ವಿಜಯಪುರ: ಕೋವಿಡ್ ಕಾಲಘಟ್ಟದಲ್ಲಿ ತಂದೆಯನ್ನು ಕಳೆದುಕೊಂಡು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.96 ರಷ್ಟು ಅಂಕ ಪಡೆದಿದ್ದ ವೇದಾಂತ ನಾವಿ, ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಗಳಿಸುವ ಮೂಲಕ ಬಸವನಾಡಿಗೆ ಕೀರ್ತಿ ತಂದಿದ್ದಾನೆ.
ಬುಧವಾರ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ವಿಜಯಪುರ ಜಿಲ್ಲೆ ಶೇ.94.89 ರಷ್ಟು ಫಲಿತಾಂಶ ಪಡೆದಿದ್ದು, ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನದ ಮೂಲಕ ಉತ್ತಮ ಸ್ಥಾನ ಪಡೆದಿದೆ.
ಈ ಮಧ್ಯೆ ಎಸ್.ಎಸ್. ಪದವಿ ಪೂರ್ವ ಕಾಲೇಜಿನ ವೇದಾಂತ ನಾವಿ ಎಂಬ ವಿದ್ಯಾರ್ಥಿ ಕಲಾ ವಿಭಾಗದಲ್ಲಿ 600/596. ಅಂಕಗಳೊಂದಿಗೆ ದ್ವಿತೀಯ ರ‍್ಯಾಂಕ್ ಗಳಿಸಿ, ವಿಶೇಷ ಸಾಧನೆ ಮಾಡಿದ್ದಾನೆ.
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಕಲಬಿಳಗಿ ಗ್ರಾಮದ ವೇದಾಂತ ಕೋವಿಡ್ ಕಾಲಘಟ್ಟದಲ್ಲಿ ತಂದೆಯನ್ನು ಕಳೆದುಕೊಂಡಿದ್ದ. ಕುಟುಂಬದ ಸ್ವಾದೀನದಲ್ಲಿದ್ದರೂ 5 ಎಕರೆ ಜಮೀನಿದ್ದರೂ ಕೋರ್ಟ್ ವ್ಯಾಜ್ಯದಲ್ಲಿದೆ.
ಜಮೀನಿಂದ ಬರುವ ಲೀಸ್ ನ ವಾರ್ಷಿಕ 40 ಸಾವಿರ ರೂ. ಕುಟುಂಬಕ್ಕೆ ಆದಾಯ. ಬಡತನದ ಕಾರಣದಿಂದ ವಿಜಯಪುರ ನಗರದ ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ. ಆರಂಭದಲ್ಲಿ ತಮ್ಮ ಊರಿನಿಂದ ನಿತ್ಯವೂ ಕಾಲೇಜಿಗೆ ಬಂದು ಹೋಗುತ್ತಿದ್ದ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಕಾರಣ ಸರ್ಕಾರಿ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಯಮದಲ್ಲಿ ಪ್ರವೇಶ ಸಿಕ್ಕಿತ್ತು.
ಉದಯವಾಣಿ ಜೊತೆ ಸಂತಸ ಹಂಚಿಕೊಂಡ ವೇದಾಂತ, ಕೌಟುಂಬಿಕ ಆರ್ಥಿಕ ಮುಗ್ಗಟ್ಟಿನ ಮಧ್ಯೆಯೂ ತಾಯಿಯ ಆಶಯ, ಚಿಕ್ಕನ ಒತ್ತಾಸೆ, ಉಪನ್ಯಾಸಕರ ಮಾರ್ಗದರ್ಶನ, ಸತತ ಪರಿಶ್ರಮ, ಏಕಾಗ್ರತೆಯ ಓದು ನನ್ನ ಸಾಧನೆಗೆ ಕಾರಣ ಎಂದು ವಿವರಿಸುತ್ತಾನೆ.
ಫಲಿತಾಂಶ ಸಂತಸ ತಂದಿದೆ, ಉನ್ನತ ಶಿಕ್ಷಣ ಪಡೆಯುವುದು ನನ್ನ ಕನಸು ಎನ್ನುವ ವೇದಾಂತ, ಅಕ್ಕನ ಮದುವೆ ಮಾಡಬೇಕು ಎನ್ನುವುದು ಸೇರಿದಂತೆ ಕುಟುಂಬದ ಹೊಣೆ ನನ್ನ ಮೇಲಿದ್ದು, ನಿಭಾಯಿಸುವತ್ತ ಚಿತ್ತ ನೆಡಬೇಕಿದೆ ಎನ್ನುತ್ತಾನೆ.