ಸುಳ್ಯ: ಅರೆ ವೋಟು ಬಾತಲ್ವ, ಯಾರ್ ಗೆಲ್ಲುವಾ… ನಗರದ ನಾಲ್ಕು ಮೂಲೆಗಳಲ್ಲಿ ಸುತ್ತಾಡಿದಾಗ ಜನರು ಮಾತೃಭಾಷೆಯಲ್ಲಿ ತಮ್ಮೊಳಗೆ ಪ್ರಶ್ನಿಸುತ್ತಿದ್ದ ರೀತಿ ಇದು…! 25,000 ಜನಸಂಖ್ಯೆ ಇರುವ ನಗರದಲ್ಲಿ ಚುನಾವಣೆ ಚರ್ಚೆಯದ್ದೇ ಪಾರುಪತ್ಯ. ಜಿದ್ದಾ ಜಿದ್ದಿನ ಕ್ಷೇತ್ರವಾಗಿ ಬದಲಾಗಿರುವ ಸುಳ್ಯದಲ್ಲಿ ಗೆಲ್ಲುವವರು ಯಾರು? ಕ್ಷೇತ್ರದಲ್ಲಿ ಮೂಲ ಸಮಸ್ಯೆಗಳಿಗೆ ಯಾಕೆ ಪರಿಹಾರ ಸಿಗುತ್ತಿಲ್ಲ. ಇವೆರೆಡು ಜನರೊಳಗಿನ ಚರ್ಚೆಯ ಪ್ರಮುಖ ವಸ್ತುಗಳು.
ರಾಜ್ಯದ ದೊರೆ ಯಾರಾಗಬಹುದು ಎಂಬ ಕುತೂಹಲ ಹೆಚ್ಚು ಮನೆ ಮಾಡಿದೆ. ಕೆಲ ವ್ಯಾಪಾರಸ್ಥರು ನಗರದೊಳಗಿನ ಸಮಸ್ಯೆಗಳ ಬಗ್ಗೆ ಉದಯವಾಣಿಯ ಜತೆ ಪ್ರಸ್ತಾವಿಸಿದ್ದುಂಟು. ಹಾಗೆಯೇ ಯಾರು ಗೆದ್ದರೂ ಇಷ್ಟೆ ಅಂತಾ ಕೆಲವರು ರಾಜಕೀಯದ ಬಗ್ಗೆ ನಿರುತ್ಸಾಹ ತೋರುತ್ತಾರೆ. ಮುಖ್ಯವಾಗಿ 30 ವರ್ಷದೊಳಗಿನ ಯುವ ಮತದಾರರು ಪಕ್ಷದ ನೆಲೆಗಟ್ಟಿನಲ್ಲೇ ಸೋಲು – ಗೆಲುವಿನ ಕುರಿತು ಗಂಭೀರ ಚರ್ಚೆಯಲ್ಲಿ ತೊಡಗಿರುವುದು ಸ್ಪಷ್ಟ. 40 ವಯಸ್ಸಿನ ಮೇಲ್ಪಟ್ಟ ಮತದಾರರು ಅಭಿವೃದ್ಧಿ ವಿಷಯಗಳ ಬಗ್ಗೆ ಮಾತನಾಡುತ್ತಾರೆ.
ಅತಂತ್ರ ವಿಧಾನಸಭೆ ಬರುವ ಲಕ್ಷಣ ಇದೆ. ರಾಜ್ಯ-ರಾಷ್ಟ್ರ ನಾಯಕರ ಹೇಳಿಕೆ ನೋಡುವಾಗ ಯಾವ ಪಕ್ಷಗಳ ಮೈತ್ರಿ ಆಗುತ್ತೆ ಅನ್ನುವ ಕುತೂ ಹಲವೂ ಇದೆ ಎಂದು ರಿಕ್ಷಾ ಚಾಲಕ ಶೇಖರ್ ತನ್ನೂರಿನ ರಾಜಕೀಯದ ಬಗ್ಗೆ ಪ್ರಸ್ತಾವಿಸುತ್ತಾರೆ. ಪೇಟೆಯಲ್ಲಿ ಟ್ರಾಫಿಕ್ ಸಿಕ್ಕಾಪಟ್ಟೆ ಇದೆ ಸರ್. ನಾವಿಲ್ಲಿ ಮೋದಿ, ರಾಹುಲ್ ಬಗ್ಗೆ ಮಾತನಾಡಿದರೆ ಏನು ಸುಖ? ನಗರದಲ್ಲಿನ ಸಂಚಾರ ದಟ್ಟಣೆಗೆ ಸೂಕ್ತ ವ್ಯವಸ್ಥೆ ಆಗಬೇಕು. ನಾವಿಲ್ಲಿ ವ್ಯಾಪಾರ ಮಾಡಲು ಬಂದಿದ್ದೇವೆ. ಗ್ರಾಹಕರು ಖರೀದಿಗೆ ಬರಬೇಕಲ್ವಾ ಎನ್ನುತ್ತಾರೆ ಗಾಂಧಿನಗರದ ಅಂಗಡಿಯೊಂದರ ಮಾಲಕ ಕಾರ್ತಿಕ್.
ರಾಜ್ಯ, ರಾಷ್ಟ್ರ ನಾಯಕರು ನಮ್ಮೂರಿಗೆ ಬಂದಿದ್ದಾರೆ. ಸರ್ ನೀವೇ ಹೇಳಿ, ಯಾರು ಗೆಲ್ಲಬಹುದು ಎಂದು ಮರು ಪ್ರಶ್ನೆ ಎಸೆಯುತ್ತಾರೆ ಬೇಕರಿ ಮಾಲಕ ರಂಜಿತ್ ಪೂಜಾರಿ. ನೋಡಿ ನಾನು ಓಟು ಹಾಕುತ್ತೇನೆ. ಯಾರು ಗೆಲ್ತಾರೆ, ಸೋಲ್ತಾರೆ ಅಂತಾ ನನಗೆ ಗೊತ್ತಿಲ್ಲ ಎಂದರು ಸಿಯಾಳ ವ್ಯಾಪಾರಿ ಅಂದುಂಞ. ನಾನು ಬೆಳ್ಳಾರೆ ನಿವಾಸಿ. ಇಲ್ಲಿ ಹೊಟೇಲ್ ಸಪ್ಲೈಯರು ಕೆಲಸ. 350ಕ್ಕೂ ಅಧಿಕ ಮಂದಿ ಊಟಕ್ಕೆ ಬರುತ್ತಾರೆ; ಬಹುಪಾಲು ಜನರದ್ದು ರಾಜಕೀಯದ್ದೇ ಚರ್ಚೆ. ನಾವು ಅವರ ಮಾತಿಗೆ ಕಿವಿಗೊಡುವುದು ಹೆಚ್ಚು ಎನ್ನುತ್ತಾರೆ ಸಪ್ಲೈಯರ್ ಜಗದೀಶ್. ಪರವಾಗಿಲ್ಲ, ಎಲ್ಲಿ ನೋಡಿದರೂ ಚರ್ಚೆಯ ಕಾವು ದಿನೇ ದಿನೇ ಏರುತ್ತಿದೆ. ಒಬ್ಬೊಬ್ಬರೇ ಸ್ಟಾರ್ ಪ್ರಚಾರಕರೂ ಸುಳ್ಯಕ್ಕೆ ಬರುತ್ತಿದ್ದಾರೆ, ಸಭೆಗಳು ನಡೆಯುತ್ತಿವೆ. ಇನ್ನು ಒಂಬತ್ತು ದಿನಗಳಲ್ಲಿ ಯಾವ ರೂಪ ಪಡೆದೀತು ಎನ್ನುವುದೇ ಕುತೂಹಲ.
— ಕಿರಣ್ ಕುಂಡಡ್ಕ