ಬೆಂಗಳೂರು: ವಿಧಾನಸಭೆ ಚುನಾವಣೆ ಟಿಕೆಟ್ ಪಡೆಯಲೂ ನಿರಾಸಕ್ತಿ ತೋರಿದ್ದ ಮಂಡ್ಯ ಶಾಸಕ ಅಂಬರೀಶ್ ಈಗ ಬಿ. ಫಾರಂ ಪಡೆಯಲೂ ಬಂದಿಲ್ಲ. ಹೀಗಾಗಿ ಖುದ್ದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಆಂಬರೀಷ್ ಮನೆಗೆ ಬಿ ಫಾರಂ ಕಳುಹಿಸಿದ್ದಾರೆ.
ಮಂಗಳವಾರ ಬೆಳಿಗ್ಗೆಯಿಂದಲೇ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ನಗರದ ಹೊರ ವಲಯದ ರೆಸಾರ್ಟ್‌ನಲ್ಲಿ ಕುಳಿತು ಅಭ್ಯರ್ಥಿಗಳಿಗೆ ಬಿ. ಫಾರಂ ಹಂಚಿಕೆ ಆರಂಭಿಸಿದ್ದರು. ಅಲ್ಲಿಂದಲೇ ಅಂಬರೀಶ್‌ಗೆ ಕರೆ ಮಾಡಿ, ಮಂಡ್ಯದಲ್ಲಿ ನಿಮಗೆ ಟಿಕೆಟ್ ಕೊಟ್ಟಿದ್ದೇವೆ. ಬಿ. ಫಾರಂ ಪಡೆದುಕೊಳ್ಳಿ ಎಂದು ಪರಮೇಶ್ವರ್ ಹೇಳಿದರು.ಅದಕ್ಕೆ ಅಂಬರೀಶ್ ಚಾನ್ಸೇಇಲ್ಲ, ನಾನು ಯಾವತ್ತೂ ಟಿಕೆಟ್‌ಗೆ ಬಿ ಫಾರಂಗೆ ಹುಡುಕಿಕೊಂಡು ಬಂದಿಲ್ಲ ಎಂದು ಉತ್ತರಿಸಿದರು ಎಂದು ಹೇಳಲಾಗಿದೆ.
ಆಸಕ್ತಿ ತೋರದ ಅಭ್ಯರ್ಥಿಗಳು: ನಾಮಪತ್ರ ಸಲ್ಲಿಕೆಯ ಆರಂಭದ ದಿನವೇ ಬಿ. ಫಾರಂ ನೀಡುತ್ತಿದ್ದರೂ, ಮಂಗಳವಾರ ಹಾಗೂ ಅಮವಾಸ್ಯೆಯ ಮಾರನೆ ದಿನವಾಗಿದ್ದರಿಂದ ಬಹುತೇಕರು ಬಿ.ಫಾರಂ ಪಡೆಯಲು ಹಿಂದೇಟು ಹಾಕಿದ್ದಾರೆ. ಅಲ್ಲದೇ ಬುಧವಾರ ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಇರುವುದರಿಂದ ಅವತ್ತು ಬಿ. ಫಾರಂ ಪಡೆದರೆ ಒಳ್ಳೆಯದು ಎಂಬ ನಂಬಿಕೆಯಿಂದ ಮಂಗಳವಾರ ಬಿ. ಪಾರಂ ಪಡೆದಿಲ್ಲ ಎಂದು ಹೇಳಲಾಗಿದೆ.ಮೊದಲ ದಿನ ಸಚಿವರಾದ ಯು.ಟಿ. ಖಾದರ್,ಆರ್.ವಿ ದೇಶಪಾಂಡೆ, ರೋಷನ್‌ಬೇಗ್ ಸೇರಿದಂತೆ 120 ಜನ ಅಭ್ಯರ್ಥಿಗಳು ಬಿ. ಫಾರಂ ಪಡೆದುಕೊಂಡಿದ್ದಾರೆ.
ಟಿಕೆಟ್ ವಂಚಿತರು ಕೊನೇ ಪ್ರಯತ್ನ ಎಂಬಂತೆ ನಾಯಕರ ಮೇಲೆ ಪ್ರಭಾವ ಬೀರುತ್ತಿದ್ದು ಮಂಗಳವಾರವೂ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ತಮ್ಮ ಕ್ಷೇತ್ರದಲ್ಲಿ ಘೋಷಣೆ ಮಾಡಿರುವ ಅಭ್ಯರ್ಥಿಯ ಬಿ. ಫಾರಂ ತಡೆ ಹಿಡಿಯುವಂತೆ ಒತ್ತಡ ಹೇರಿದರು. ಅಲ್ಲದೇ ತಮಗೇ ಬಿ. ಫಾರಂ ಕೊಡಿ ಎಂದು ಆಗ್ರಹಿಸಿದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಷ್ಮಾ ರಾಜಗೋಪಾಲ್‌ಗೆ ಬೊಮ್ಮನಹಳ್ಳಿ ಕ್ಷೇತ್ರದಿಂದ ಟಿಕೆಟ್ ನೀಡಿದ್ದಕ್ಕೆ ಸ್ಪರ್ಧೆಗೆ ಹಿಂದೇಟು ಹಾಕಿದ್ದರು. ಆದರೆ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾತುಕತೆ ನಡೆಸಿ, ಮನವೊಲಿಸಿದ ನಂತರ ಬೊಮ್ಮನಹಳ್ಳಿ ಕ್ಷೇತ್ರದ ಬಿ. ಫಾರಂ ಪಡೆದುಕೊಂಡಿದ್ದಾರೆ.
ಮಲ್ಲೇಶ್ವರ ಕ್ಷೇತ್ರದಲ್ಲಿ ಹಾಲಿ ಸಚಿವ ಎಂ.ಆರ್.ಸೀತಾರಾಂ ಬದಲಿಗೆ ತಮಗೆ ಟಿಕೆಟ್ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಮೊಮ್ಮಗ ಶ್ರೀಪಾದ್ ರೇಣು ಪಕ್ಷದ ರಾಜ್ಯಾಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ.
ಬಿಜೆಪಿಯ 2ನೇ ಪಟ್ಟಿ ಬಿಡುಗಡೆ ಆದ ಮೇಲೆ ನಾವು ಮತ್ತಷ್ಟು ಕಾನ್ಫಿಡೆಂಟ್ ಆಗಿದ್ದೇವೆ. ಬಿಜೆಪಿಯವರಿಗೆ ಅಭ್ಯರ್ಥಿಗಳ ಕೊರತೆ
ಕಾಡುತ್ತಿದೆ. ಪಕ್ಷದಲ್ಲಿನ ಬಂಡಾಯ ಶಮನ ಮಾಡಲು ನಾವೇ ಖುದ್ದಾಗಿ ಮಾತನಾಡುತ್ತಿದ್ದೇವೆ.
– ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ಕೆಪಿಸಿಸಿ ನಡೆಸಿದ ಸಮೀಕ್ಷೆಯಲ್ಲಿ ನಾನೊಬ್ಬನೇ ಅಲ್ಲ 32 ಜನ ಶಾಸಕರು ಸೋಲುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಿತ್ತು. ಬೇರೆ ಶಾಸಕರಿಗೆ ಟಿಕೆಟ್ ನೀಡಿದ್ದಾರೆ.
– ಶಿವಮೂರ್ತಿ ನಾಯ್ಕ,
ಟಿಕೆಟ್ ವಂಚಿತ ಹಾಲಿ ಶಾಸಕ