Advertisement

ಪಿಯು ಫ‌ಲಿತಾಂಶದಲ್ಲಿ ದಾಖಲೆ ಏರಿಕೆ​​​​​​​

06:45 AM May 01, 2018 | Team Udayavani |

ಬೆಂಗಳೂರು: ಕಳೆದ 10 ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಪಿಯು ಫ‌ಲಿತಾಂಶದಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಂದರೆ ಕಳೆದ ಬಾರಿಗಿಂತ ಶೇ.7.18 ರಷ್ಟು ಹೆಚ್ಚಳವಾಗಿದ್ದು, 2017ರಲ್ಲಿ ಶೇ.52ರಷ್ಟು ಫ‌ಲಿತಾಂಶ ದಾಖಲಾಗಿತ್ತು. ಅದೇ 2016ರಲ್ಲಿ ಶೇ.57ರಷ್ಟು ಫ‌ಲಿತಾಂಶ ಬಂದಿದ್ದರೆ, ಮಾರನೇ ವರ್ಷಕ್ಕೆ ಇದು ಶೇ.5 ರಷ್ಟು ಇಳಿಕೆಯಾಗಿತ್ತು. 2008ರ ನಂತರ ಒಂದೇ ವರ್ಷ ಶೇ.7ರಷ್ಟು ಏರಿಕೆಯಾಗಿರುವುದು ಇದೇ ಮೊದಲು.

Advertisement

ಪರೀಕ್ಷೆ ಬರೆದ 6.85 ಲಕ್ಷ ವಿದ್ಯಾರ್ಥಿಗಳಲ್ಲಿ 4.08 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ.52.30ರಷ್ಟು ಬಾಲಕರು ಹಾಗೂ ಶೇ.67.11ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರಬಲ ಸ್ಪರ್ಧೆ ನೀಡಿದ್ದಾರೆ.

ಗ್ರಾಮೀಣದ ಭಾಗದ ವಿದ್ಯಾರ್ಥಿಗಳು ಶೇ.59.95 ಹಾಗೂ ನಗರ ಪ್ರದೇಶದ ಶೇ. 59.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಮಾಧ್ಯಮವಾರು ಫ‌ಲಿತಾಂಶದಲ್ಲಿ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳೇ ಮುಂದಿದ್ದಾರೆ.

ದಕ್ಷಿಣ ಕನ್ನಡ ಮುಂದೆ: ಜಿಲ್ಲಾವಾರು ಫ‌ಲಿತಾಂಶದಲ್ಲಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ ಹಾಗೂ ಕೊಡಗು ತೃತೀಯ ಸ್ಥಾನದಲ್ಲಿದೆ. ಉತ್ತರಕನ್ನಡ ಮತ್ತು ಶಿವಮೊಗ್ಗ ಕ್ರಮವಾಗಿ 5 ಮತ್ತು 6ನೇ ಸ್ಥಾನದಲ್ಲಿದೆ. ಚಿಕ್ಕೋಡಿ ಕೊನೆಯ ಸ್ಥಾನ ಹಾಗೂ ಬೀದರ್‌, ಕಲಬುರಗಿ, ಬೆಳಗಾವಿ ಕ್ರಮವಾಗಿ ಚಿಕ್ಕೋಡಿಯ ಹಿಂದಿನ ಸ್ಥಾನದಲ್ಲಿದೆ.

ಸರ್ಕಾರಿ ಪಿಯು ಕಾಲೇಜಿನ ಶೇ.48.95, ಅನುದಾನಿತ ಪಿಯು ಕಾಲೇಜಿನ ಶೇ.55.78, ಅನುದಾನ ರಹಿತ ಪಿಯು ಕಾಲೇಜಿನ ಶೇ.67.96, ಪಾಲಿಕೆ ವ್ಯಾಪ್ತಿಯ ಪಿಯು ಕಾಲೇಜಿನ ಶೇ.50.89 ಹಾಗೂ ಅವಿಭಜಿತ ಪಿಯು ಕಾಲೇಜಿನ ಶೇ.65.82ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. 68 ಕಾಲೇಜುಗಳು ನೂರಕ್ಕೆ 100ರಷ್ಟು ಹಾಗೂ 118 ಕಾಲೇಜುಗಳು ಶೂನ್ಯ ಫ‌ಲಿತಾಂಶ ಪಡೆದಿದೆ.

Advertisement

ಕಳೆದ ವರ್ಷಕ್ಕೆ ಹೋಲಿಸಿದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಒಬಿಸಿ ಹಾಗೂ ಸಾಮಾನ್ಯ ವರ್ಗದ
ವಿದ್ಯಾರ್ಥಿಗಳ ಫ‌ಲಿತಾಂಶದಲ್ಲೂ ಗಣನೀಯ ಏರಿಕೆಯಾಗಿದೆ. ಎಸ್ಸಿ ವಿದ್ಯಾರ್ಥಿಗಳಲ್ಲಿ ಶೇ.9ರಷ್ಟು, ಎಸ್ಟಿ ವಿದ್ಯಾರ್ಥಿಗಳಲ್ಲಿ ಶೇ.8ರಷ್ಟು ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳಲ್ಲಿ ಶೇ.8ರಷ್ಟು ಏರಿಕೆ ಕಂಡಿದೆ.

ಮರುಮೌಲ್ಯಮಾಪನ
ಉತ್ತರ ಪತ್ರಿಕೆಯ ಸ್ಕ್ಯಾನಿಂಗ್‌ ಪ್ರತಿಗಾಗಿ ಶುಲ್ಕ 530ರೂ. ಪಾವತಿಸಿ ಮೇ 7ರೊಳಗೆ ಅರ್ಜಿ ಸಲ್ಲಿಸಬಹುದು. ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಪ್ರತಿ ವಿಷಯಕ್ಕೆ 1670 ರೂ. ಶುಲ್ಕ ನಿಗದಿ ಮಾಡಿದ್ದು, ಅರ್ಜಿ ಸಲ್ಲಿಸಲು ಮೇ.14 ಕೊನೆಯ ದಿನವಾಗಿದೆ.

ಅನುತ್ತೀರ್ಣ ಅಭ್ಯರ್ಥಿಗಳು ಮುಂದಿನ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮರುಮೌಲ್ಯಮಾಪನದ ಫ‌ಲಿತಾಂಶಕ್ಕಾಗಿ ಕಾಯಬಾರದು. ಅಂಕಗಳ ಮರು ಎಣಿಕೆಗೆ ಶುಲ್ಕ ಇರುವುದಿಲ್ಲ ಎಂದು ಸಿ.ಶಿಖಾ ಅವರು ಮಾಹಿತಿ ನೀಡಿದರು.

ಪೂರಕ ಪರೀಕ್ಷೆ
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್‌ನಲ್ಲಿ ಪೂರಕ ಪರೀಕ್ಷೆ ನಡೆಯಲಿದೆ. ಮೇ. 15ರೊಳಗೆ ಅರ್ಜಿ ಸಲ್ಲಿಸಬೇಕು. ಒಂದು ವಿಷಯಕ್ಕೆ 140 ರೂ., ಎರಡು ವಿಷಯಕ್ಕೆ 270 ರೂ., ಮೂರು ಅಥವಾ ಹೆಚ್ಚಿನ ವಿಷಯಕ್ಕೆ 400 ರೂ., ನಿಗದಿ ಮಾಡಲಾಗಿದೆ. ಜೂನ್‌ 6ರಿಂದ 20ರ ವರೆಗೆ ಪೂರಕ ಪರೀಕ್ಷೆ ನಡೆಯಲಿದ್ದು, ಅತಿ ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಿಸಲಿದ್ದೇವೆ ಎಂದು ಹೇಳಿದರು.

ಪರೀಕ್ಷೆಯಲ್ಲಿ ದಿವ್ಯಾಂಗರ ಅಪರೂಪದ ಸಾಧನೆ
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 247 ದೃಷ್ಟಿ ಮಾಂಧ್ಯರು ಪರೀಕ್ಷೆ ಬರೆದಿದ್ದು 150(ಶೇ.60.73) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶ್ರವಣ ಮತ್ತು ವಾಕ್‌ ದೋಷವುಳ್ಳ 111 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು 62 (ಶೇ.55.86)ಮಂದಿ ತೇರ್ಗಡೆಯಾಗಿದ್ದಾರೆ. ಆಥೋì ಸಮಸ್ಯೆ ಹೊಂದಿರುವ 1976 ವಿದ್ಯಾರ್ಥಿಗಳಲ್ಲಿ 1113(ಶೇ.56.33)ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಲಿಕಾನ್ಯೂನತೆ ಹೊಂದಿದ್ದ 597 ವಿದ್ಯಾರ್ಥಿಗಳಲ್ಲಿ 324(54.27)ಮಂದಿ ಅನುತೀರ್ಣರಾಗಿದ್ದಾರೆ.

ಓದಿದ್ದನ್ನು ಆಗಾಗ ಮನನ ಮಾಡಿಕೊಳ್ಳುತ್ತಿದ್ದರ ಫ‌ಲವಾಗಿ ಇಷ್ಟೊಂದು ಅಂಕ ಪಡೆಯಲು ಸಾಧ್ಯವಾಗಿದೆ. ಓದುವ ಸಂದರ್ಭದಲ್ಲಿ ಬೇರ್ಯಾವ ವಿಷಯನ್ನು ತಲೆಗೆ ಹಾಕಿಕೊಳ್ಳುತ್ತಿರಲಿಲ್ಲ. ಲೆಕ್ಕ ಪರಿಶೋಧಕಿಯಾಗುವ (ಸಿಎ) ಆಸೆ ಇದೆ.
– ಅಮೃತ ಎಸ್‌.ಆರ್‌. (ವಾಣಿಜ್ಯ
  ವಿಭಾಗ-595)

Advertisement

Udayavani is now on Telegram. Click here to join our channel and stay updated with the latest news.

Next