ಪಾಂಡೇಶ್ವರ ವೆಂಕಟ ವಿರಚಿತ ಕರ್ಣಾರ್ಜುನ ಕಥಾನಕ ವೀರ ಮತ್ತು ಕರುಣ ರಸ ಪ್ರಧಾನವಾದದ್ದು. ಕತೆ ಹಾಗೂ ಪದ್ಯಗಳು ಯಕ್ಷಪ್ರಿಯರಿಗೆ ಚಿರಪರಿಚಿತ. ಆದ್ದರಿಂದಲೇ ಅದರ ಪ್ರದರ್ಶನ ಕಲಾವಿದರಿಗೆ ಸವಾಲು. ಪೌರಾಣಿಕ ಪ್ರಸಂಗದ ನಡೆ ಬಲ್ಲ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರ ಸಮರ್ಥ ನಿರ್ವಹಣೆ ಯಿಂದಷ್ಟೇ ಪ್ರಸಂಗ ಕಳೆ ಕಟ್ಟಬಲ್ಲದು.
ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಇವರು ತಮ್ಮ ಕಲಾಕೇಂದ್ರದಲ್ಲಿ ಆಯೋಜಿಸುವ ಸಂಸ್ಕೃತಿ ಸಂಭ್ರಮ ಯಕ್ಷವರ್ಷದಲ್ಲಿ ಆಗಸ್ಟ್ ತಿಂಗಳ ಯಕ್ಷಗಾನ ಕಾರ್ಯಕ್ರಮವಾಗಿ ಬಡಗುತಿಟ್ಟಿನ ಹೆಸರಾಂತ ಕಲಾವಿದರು ಪ್ರದರ್ಶಿಸಿದ ಕರ್ಣಾರ್ಜುನ ಪೌರಾಣಿಕ ಪ್ರಸಂಗ ರಂಜಿಸಿತು.
ಪಾಂಡೇಶ್ವರ ವೆಂಕಟ ವಿರಚಿತ ಕರ್ಣಾರ್ಜುನ ಕಥಾನಕ ವೀರ ಮತ್ತು ಕರುಣ ರಸ ಪ್ರಧಾನವಾದದ್ದು. ಕತೆ ಹಾಗೂ ಪದ್ಯಗಳು ಯಕ್ಷಪ್ರಿಯರಿಗೆ ಚಿರಪರಿಚಿತ. ಆದ್ದರಿಂದಲೇ ಅದರ ಪ್ರದರ್ಶನ ಕಲಾವಿದರಿಗೆ ಸವಾಲು. ಪೌರಾಣಿಕ ಪ್ರಸಂಗದ ನಡೆ ಬಲ್ಲ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರ ಸಮರ್ಥ ನಿರ್ವಹಣೆಯಿಂದಷ್ಟೇ ಪ್ರಸಂಗ ಕಳೆ ಕಟ್ಟಬಲ್ಲದು. ಆ ನಿಟ್ಟಿನಲ್ಲಿ ಅಂದು ಪ್ರದರ್ಶನ ನೀಡಿದ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬುವಲ್ಲಿ ಸಫಲರಾದರೆನ್ನಬಹುದು.
ವೃಷಸೇನ ವೃತ್ತಾಂತವನ್ನು ಒಳಗೊಂಡ ಕರ್ಣಾರ್ಜುನ ಕಾಳಗದ ಪ್ರದರ್ಶನ ಇತ್ತೀಚಿಗೆ ಅಪರೂಪ. ಕುರುಧಾರಿಣಿಯಲ್ಲಿ ಭೀಮನನ್ನು ಮಣಿಸುವ ವೃಷಸೇನ, ಬಳಿಕ ಅರ್ಜುನನಿಂದ ಅವಸಾನ ಹೊಂದುತ್ತಾನೆ. ಮಗನೆ ನಿನ್ನ ಪೋಲ್ವರಾರೈ… ಎನ್ನತ್ತಾ ಮಗನ ಶವದ ಎದುರು ಕುಳಿತು ರೋಧಿಸುವ ಕರ್ಣನ ಪುತ್ರಶೋಕ ಈ ವೃತ್ತಾಂತದ ಮುಖ್ಯ ಭಾಗ. ಮುಂದೆ ಶಲ್ಯ ಸಾರಥ್ಯವನ್ನು ಹೊಂದಿದ ಕರ್ಣ, ಕೃಷ್ಣ ಸಾರಥ್ಯದ ಅರ್ಜುನನನ್ನು ಸಮರದಲ್ಲಿ ಎದುರುಗೊಳ್ಳುವ ಮೂಲಕ ಕಾಳಗ ಪ್ರಾರಂಭ. ಕೃಷ್ಣ ಮತ್ತು ಶಲ್ಯರ ಪರಸ್ಪರ ಮೂದಲಿಸುವಿಕೆ, ರಥ ಹಿಂದೆ ಸರಿಸಿದ ಕರ್ಣನ ಹೊಗಳುವ ಕೃಷ್ಣನ ಬಗ್ಗೆ ಅರ್ಜುನನಿಗೆ ಬೇಸರ, ಕೃಷ್ಣನ ಸಮಾಧಾನ, ಸರ್ಪಾಸ್ತ್ರ ಮರು ಹೂಡೆಂದ ತನ್ನ ಮಾತನ್ನು ಧಿಕ್ಕರಿಸುವ ಕರ್ಣನ ಸಾರಥಿತನ ತೊರೆಯುವ ಶಲ್ಯ, ರಥಹೀನ, ಶಸ್ತ್ರಹೀನನ ಮೇಲೆ ಶರಪ್ರಯೋಗ ಒಲ್ಲೆನೆಂದು ಕರ್ಣನಲ್ಲಿ ವ್ಯಾಮೋಹ ವ್ಯಕ್ತಪಡಿಸುವ ಅರ್ಜುನನಲ್ಲಿ ಅಭಿಮನ್ಯು ಹತ್ಯೆಯ ಪ್ರತೀಕಾರ ಭಾವ ಉದ್ದೀಪಿಸುವ ಕೃಷ್ಣ, ಬ್ರಾಹ್ಮಣ ರೂಪಿ ಕೃಷ್ಣ ಕರ್ಣನಿಂದ ಕುಂಡಲಗಳನ್ನು ದಾನ ಪಡೆಯುವುದು, ಕೊನೆಯಲ್ಲಿ ಕರ್ಣಾವಸಾನ. ಇವಿಷ್ಟು ಪ್ರಸಂಗದ ಹೂರಣ.ಕರ್ಣನ ಪಾತ್ರ ನಿರ್ವಹಿಸಿದವರು ಆಜ್ರಿ ಗೋಪಾಲ ಗಾಣಿಗರು. ನಡುತಿಟ್ಟಿನ ಸಂಪ್ರದಾಯಬದ್ಧ ಕರ್ಣನ ಪಾತ್ರಕ್ಕೆ ಹೆಸರಾದವರು. ದೊಡ್ಡ ಮುಂಡಾಸು, ಕಟ್ಟು ಮೀಸೆಯ ವೇಷ, ಅದಕೊಪ್ಪುವ ಅವರ ಆಳಂಗ, ಸ್ವರಭಾರ , ಗತ್ತುಗಾರಿಕೆ ಹಾಗೂ ಹಿತಮಿತವಾದ, ಪ್ರಸಂಗದ ಚೌಕಟ್ಟಿಗೊಳಪಟ್ಟ ಮಾತುಗಾರಿಕೆ ಇವೆಲ್ಲ ಕರ್ಣನ ಪಾತ್ರದ ಘನತೆಯನ್ನು ಎತ್ತಿ ಹಿಡಿಯಿತು.
ಅರ್ಜುನ ಪಾತ್ರಧಾರಿ ಉಪ್ಪುಂದ ನಾಗೇಂದ್ರ ರಾವ್ ಪಾತ್ರದ ಆಳ, ವಿಸ್ತಾರವರಿತು ಅಭಿನಯಿಸಿದರು. ಅದರಲ್ಲೂ ಕರ್ಣಜಾತ ಕೇಳ್ಳೋ ಮಾತ ಯಾದವೋತ್ತಮ ಲಾಲಿಸಿ ಕೇಳು… ಪದ್ಯಗಳಿಗೆ ಅವರ ಕುಣಿತ, ಮಾತು ಹಾಗೂ ಅಭಿನಯ ಮನೋಜ್ಞವಾಗಿತ್ತು.
ಕರ್ಣ, ಅರ್ಜುನ ಮತ್ತು ಶಲ್ಯರನ್ನು ತನ್ನ ಮಾತಿನಿಂದ ಕೆಣಕಿ, ಮತ್ತೂಮ್ಮೆ ಉತ್ತೇಜಿಸಿ ತನ್ನ ಮನೋಗತವನ್ನು ಸಾಧಿಸುವ ಕೃಷ್ಣನಾಗಿ ತನ್ನ ಚುರುಕಿನ ಕುಣಿತ ಮತ್ತು ಮಾತಿನಿಂದ ಹೆನ್ನಾಬೈಲು ವಿಶ್ವನಾಥ ರಂಜಿಸಿದರು. ಅದರಲ್ಲೂ ಏನಯ್ಯ ಶಲ್ಯ ಭೂಪ ಹಾಗೂ ಪೂತು ಮಜರೆ ಕರ್ಣ ಸುಭಟ ಹಾಡುಗಳಿಗೆ ಅವರ ಹೆಜ್ಜೆಗಾರಿಕೆ ಹಾಗೂ ಭಾವಾಭಿನಯ ಚಪ್ಪಾಳೆ ಗಿಟ್ಟಿಸಿತು.
ಶಲ್ಯನ ಪಾತ್ರ ನಿರ್ವಹಿಸಿದ ತುಂಬ್ರಿ ಭಾಸ್ಕರ ಶುರುವಿಗೆ ಕೃಷ್ಣ ನೊಡನೆ, ಕರ್ಣನ ಬಂಡಿಯನು ನಾ ಎಳೆದರೆ ಎಂದೆನ್ನುವಾಗ ಸಂಭಾಷಣೆಯನ್ನು ತುಸು ಎಳೆದರೂ ಕೊನೆಯಲ್ಲಿ ಕರ್ಣನ ಸಾರಥ್ಯ ತೊರೆಯುವಾಗ, ,’ಅಂಬು ಬೆಸನವ ಬೇಡಿದರೆ ತೊಡೆನೆಂಬ ಛಲ ನಿನಗಾಯ್ತು” ಎಂದೆನ್ನುವಾಗ ಹದವರಿತು ಮಾತನಾಡಿ ಕರ್ಣನ ಪಾತ್ರ ವಿಸ್ತಾರಕ್ಕೆ ಪೂರಕರಾದರು.ಭೀಮನಾಗಿ ನರಸಿಂಹ ಗಾಂವ್ಕರ್, ವೃಷಸೇನನಾಗಿ ಹವ್ಯಾಸಿ ಕಲಾವಿದರಾದ ನವೀನ್ ಕೋಟ,ದುರ್ಯೋಧನ ಮತ್ತು ಬ್ರಾಹ್ಮಣ ಪಾತ್ರಗಳಲ್ಲಿ ಮಟಪಾಡಿ ಪ್ರಭಾಕರ ಆರ್ಚಾ ಪಾತ್ರೋಚಿತವಾಗಿ ನಿರ್ವಹಿಸಿದರು.
ಪ್ರದರ್ಶನದ ಯಶಸ್ಸಿಗೆ ಬಹುಮಟ್ಟಿಗೆಕಾರಣರಾದವರು ಸಾಂಪ್ರದಾಯಿಕ ಶೈಲಿಯ ಭಾಗವತಿಕೆಯಿಂದ ಹಿಮ್ಮೇಳವನ್ನು ನಡೆಸಿದ ರಾಘವೇಂದ್ರ ಮಯ್ಯ ಹಾಗೂ ಉದಯ ಕುಮಾರ ಹೊಸಾಳ. ಇವರೊಂದಿಗೆ ಆನಂದ ಭಟ್ ಹಾಗೂ ಜನಾರ್ಧನ ಆರ್ಚಾ ಸಹಕರಿಸಿದರು.
ಸತ್ಯನಾರಾಯಣ ತೆಕ್ಕಟ್ಟೆ