂಗ್ರೆಸ್‌ನಿಂದ ಬೆಟ್ಟ ಈಶ್ವರ ಭಟ್, 1983ರಲ್ಲಿ ಕಾಂಗ್ರೆಸ್‌ನಿಂದ ಸಂಕಪ್ಪ ರೈ, ಬಂಡುಕೋರರಾಗಿ ಸಿ.ಸಿ. ಚಾಕೋ, ದಯಾ ನಂದ ಪ್ರಭು; 1985ರಲ್ಲಿ ಬಿಜೆಪಿಯಿಂದ ಡಿ.ವಿ. ಸದಾನಂದ ಗೌಡ, ಜನತಾ ದಳದಿಂದ ಯು.ಪಿ. ಶಿವರಾಮ ಗೌಡ; 1990ರಲ್ಲಿ ಬಿಜೆಪಿಯಿಂದ ಡಿ.ವಿ. ಸದಾನಂದ ಗೌಡ, ಪಕ್ಷೇತರ ಅಭ್ಯರ್ಥಿಯಾಗಿ ಬಾಬು ಮೊಗೇರ; 1995ರಲ್ಲಿ ಕಾಂಗ್ರೆಸ್‌ನಿಂದ ವಿನಯ್ ಕುಮಾರ್ ಸೊರಕೆ, ಕರ್ನಾಟಕ ಕಾಂಗ್ರೆಸ್ ಪಾರ್ಟಿಯಿಂದ ಹೇಮನಾಥ ಶೆಟ್ಟಿ; 2000ರಲ್ಲಿ ಕಾಂಗ್ರೆಸ್‌ನಿಂದ ಸುಧಾಕರ ಶೆಟ್ಟಿ; 2004ರಲ್ಲಿ ಕಾಂಗ್ರೆಸ್‌ನಿಂದ ಸುಧಾಕರ ಶೆಟ್ಟಿ; 2009ರಲ್ಲಿ ಕಾಂಗ್ರೆಸ್‌ನಿಂದ ಬೊಂಡಾಲ ಜಗನ್ನಾಥ ಶೆಟ್ಟಿ, ಸ್ವಾಭಿಮಾನಿ ಪಕ್ಷದಿಂದ ಶಕುಂತಳಾ ಶೆಟ್ಟಿ, ಜೆಡಿಎಸ್‌ನಿಂದ ಐ.ಸಿ. ಕೈಲಾಸ್; 2013ರಲ್ಲಿ ಬಿಜೆಪಿಯಿಂದ ಸಂಜೀವ ಮಠಂದೂರು, ಜೆಡಿಎಸ್‌ನಿಂದ ದಿನೇಶ್ ಗೌಡ, ಎಸ್‌ಡಿಪಿಐನಿಂದ ಸಿದ್ದೀಕ್, ಕೆಜೆಪಿಯಿಂದ ಜಯರಾಮ, ಪಕ್ಷೇತರರಾಗಿ ಶೇಖರ್ ಮಾಡಾವು ಸ್ಪರ್ಧೆ ನೀಡಿದ್ದರು.
Advertisement
ಎರಡಕ್ಕಿಂತ ಹೆಚ್ಚು ಬಾರಿ ಶಾಸಕರಾದವರು ಇಲ್ಲ…ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ ಮೂರು ಬಾರಿ ಯಾರೂ ಶಾಸಕರಾಗಿ ಆಯ್ಕೆ ಆದ ಉದಾಹರಣೆ ಇಲ್ಲ. ಪುತ್ತೂರು, ಸುಳ್ಯ ಒಂದೇ ಆಗಿದ್ದಾಗ ಕೂಜುಗೋಡು ವೆಂಕಟರಮಣ ಗೌಡರು ಮೂರು ಬಾರಿಗೆ ಶಾಸಕರಾಗಿದ್ದರು. ಕ್ಷೇತ್ರ ಇಬ್ಭಾಗವಾದ ಬಳಿಕ ಮೂರು ಬಾರಿ ಯಾರೂ ಶಾಸಕರಾಗಿಲ್ಲ. ಪುತ್ತೂರು ಪ್ರತ್ಯೇಕ ಕ್ಷೇತ್ರವಾದ ಬಳಿಕ ಶಾಸಕರಾದವರ ಪೈಕಿ ವಿನಯ್ ಕುಮಾರ್ ಸೊರಕೆ ಸಚಿವರಾದರೆ, ಡಿ.ವಿ. ಸದಾನಂದ ಗೌಡ ರಾಜ್ಯ ಸಚಿವರಾಗಿ, ಮುಖ್ಯಮಂತ್ರಿಯಾಗಿ, ಈಗ ಕೇಂದ್ರ ಸಚಿವರೂ ಆಗಿದ್ದಾರೆ. ಕ್ಷೇತ್ರದಿಂದ ವಿಜೇತರಾದವರು
1952- 57 : ಕೆ. ವೆಂಕಟರಮಣ ಗೌಡ
1957- 62 : ಕೆ. ವೆಂಕಟರಮಣ ಗೌಡ
1962-67: ಕೆ. ವೆಂಕಟರಮಣ ಗೌಡ
1967- 72: ವಿಠಲದಾಸ ಶೆಟ್ಟಿ
1972-77 : ಶಂಕರ ಆಳ್ವ
1978-83 : ಕೆ. ರಾಮ ಭಟ್
1983-85 : ಕೆ. ರಾಮ ಭಟ್
1985- 90 : ವಿನಯ ಕುಮಾರ್ ಸೊರಕೆ
1990- 95 : ವಿನಯ ಕುಮಾರ್ ಸೊರಕೆ
1995- 2000 : ಡಿ.ವಿ. ಸದಾನಂದ ಗೌಡ
2000- 04 : ಡಿ.ವಿ. ಸದಾನಂದ ಗೌಡ
2004- 09 : ಶಕುಂತಳಾ ಶೆಟ್ಟಿ
2009- 13 : ಮಲ್ಲಿಕಾ ಪ್ರಸಾದ್
2013- 18 : ಶಕುಂತಳಾ ಶೆಟ್ಟಿ — ಗಣೇಶ್ ಕಲ್ಲರ್ಪೆ