ಮಂಗಳೂರು: ಅವಿಭಜಿತ (ದ.ಕ., ಉಡುಪಿ) ಜಿಲ್ಲೆಯ ಚುನಾವಣಾ ಇತಿಹಾಸ ಅವಲೋಕಿಸಿದರೆ ಕಾಪು ಕ್ಷೇತ್ರದ ಫಲಿತಾಂಶ ಕುತೂಹಲಕರವಾಗಿರುತ್ತದೆ. ಇತಿಹಾಸದ ಪುಟಗಳಲ್ಲಿ ಕಾಪು ಪ್ರಮುಖ ಸ್ಥಾನ ಹೊಂದಿದೆ. ಕೃಷಿಗೆ ಸಂಬಂಧಿಸಿಯೂ ಆ ಕಾಲದ ಆಳರಸರಿಗೆ ಇಲ್ಲಿಂದ ಸಾಕಷ್ಟು ಕಂದಾಯ ದೊರೆಯುತ್ತಿತ್ತು. ಒಂದೆಡೆ ಕೃಷಿ ಸಮೃದ್ಧಿ; ಇನ್ನೊಂದೆಡೆ ಮತ್ಸ್ಯಸಂಪತ್ತು. ಹೀಗೆ, ಕಾಯಕವನ್ನೇ ಪ್ರಧಾನವಾಗಿರಿಸಿಕೊಂಡ ಸಾಮಾಜಿಕ ವ್ಯವಸ್ಥೆ.
ಅರಬೀ ಸಮುದ್ರದ ತಡಿಯಲ್ಲಿ ಮೀನುಗಾರರಿಗೆ ದಿಕ್ಸೂಚಿಯಾಗಿ ರಾರಾಜಿಸುತ್ತಿರುವ, ಬ್ರಿಟಿಷರಿಂದ ಸ್ಥಾಪಿತ ಶತಮಾನದ ಹಿನ್ನೆಲೆಯ ದೀಪಸ್ತಂಭ. ಅದರ ಹಿಂಬದಿಯಲ್ಲಿ ನಿಸರ್ಗ ಬಂಡೆಯಲ್ಲೇ ನಿರ್ಮಿತ ರಕ್ಷಣಾ ಕೋಟೆ, ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ. ಪುಟ್ಟ ಕ್ಷೇತ್ರವಾಗಿದ್ದ ಕಾಪು ಕ್ಷೇತ್ರಗಳ ಪುನರ್ವಿಂಗಡಣೆಯಿಂದಾಗಿ ವಿಸ್ತಾರಗೊಂಡಿತು. ಈ ಕ್ಷೇತ್ರದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಮರ್ದ ಹೆಗ್ಗಡೆ ಪಟ್ಟಕ್ಕೆ ಬಂದಿದ್ದರು. ಇಲ್ಲಿನ ವ್ಯಾಪ್ತಿಯಲ್ಲಿ ಪಡುಬಿದ್ರಿ, ಎಲ್ಲೂರು, ಹಿರಿಯಡಕ, ಪೆರ್ಡೂರು ಮುಂತಾದ ಪ್ರಸಿದ್ಧ ದೇಗುಲಗಳಿವೆ. ಈ ಕ್ಷೇತ್ರದಲ್ಲಿರುವ ಬೀಡುಗಳು ತುಳುನಾಡಿನ ವೈಭವದ ಪರಂಪರೆಗೆ ಸಾಕ್ಷಿಯಾಗಿವೆ. ಕಾಪುವಿನ ಮಾರಿಗುಡಿಗಳು ಪ್ರಸಿದ್ಧವಾಗಿವೆ. ಕಾಪು ಕ್ಷೇತ್ರದಲ್ಲಿ ಈ ಬಾರಿ ಒಟ್ಟು 2,26,077 ಮಂದಿ ಮತದಾರರಿದ್ದಾರೆ. ಪುರುಷರಿಗಿಂತ ಸುಮಾರು 8,000 ಮಹಿಳೆಯರು ಅಧಿಕ ಎಂಬುದು ಗಮನಾರ್ಹ.
ರಾಜಕೀಯ – ಚುನಾವಣಾ ಇತಿಹಾಸದಲ್ಲಿಯೂ ಕಾಪು ಗಮನಾರ್ಹವಾಗಿದೆ. ರಾಷ್ಟ್ರೀಯ ನಾಯಕರೆಲ್ಲ ಇಲ್ಲಿಗೆ ಬಂದಿದ್ದಾರೆ ಮತ್ತು ಬರುತ್ತಿದ್ದಾರೆ ಎಂಬುದು ಈ ಮಾತಿಗೆ ನಿದರ್ಶನವಾಗಿದೆ. 2004ರ ಚುನಾವಣೆಯ ಸಂದರ್ಭದಲ್ಲಿ ಪುಟ್ಟ ಕ್ಷೇತ್ರವಾಗಿದ್ದ ಕಾಪು ಹೊಂದಿದ್ದ ಮತದಾರರ ಸಂಖ್ಯೆ 1,13,871. ಹೀಗೆ, 2009ರ ಪುನರ್ವಿಂಗಡಣೆಯ ವಿಸ್ತಾರದ ಬಳಿಕ ಮತದಾರರ ಸಂಖ್ಯೆ ದುಪ್ಪಟ್ಟಾಗಿದೆ.
1957ರಲ್ಲಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಚುನಾವಣೆ ನಡೆಯಿತು. ಕಾಂಗ್ರೆಸ್‌ನಿಂದ ಎಫ್.ಎಕ್ಸ್. ಡಿ. ಪಿಂಟೋ ಗೆದ್ದರು. ಅಲ್ಲಿಂದ ಈವರೆಗಿನ 13 ಚುನಾವಣೆಗಳಲ್ಲಿ ಕಾಂಗ್ರೆಸ್ 9 ಬಾರಿ, ಬಿಜೆಪಿ 2 ಬಾರಿ, ಪ್ರಜಾ ಸೋಶಿಯಲಿಸ್ಟ್ ಪಾರ್ಟಿ 2 ಬಾರಿ ಜಯಿಸಿದೆ. ಈ ಬಾರಿ ಹಾಲಿ ಶಾಸಕ- ಮಾಜಿ ಸಚಿವ ವಿನಯಕುಮಾರ್ ಸೊರಕೆ (ಕಾಂಗ್ರೆಸ್) ಮತ್ತು ಮಾಜಿ ಶಾಸಕ ಲಾಲಾಜಿ ಮೆಂಡನ್ (ಬಿಜೆಪಿ) ಅವರ ನಡುವೆ ಪ್ರಮುಖ ಸ್ಪರ್ಧೆ. ಕಳೆದ ಚುನಾವಣೆಯಲ್ಲೂ ಅವರು ಪ್ರಮುಖ ಸ್ಪರ್ಧಿಗಳಾಗಿದ್ದರು. ಪೊಲೀಸ್ ಅಧಿಕಾರಿಯ ಹುದ್ದೆಗೆ ರಾಜೀನಾಮೆ ನೀಡಿ ಜನಶಕ್ತಿ ಕಾಂಗ್ರೆಸ್ ಎಂಬ ಪಕ್ಷ ಸ್ಥಾಪಿಸಿದ ಅನುಪಮಾ ಶೆಣೈ, ಎಂಇಪಿಯ ಅಬ್ದುಲ್ ರೆಹಮಾನ್, ಜೆಡಿಎಸ್‌ನ ಮನ್ಸೂರ್ ಇಬ್ರಾಹಿಂ ಸ್ಪರ್ಧಾ ಕಣದಲ್ಲಿದ್ದಾರೆ.
ಅಂದ ಹಾಗೆ…
ಕಾಪು ಕ್ಷೇತ್ರವನ್ನು 1957ರಿಂದ 2013ರ ವರೆಗಿನ 56 ವರ್ಷಗಳ ಅವಧಿಯ 13 ಚುನಾವಣೆಗಳಲ್ಲಿ ಐವರು ಶಾಸಕರು ಮಾತ್ರ ಪ್ರತಿನಿಧಿಸಿದ್ದಾರೆ ಎಂಬುದೇ ವಿಶೇಷ: ಕಾಂಗ್ರೆಸ್‌ನ ಎಫ್.ಎಕ್ಸ್.ಡಿ. ಪಿಂಟೋ (1), ಬಿ. ಭಾಸ್ಕರ ಶೆಟ್ಟಿ ಕಾಪು (ಕಾಂಗ್ರೆಸ್-ಪಿಎಸ್‌ಪಿಯಿಂದ ತಲಾ 2 ಬಾರಿ), ವಸಂತ ವಿ. ಸಾಲ್ಯಾನ್ (5), ವಿನಯಕುಮಾರ್ ಸೊರಕೆ (1); ಬಿಜೆಪಿಯಿಂದ ಲಾಲಾಜಿ ಆರ್. ಮೆಂಡನ್ (2). ಸಾಲ್ಯಾನ್, ಸೊರಕೆ ಸಚಿವರಾದರು. ಶೆಟ್ಟಿ ಹಾಗೂ ಸಾಲ್ಯಾನ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
— ಮನೋಹರ ಪ್ರಸಾದ್