Advertisement

ಅತಂತ್ರ ಸರಕಾರ : ಯಾರಿಗೂ ಬಹುಮತವಿಲ್ಲವೆಂದ ಎರಡು ಸಮೀಕ್ಷೆಗಳು

09:08 AM Apr 24, 2018 | Team Udayavani |

ಹೊಸದಿಲ್ಲಿ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು 2 ಸಮೀಕ್ಷೆಗಳು ಭವಿಷ್ಯ ನುಡಿದಿವೆ. ವಿಶೇಷವೆಂದರೆ ಟೈಮ್ಸ್‌ನೌ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿದ್ದರೆ, ಎಬಿಪಿ ನ್ಯೂಸ್‌ ನ ಸಮೀಕ್ಷೆಯಲ್ಲಿ ಬಿಜೆಪಿ ಮುನ್ನಡೆ ಪಡೆದುಕೊಂಡಿದೆ. ಆದರೂ ಯಾವುದೇ ಪಕ್ಷಗಳು ಬಹುಮತಕ್ಕೆ ಬೇಕಾದ 113ರ ಅಂಕೆಯನ್ನು ಮುಟ್ಟಲು ಸಾಧ್ಯವಾಗಿಲ್ಲ. 2019ರಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಕರ್ನಾಟಕದ ಫ‌ಲಿತಾಂಶ ಭಾರೀ ಮಹತ್ವ ಪಡೆದಿದೆ.

Advertisement


ಟೈಮ್ಸ್‌ ನೌ- ವಿಎಂಆರ್‌ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ 91 ಸ್ಥಾನ ಪಡೆದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿ 89 ಸ್ಥಾನಗಳನ್ನು ಪಡೆಯುವ ಮೂಲಕ 2ನೇ ಸ್ಥಾನ ಪಡೆಯಲಿದೆ. ಜೆಡಿಎಸ್‌ 40 ಸ್ಥಾನ ಗಳಿಸಲಿದೆ. ಎಬಿಪಿ ಸುದ್ದಿ ವಾಹಿನಿ ಜೈನ್‌-ಲೋಕನೀತಿ-ಸಿ.ಎಸ್‌.ಡಿ.ಎಸ್‌. ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ  89-95 ಸ್ಥಾನ ಗಳಿಸಿ ಮೊದಲ ಸ್ಥಾನದಲ್ಲಿರಲಿದೆ. ಹಾಲಿ ಆಡಳಿತಾರೂಢ ಕಾಂಗ್ರೆಸ್‌ 85-91 ಸ್ಥಾನ ಪಡೆಯಲಿದೆ. ಜೆಡಿಎಸ್‌ 32-38 ಸ್ಥಾನ ಗಳಿಸಲಿದೆ.

ಜೆ.ಡಿ.ಎಸ್‌. ಕಿಂಗ್‌ಮೇಕರ್‌


ಎಬಿಪಿ ಚಾನೆಲ್‌ ಸಂಭಾವ್ಯ ಮೈತ್ರಿಕೂಟದ ಬಗ್ಗೆಯೂ ಬೆಳಕು ಚೆಲ್ಲಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಥವಾ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಕೂಟದ ಸರಕಾರ ರಚನೆಯಾಗಲಿದೆ ಎಂದು ಹೇಳಿಕೊಂಡಿದೆ. ಅಂದರೆ ಕಾಂಗ್ರೆಸ್‌ 88 ಮತ್ತು ಜೆಡಿಎಸ್‌ನ 35 ಸಹಿತ ಒಟ್ಟು 123 ಸ್ಥಾನ ಅಥವಾ ಬಿಜೆಪಿ 92 ಮತ್ತು ಜೆಡಿಎಸ್‌ನ  35 ಸೇರಿ ಸಂಖ್ಯಾಬಲ 127 ಆಗುತ್ತದೆ. ಹೀಗಾಗಿ ಜೆಡಿಎಸ್‌ ಪಾತ್ರ ನಿರ್ಣಾಯಕ ಎಂದಿದೆ.


ಇನ್ನು ಸಿಎಂ ಸಿದ್ದರಾಮಯ್ಯಗೆ ಶೇ.30ರಷ್ಟು ಮತಗಳು ಬಂದಿದ್ದು ಉತ್ತಮ ಸಿಎಂ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬಿಜೆಪಿಯ ಯಡಿಯೂರಪ್ಪಗೆ ಶೇ.25 ಮತ್ತು ಜೆಡಿಎಸ್‌ ಹುರಿಯಾಳು ಎಚ್‌.ಡಿ.ಕುಮಾರಸ್ವಾಮಿಗೆ ಶೇ.20ರಷ್ಟು ಮತಗಳು ಸಿಕ್ಕಿವೆ. ನರೇಂದ್ರ ಮೋದಿಯವರಿಗೆ ಶೇ.43ರಷ್ಟು ಬೆಂಬಲ ವ್ಯಕ್ತವಾದರೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ಶೇ.28ರಷ್ಟು ಮತಗಳು ಸಿಕ್ಕಿವೆ. ಟೈಮ್ಸ್‌ ನೌ ನಡೆಸಿದ ಸಮೀಕ್ಷೆಯಲ್ಲಿ ಮುಂಬಯಿ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ 23, ಕಾಂಗ್ರೆಸ್‌ಗೆ 21, ಜೆಡಿಎಸ್‌ಗೆ 21 ಸ್ಥಾನ ಸಿಕ್ಕಿದೆ. ಹಿಂದಿನ ಫ‌ಲಿತಾಂಶಕ್ಕೆ ಹೋಲಿಕೆ ಮಾಡಿದರೆ ಬಿಜೆಪಿಗೆ 10 ಸ್ಥಾನಗಳು ಹೆಚ್ಚಾಗಿವೆ.

ಕರಾವಳಿಯಲ್ಲಿ 3 ಸ್ಥಾನ ಹೆಚ್ಚಳ
ಕರಾವಳಿ ಕರ್ನಾಟಕದಲ್ಲಿ ಬಿಜೆಪಿಗೆ ಹಿಂದಿನ ಸಾಲಿಗಿಂತ ಮೂರು ಸ್ಥಾನ ಹೆಚ್ಚು ಸಿಗಲಿದ್ದರೆ, ಕಾಂಗ್ರೆಸ್‌ಗೆ 2 ಸ್ಥಾನ ಕಡಿಮೆಯಾಗಲಿದೆ. ಮಹತ್ವದ ಅಂಶವೆಂದರೆ ಬಿಎಸ್‌ಪಿ-ಜೆಡಿಎಸ್‌ ಮೈತ್ರಿಕೂಟಕ್ಕೆ 2 ಸ್ಥಾನ ಲಭಿಸಲಿದೆ. ಕರ್ನಾಟಕದಲ್ಲಿ ಈಗಲೇ ಲೋಕಸಭೆಗೂ ಚುನಾವಣೆ ನಡೆದರೆ ಬಿಜೆಪಿ 17, ಕಾಂಗ್ರೆಸ್‌ 9, ಜೆಡಿಎಸ್‌ 3 ಮತ್ತು ಇತರರು 2 ಸ್ಥಾನ ಜಯಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.



Advertisement
Advertisement

Udayavani is now on Telegram. Click here to join our channel and stay updated with the latest news.

Next