Advertisement

Karnataka: ವಿಪಕ್ಷಗಳ ಗೈರಿನಲ್ಲೇ 5 ಮಸೂದೆಗಳಿಗೆ ಅಂಗೀಕಾರ

08:46 PM Jul 20, 2023 | Team Udayavani |

ಬೆಂಗಳೂರು: ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರ ಗೈರುಹಾಜರಿಯಲ್ಲೇ ಐದು ಪ್ರಮುಖ ಮಸೂದೆಗಳಿಗೆ ಗುರುವಾರ ಮೇಲ್ಮನೆ ಅಂಗೀಕಾರ ನೀಡಿತು.

Advertisement

ವಿಪಕ್ಷಗಳಿಲ್ಲದೆ ನಡೆದ ಸದನದಲ್ಲಿ ಒಂದು ದಿನದ ಹಿಂದಷ್ಟೇ ವಿಧಾನಸಭೆಯಲ್ಲಿ ಅಂಗೀಕಾರಗೊಂಡು ಬಂದಿದ್ದ ಐದೂ ಮಸೂದೆಗಳ ಅನುಮೋದನೆಗಾಗಿ ಆಯಾ ಇಲಾಖೆ ಸಚಿವರು ಪ್ರಸ್ತಾವ ಸಲ್ಲಿಸಿದರು. ಬಿಜೆಪಿಯ ಎಚ್‌. ವಿಶ್ವನಾಥ್‌ ಹಾಗೂ ಜೆಡಿಎಸ್‌ನಿಂದ ಮರಿತಿಬ್ಬೇಗೌಡ ಮಾತ್ರ ಉಪಸ್ಥಿತರಿದ್ದರು. ಅಲ್ಲದೆ, ಮಸೂದೆ ಮೇಲಿನ ಚರ್ಚೆಯಲ್ಲೂ ಸಕ್ರಿಯವಾಗಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ಸಣ್ಣ ಮತ್ತು ಅತಿಸಣ್ಣ ರೈತರು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳು ದಾಖಲಿಸಿರುವ ಅಥವಾ ದೀರ್ಘ‌ಕಾಲದಿಂದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ದಿನದ ವಿಚಾರಣೆ ಪಟ್ಟಿಯಲ್ಲಿ ಆದ್ಯತೆ ಮೇರೆಗೆ ತೆಗೆದುಕೊಂಡು, ಗರಿಷ್ಠ ಆರು ತಿಂಗಳಲ್ಲಿ ಇತ್ಯರ್ಥಪಡಿಸುವ “ಸಿವಿಲ್‌ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಮಸೂದೆ- 2023′, ರಾಜ್ಯ ನ್ಯಾಯಾಲಯಗಳು ಮತ್ತು ಶಾಸನಬದ್ಧ ನ್ಯಾಯಾಧಿಕರಣಗಳ ಮುಂದೆ ಸರಕಾರಿ ವ್ಯಾಜ್ಯಗಳನ್ನು ನಡೆಸುವವರಿಗೆ ದಕ್ಷತೆ ಮತ್ತು ಜವಾಬ್ದಾರಿ ಹೆಚ್ಚಿಸುವ “ಕರ್ನಾಟಕ ಸರಕಾರಿ ವ್ಯಾಜ್ಯ ನಿರ್ವಹಣೆ ಮಸೂದೆ- 2023’ಕ್ಕೆ ಒಪ್ಪಿಗೆ ನೀಡಲಾಯಿತು.

ಭೂ ಕಂದಾಯ ತಿದ್ದುಪಡಿ
ಅದೇ ರೀತಿ, ವಿವಿಧ ಉದ್ದೇಶಗಳಿಗೆ ಜಮೀನುಗಳನ್ನು ಪರಿವರ್ತನೆ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸುವ “ಕರ್ನಾಟಕ ಭೂಕಂದಾಯ (ತಿದ್ದುಪಡಿ) ಮಸೂದೆ- 2023′ ಹಾಗೂ ನಕಲಿ ದಾಖಲೆಗಳನ್ನು ತಡೆಯಲು ಮತ್ತು ಅಂತಹ ಹಕ್ಕುಗಳಲ್ಲಿ ಭಾಗಿಯಾಗುವ ಅಧಿಕಾರಿಗಳು, ಸಾರ್ವಜನಿಕರಿಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ- 2023ಕ್ಕೆ ಅಂಗೀಕಾರಗೊಂಡಿತು.
ಮಸೂದೆಗಳ ಬಗ್ಗೆ ಸದಸ್ಯರಾದ ಜಗದೀಶ ಶೆಟ್ಟರ್‌, ಯು.ಬಿ. ವೆಂಕಟೇಶ್‌, ಮರಿತಿಬ್ಬೇಗೌಡ, ಎಚ್‌. ವಿಶ್ವನಾಥ್‌, ನಜೀರ್‌ ಅಹಮ್ಮದ್‌, ಪ್ರಕಾಶ ಹುಕ್ಕೇರಿ ಮತ್ತಿತರರು ಮಾತನಾಡಿದರು.

ವರ್ಷಕ್ಕೆ 10 ಸಾವಿರ ಕೇಸುಗಳಲ್ಲಿ ಸರಕಾರಕ್ಕೆ ಸೋಲು!
ಪ್ರತಿ ವರ್ಷ ಸರಾಸರಿ ಹತ್ತು ಸಾವಿರ ವಿವಿಧ ಪ್ರಕಾರದ ಸಿವಿಲ್‌ ವ್ಯಾಜ್ಯಗಳಲ್ಲಿ ಸರಕಾರಕ್ಕೆ ಸೋಲಾಗುತ್ತಿದೆ. ಕ್ರಿಮಿನಲ್‌ ಮೊಕದ್ದಮೆಗಳಲ್ಲಂತೂ ಶಿಕ್ಷೆಯಾಗುವ ಪ್ರಮಾಣ ಶೇ. 3ಕ್ಕಿಂತ ಕಡಿಮೆ. ಇದು ನಮ್ಮ ವಕೀಲರು ಮತ್ತು ಕಾನೂನು ವಿಭಾಗ ಕಾರ್ಯನಿರ್ವಹಿಸುವ ಪರಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಬೇಸರ ವ್ಯಕ್ತಪಡಿಸಿದರು.

Advertisement

ಮೇಲ್ಮನೆಯಲ್ಲಿ ಸರಕಾರಿ ವ್ಯಾಜ್ಯ ನಿರ್ವಹಣೆ ಮಸೂದೆ- 2023 ಹಾಗೂ ಸಿವಿಲ್‌ ಪ್ರಕ್ರಿಯೆ ಸಂಹಿತೆ (ಕರ್ನಾಟಕ ತಿದ್ದುಪಡಿ) ಮಸೂದೆ- 2023 ಅಂಗೀಕಾರಕ್ಕೆ ಪ್ರಸ್ತಾವ ಮಂಡಿಸಿ ಅವರು ಈ ಅಸಹಾಯಕತೆ ವ್ಯಕ್ತಪಡಿಸಿದರು.

ಕಳೆದ ಒಂದು ದಶಕದಲ್ಲಿ 1.13 ಲಕ್ಷ ಪ್ರಕರಣಗಳಲ್ಲಿ ಸರಕಾರಕ್ಕೆ ಸೋಲಾಗಿದೆ. ಜಿಲ್ಲಾ ನ್ಯಾಯಾಲಯಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ 26,512 ಪ್ರಕರಣಗಳಲ್ಲಿ ಸೋಲಾಗಿದೆ. ಇವೆಲ್ಲವೂ ಸಿವಿಲ್‌ ವ್ಯಾಜ್ಯಗಳಾಗಿವೆ. ಕ್ರಿಮಿನಲ್‌ ಮೊಕದ್ದಮೆಗಳ ವಿಚಾರದಲ್ಲಂತೂ ಹೇಳುವಂತಿಲ್ಲ. ದಾಖಲಾಗುವ ವಿವಿಧ ಪ್ರಕಾರದ ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿ ವಿರುದ್ಧದ ಕೇಸು ಸಾಬೀತಾಗಿ ಶಿಕ್ಷೆಯಾಗುವ ಪ್ರಮಾಣ ಶೇ. 3ಕ್ಕಿಂತ ಕಡಿಮೆ ಎಂದರು.

ಕಳೆದ ಮೂರು ವರ್ಷಗಳಲ್ಲಿ ಸರಕಾರದ ವಿರುದ್ಧ ವಿವಿಧ ವಿಷಯಗಳಲ್ಲಿ ದಾಖಲಾದ ದೂರುಗಳ ಸಂಖ್ಯೆ 1,98,363 ಆಗಿದ್ದು, ಇದೇ ಅವಧಿಯಲ್ಲಿ ಸರಕಾರ ದಾಖಲಿಸಿರುವ ಕೇಸುಗಳ ಸಂಖ್ಯೆ 44,349 ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next