Advertisement
ಇದನ್ನೂ ಓದಿ:ಪ್ರಧಾನಿ ಮೋದಿ ಪದವಿಯ ವಿವರ ಪ್ರಶ್ನೆ;ಕೇಜ್ರಿವಾಲ್‌ಗೆ ದಂಡ ಹಾಕಿದ ಕೋರ್ಟ್
Related Articles
Advertisement
ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರ ಚಾಮರಾಜನಗರದ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ವರುಣಾ ನೂತನ ವಿಧಾನಸಭಾ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿತ್ತು.
ನೂತನ ವರುಣಾ ವಿಧಾನಸಭಾ ಕ್ಷೇತ್ರಕ್ಕೆ 2008ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ 71,908 ಮತ ಪಡೆದು ಜಯಗಳಿಸಿದ್ದರು. ಪ್ರತಿಸ್ಪರ್ಧಿ ಬಿಜೆಪಿಯ ಎಲ್.ರೇವಣಸಿದ್ದಯ್ಯ 53,071 ಮತ ಪಡೆದಿದ್ದರು ಜೆಡಿಎಸ್ ನ ಎಚ್.ವಿ.ಕೃಷ್ಣಸ್ವಾಮಿ ಕೇವಲ 4,133 ಮತ ಗಳಿಸಿದ್ದರು.
2013ರಲ್ಲಿ ವರುಣಾ ಕ್ಷೇತ್ರಕ್ಕೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಸಿದ್ದರಾಮಯ್ಯ ಅವರು 74,385 ಮತ ಪಡೆದು ಗೆಲುವು ಸಾಧಿಸಿದ್ದರು. ಕೆಜೆಪಿಯ ಕಾಪು ಸಿದ್ದಲಿಂಗಸ್ವಾಮಿ 54,744 ಮತ ಪಡೆದಿದ್ದರು. ಜೆಡಿಎಸ್ ನ ಚೆಲುವರಾಜ್ 2,686 ಮತ ಪಡೆದು ಠೇವಣಿ ಕಳೆದುಕೊಂಡಿದ್ದರು.
2018ರಲ್ಲಿ ನಡೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಪುತ್ರ ವ್ಯಾಮೋಹದಿಂದ ವರುಣಾ ಕ್ಷೇತ್ರವನ್ನು ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಅಂದಿನ ಹೈವೋಲ್ಟೇಜ್ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿ ದೇವೇಗೌಡರ ವಿರುದ್ಧ ಪರಾಭವಗೊಂಡು, ಬಾದಾಮಿಯಲ್ಲಿ ಗೆಲುವು ಸಾಧಿಸುವ ಮೂಲಕ ಸೋಲಿನ ತೂಗುಗತ್ತಿಯಿಂದ ಪಾರಾಗಿದ್ದರು. ಆದರೆ ವರುಣಾ ಕ್ಷೇತ್ರದಲ್ಲಿ ಪುತ್ರ ಡಾ.ಯತೀಂದ್ರ ಜಯಭೇರಿ ಬಾರಿಸುವ ಮೂಲಕ ವರುಣಾ ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದ್ದರು.
2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಲವಾರು ಕ್ಷೇತ್ರಗಳ ಹುಡುಕಾಟದ ನಂತರ ಸಿದ್ದರಾಮಯ್ಯನವರು ಕೋಲಾರ ಮತ್ತು ವರುಣಾ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬುದು ನಿಗದಿಯಾಗಿತ್ತು. ಆದರೆ ರಾಹುಲ್ ಗಾಂಧಿಯ ಸೂಚನೆ ಮೇರೆಗೆ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದು, ಅದರಂತೆ ಕಾಂಗ್ರೆಸ್ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ವರುಣಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಹೆಸರನ್ನು ಘೋಷಿಸಿದೆ. ಜೊತೆಗೆ ಕೋಲಾರದಿಂದಲೂ ಸ್ಪರ್ಧಿಸುತ್ತಾರೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ. ಡಾ.ಯತೀಂದ್ರ ತಂದೆ ಸಿದ್ದರಾಮಯ್ಯನವರಿಗಾಗಿ ಕ್ಷೇತ್ರವನ್ನು ತ್ಯಾಗ ಮಾಡಿದ್ದಾರೆ.
ವರುಣಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಹೆಸರು ಪ್ರಕಟಗೊಂಡ ಬೆನ್ನಲ್ಲೇ ಭಾರತೀಯ ಜನತಾ ಪಕ್ಷ ಇದೀಗ ಬಿ.ವೈ.ವಿಜಯೇಂದ್ರ ಹೆಸರನ್ನು ತೇಲಿ ಬಿಟ್ಟಿದೆ. ಹೈಕಮಾಂಡ್ ವಿಜಯೇಂದ್ರಗೆ ವರುಣಾ ಕ್ಷೇತ್ರದಲ್ಲಿ ಟಿಕೆಟ್ ನೀಡುತ್ತದೆಯೋ ಅಥವಾ ಶಿಕಾರಿಪುರದ ಟಿಕೆಟ್ ಘೋಷಿಸುತ್ತದೆಯೋ ಎಂಬುದು ಕಾದುನೋಡಬೇಕಾಗಿದೆ.
ಶಿಕಾರಿಪುರ ಬಿಜೆಪಿ ಭದ್ರಕೋಟೆ:
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಶಿಕಾರಿಪುರ ಈ ಮೊದಲು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 1962ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ವೀರಪ್ಪ ಗೆಲುವು ಸಾಧಿಸಿದ್ದರು. 1967ರಲ್ಲಿ ಸಂಯುಕ್ತ ಸೋಶಿಯಲಿಸ್ಟ್ ಪಕ್ಷದ ಜಿ.ಬಸವನಪ್ಪ ಜಯ ಗಳಿಸಿದ್ದರು. ಬಳಿಕ 1972ರಲ್ಲಿ ಕಾಂಗ್ರೆಸ್ ನ ಕೆ.ವೆಂಕಟಪ್ಪ ವಿಜಯದ ನಗು ಬೀರಿದ್ದರು. 1983ರಿಂದ ಶಿಕಾರಿಪುರ ಕಾಂಗ್ರೆಸ್ ಕೈತಪ್ಪಿದ್ದು, ಬಿಜೆಪಿ ಪಾಲಾಗಿತ್ತು. ಅದಕ್ಕೆ ಕಾರಣರಾದವರು ಬಿ.ಎಸ್.ಯಡಿಯೂರಪ್ಪ.
1985, 1989, 1994ರಲ್ಲಿ ಬಿಎಸ್ ಯಡಿಯೂರಪ್ಪ ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದರು. 1999ರಲ್ಲಿ ಕಾಂಗ್ರೆಸ್ ನ ಬಿ.ಎನ್.ಮಹಾಲಿಂಗಪ್ಪ ಗೆಲುವು ಸಾಧಿಸಿದ್ದು, ಬಿಎಸ್ ವೈ ಪರಾಜಯಗೊಂಡಿದ್ದರು. ತದನಂತರ 2004, 2008, 2013ರಲ್ಲಿ ಮತ್ತೆ ಬಿಎಸ್. ಯಡಿಯೂರಪ್ಪ ಗೆಲುವು ಸಾಧಿಸಿದ್ದರು. 2014ರಲ್ಲಿ ಪುತ್ರ ಬಿವೈ ರಾಘವೇಂದ್ರ ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದ್ದರು. 2018ರಲ್ಲಿ ಬಿಎಸ್ ಯಡಿಯೂರಪ್ಪ ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿರುವ ಬಿಎಸ್ ವೈ, 2ನೇ ಪುತ್ರ ಬಿ.ವೈ.ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧಿಸಲಿದ್ದಾರೆ ಎಂಬುದಾಗಿ ಘೋಷಿಸಿದ್ದರು. ಈ ಹಿಂದೆ ನಡೆದ ಚುನಾವಣೆಯ ವಿಶ್ಲೇಷಣೆಯ ಪ್ರಕಾರ ಶಿಕಾರಿಪುರ ಬಿಜೆಪಿ ಹಾಗೂ ವರುಣಾ ಕ್ಷೇತ್ರ ಕಾಂಗ್ರೆಸ್ ಹಿಡಿತದಲ್ಲಿದೆ ಎಂಬುದು ಸ್ಪಷ್ಟ. ಆದರೆ ಜಿದ್ದಾಜಿದ್ದಿನ ರಾಜಕೀಯದಲ್ಲಿ ಮತದಾರ ಯಾರ ಕೈಹಿಡಿಯಲಿದ್ದಾನೆ ಎಂಬುದು ಇನ್ನಷ್ಟು ಕುತೂಹಲದ ಸಂಗತಿಯಾಗಿದೆ.