ಬೆಂಗಳೂರು: ನಗರದ ಹೊರವಲಯದಲ್ಲಿರುವ ಸುಗಂಧ ದ್ರವ್ಯ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಮೂವರನ್ನು ಬಲಿತೆಗೆದುಕೊಂಡ ಘಟನೆ ವಿಧಾನಸಭೆಯ ಸೋಮವಾರದ ಕಲಾಪದಲ್ಲಿ ನಗರದ ವಸತಿ ಪ್ರದೇಶಗಳಲ್ಲಿನ ಅಕ್ರಮ ಕಾರ್ಖಾನೆಗಳ ಬಗ್ಗೆ ಚರ್ಚೆಗೆ ಕಾರಣವಾಯಿತು.
ಐವರು ಗಾಯಗೊಂಡಿರುವ ಬೆಂಕಿ ಅವಘಡವನ್ನು ಪ್ರಸ್ತಾಪಿಸಿದ ಪ್ರತಿಪಕ್ಷ ಬಿಜೆಪಿ, ನಗರದಲ್ಲಿನ ವಸತಿ ಪ್ರದೇಶಗಳಲ್ಲಿ ಅಕ್ರಮ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು ನಿವಾಸಿಗಳಿಗೆ ಅಪಾಯವನ್ನುಂಟುಮಾಡುತ್ತಿದೆ ಎಂದು ಆರೋಪಿಸಿತು.
ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಕಳೆದ ಕೆಲವು ತಿಂಗಳುಗಳಲ್ಲಿ ನಗರದಲ್ಲಿ ನಡೆದ ಐದನೇ ಘಟನೆ ಇದಾಗಿದ್ದು, ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಬೆಂಗಳೂರು ಹೊರವಲಯದ ಅತ್ತಿಬೆಲೆ ಟೌನ್‌ನಲ್ಲಿ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ದೊಡ್ಡ ಅಗ್ನಿ ದುರಂತ ಮೊದಲನೆಯದು. ನಗರದಲ್ಲಿ ಜನವಸತಿ ಪ್ರದೇಶಗಳಲ್ಲಿ ಹಲವು ಅಕ್ರಮ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ವಾಸಿಸುತ್ತಿರುವವರು ಇಂತಹ ಅವಘಡಗಳಿಗೆ ಗುರಿಯಾಗುತ್ತಿದ್ದಾರೆ ಎಂದು ಗಮನ ಸೆಳೆದರು.
ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಮಾತನಾಡಿ, ಸಾವಿಗೀಡಾದವರ ಸಂಬಂಧಿಕರು ಮತ್ತು ಗಾಯಗೊಂಡವರು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದವರಾಗಿರುವುದರಿಂದ ಅವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರಿನಲ್ಲಿ ಅಗ್ನಿ ಸುರಕ್ಷತಾ ಕಾರ್ಯವಿಧಾನಗಳಿಗೆ ಸರಕಾರ ಆದ್ಯತೆ ನೀಡಲಿದೆ ಎಂದರು.
ಬೆಂಗಳೂರಿನಿಂದ ಸುಮಾರು 50 ಕಿಮೀ ದೂರದಲ್ಲಿರುವ ರಾಮನಗರದ ಜಿಲ್ಲಾ ಕೇಂದ್ರ ಪಟ್ಟಣದಲ್ಲಿ ಭಾನುವಾರ ನಡೆದ ಘಟನೆಯಲ್ಲಿ ಕಾರ್ಖಾನೆಯು ಬೆಂಕಿಗೆ ಆಹುತಿಯಾಗಿದ್ದು, ದೊಡ್ಡ ಸ್ಫೋಟಗಳು ಜನರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು.
“ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಮೃತರಲ್ಲಿ ಕಾರ್ಖಾನೆಯ ಮಾಲಕ ಕೂಡ ಸೇರಿದ್ದು, ಗಾಯಾಳುಗಳನ್ನು ಗುರುತಿಸಬೇಕಿದೆ. ಕಾರ್ಖಾನೆಯನ್ನು ನಡೆಸಲು ತನ್ನ ಆಸ್ತಿಯನ್ನು ಗುತ್ತಿಗೆ ಪಡೆದ ಜಮೀನು ಮಾಲೀಕರಿಗಾಗಿ ನಾವು ಹುಡುಕುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.