ಬೆಂಗಳೂರು: ಟಿಕೆಟ್ ಘೋಷಣೆಯಾದ ಕ್ಷೇತ್ರಗಳ ಬಿ.ಫಾರಂ ವಿತರಣೆ ಆರಂಭಿಸಿದ್ದ ಕಾಂಗ್ರೆಸ್ ಏಕಾಏಕಿಯಾಗಿ 3 ಕ್ಷೇತ್ರಗಳ
ಹಂಚಿಕೆಯನ್ನು ತಡೆ ಹಿಡಿದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಬಾದಾಮಿ ಕ್ಷೇತ್ರದ ಬಿ ಫಾರಂ ವಿತರಣೆ ತಡೆ ಹಿಡಿಯಲಾಗಿದೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಒತ್ತಡದಿಂದ ಜಗಳೂರು ಬಿ ಫಾರಂ ವಿತರಣೆ ಮಾಡಿಲ್ಲ ಎಂದು ಹೇಳಲಾಗಿದೆ. ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅಧ್ಯಕ್ಷರನ್ನು ಭೇಟಿ ಮಾಡಿ ಘೋಷಿತ ಅಭ್ಯರ್ಥಿ ಡಾ.ದೇವರಾಜ್‌ಗೆ ಬಿ. ಫಾರಂ ನೀಡದಂತೆ ಮನವಿ ಮಾಡಿಕೊಂಡರು. ಜಗಳೂರು ಕ್ಷೇತ್ರದ ಹಾಲಿ ಶಾಸಕ ಎಚ್.ಪಿ. ರಾಜೇಶ್ ಕೂಡ ಅಧ್ಯಕ್ಷರನ್ನು ಭೇಟಿ ಮಾಡಿ ಬಿ. ಫಾರಂ ವಿತರಿಸದಂತೆ ಮನವಿ ಮಾಡಿದರು.
ಚಂದ್ರಮೌಳಿಗೆ ವಿರೋಧ: ಮಡಿಕೇರಿ ಕ್ಷೇತ್ರದ ಟಿಕೆಟ್ ಪಡೆದಿರುವ ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್ ಚಂದ್ರಮೌಳಿಗೆ ಟಿಕೆಟ್ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಾವಿರಾರು ಕೋಟಿ ರೂ. ವಂಚನೆ ಮಾಡಿರುವ ಮೆಹೂಲ್ ಚೌಕ್ಸಿ ಪರ ವಕಾಲತ್ತು ವಹಿಸಿದ್ದರಿಂದ ಅವರಿಗೆ ಟಿಕೆಟ್ ನೀಡಿದರೆ ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮುಜುಗರವಾಗಲಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಸಂಚಾಲಕ ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದರು. ಆ ಹಿನ್ನೆಲೆಯಲ್ಲಿ ಚಂದ್ರಮೌಳಿಗೆ ಟಿಕೆಟ್ ಘೋಷಣೆಯಾಗಿದ್ದರೂ, ಬಿ. ಫಾರಂ ನೀಡದಂತೆ ಹೈ ಕಮಾಂಡ್ ತಡೆ ಹಿಡಿದಿದೆ ಎಂದು ತಿಳಿದು ಬಂದಿದೆ.