Advertisement

ಕಾವೇರಿದ ರಣಾಂಗಣ; ಜೋರಾದ ವಾಗ್ಬಾಣ

09:49 AM Nov 28, 2019 | Team Udayavani |

ಹುಬ್ಬಳ್ಳಿ/ಬೆಂಗಳೂರು: ಉಪಚುನಾವಣೆ ರಣಾಂಗಣ ರಂಗೇರಿದೆ. ಮೂರೂ ಪಕ್ಷಗಳ ದಿಗ್ಗಜರು ಅಖಾಡಕ್ಕೆ ಧುಮುಕಿದ್ದಾರೆ. ಹರಿತ ಮಾತಿನ ಅಬ್ಬರ ಜೋರಾಗಿದೆ. ಸೋಮವಾರ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಉತ್ತರ ಕರ್ನಾಟಕ ಕಣದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಿ ಮತ ಯಾಚಿಸಿದರು.

Advertisement

ವೀರಶೈವ ಅಷ್ಟೇ ಅಲ್ಲ, ಎಲ್ಲ ಸಮಾಜದ ಜನರೂ ನನಗೆ ಆಶೀರ್ವಾದ ಮಾಡಬೇಕು ಎಂದು ಸಿಎಂ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದರೆ, ಅಣ್ಣಾ ಎನ್ನುತ್ತಲೇ ಅನರ್ಹ ಶಾಸಕ ಆನಂದ ಸಿಂಗ್‌ ನನಗೆ ಬೆನ್ನಿಗೆ ಚೂರಿ ಹಾಕಿದ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಬಿಜೆಪಿ ಎಂಟು ಸ್ಥಾನ ಗೆಲ್ಲುವುದಿಲ್ಲ. ಮಧ್ಯಾಂತರ ಚುನಾವಣೆ ಬರಲಿದ್ದು, ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೂರೂವರೆ ವರ್ಷ ನಾನೇ ಸಿಎಂ: ಬಿಎಸ್‌ವೈ
ಹೊಸಪೇಟೆ ತಾಲೂಕು ಕಮಲಾಪುರದಲ್ಲಿ ಪ್ರಚಾರ ಮಾಡಿದ ಸಿಎಂ ಯಡಿಯೂರಪ್ಪ, ಉಪಚುನಾವಣೆಯಲ್ಲಿ ಎಲ್ಲ 15 ಕ್ಷೇತ್ರಗಳಲ್ಲಿ ಗೆದ್ದು ಮುಂದಿನ ಮೂರೂವರೆ ವರ್ಷ ಯಾವುದೇ ಪಕ್ಷದ ಬೆಂಬಲ, ಸಹಕಾರ ಇಲ್ಲದೆ ಸ್ವಂತ ಬಲದಿಂದಲೇ ಅಧಿಕಾರ ನಡೆಸುತ್ತೇವೆ. ವೀರಶೈವ ಅಷ್ಟೇ ಅಲ್ಲ ಎಲ್ಲ ಸಮಾಜದವರು ಜಾತಿ-ಕುಲ-ಗೋತ್ರ ಮರೆತು ಬಿಜೆಪಿ ಜತೆ ನಿಲ್ಲಬೇಕೆಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ ಎಂದರು.

ಮಧ್ಯಾಂತರ ಚುನಾವಣೆ ಖಚಿತ-ಸಿದ್ದು
ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜಕೀಯದಲ್ಲಿ ಅನರ್ಹ ಎಂದರೆ ಅಯೋಗ್ಯ. ಅಂತಹ ಅಯೋಗ್ಯ ಹೆಬ್ಟಾರರಿಗೆ ಮತಕೊಟ್ಟು ಮತದ ಮೌಲ್ಯ ಹಾಳು ಮಾಡಬೇಡಿ. ಕುದುರೆ ವ್ಯಾಪಾರದ ಮೂಲಕ 17 ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಉಪ ಚುನಾವಣೆಯಲ್ಲಿ ಎಂಟು ಸ್ಥಾನ ಗೆಲ್ಲುವುದು ಅನಿವಾರ್ಯ. ಇಲ್ಲದಿದ್ದರೆ ಬಿಜೆಪಿ ಸರಕಾರ ಪತನವಾಗಿ ಮಧ್ಯಾಂತರ ಚುನಾವಣೆ ಬರುವುದು ಖಚಿತ ಎಂದರು.

ಅಣ್ಣಾ ಎಂದು ಚೂರಿ ಹಾಕಿದ : ಎಚ್‌ಡಿಕೆ
ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಅಣ್ಣಾ…ಅಣ್ಣಾ… ಎಂದು ನನ್ನ ಬೆನ್ನಿಗೆ ಚೂರಿ ಹಾಕಿರುವ ಆನಂದ ಸಿಂಗ್‌ ನನ್ನಿಂದ ಸಹಾಯ ಪಡೆದುಕೊಂಡು ಬಿಜೆಪಿಗೆ ಹಾರಿದ್ದಾರೆ. ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆರೋಪಿಸಿದರು.

Advertisement

ರಾಜ್ಯದಲ್ಲಿ ಮಧ್ಯಾಂತರ ಚುನಾವಣೆ ನಡೆಯುವುದು ಖಚಿತ. ಆಗ ನೂರಕ್ಕೆ ನೂರು ನಾವೇ ಗೆದ್ದು ಅಧಿಕಾರಕ್ಕೆ ಬರುತ್ತೇವೆ. ಅನಂತರ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಶಾಸಕಾಂಗ ಸಭೆ, ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನಿಸುತ್ತದೆ. ನಾನೇ ಮುಖ್ಯಮಂತ್ರಿ ಆಗುತ್ತೇನೆಂದು ಎಲ್ಲಿಯೂ ಹೇಳಿಲ್ಲ.
– ಸಿದ್ದರಾಮಯ್ಯ, ಮಾಜಿ ಸಿಎಂ

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಜೆಡಿಎಸ್‌ನ್ನು ಬಿಜೆಪಿಯ ಬಿ ಟೀಂ ಎಂದು ಹೇಳಿದ ಪರಿಣಾಮ ನಮ್ಮ ಪಕ್ಷ ಕ್ಕೆ ಹಿನ್ನಡೆಯಾಯಿತು. ಹೀಗಾಗಿ ಮುಸ್ಲಿಂ ಮತದಾರರು ಹಿಂದೆ ಸರಿದರು. ಇಲ್ಲವಾದರೆ 45 ಸೀಟುಗಳನ್ನು ಗೆಲ್ಲುತ್ತಿದ್ದೆವು. ಸಮ್ಮಿಶ್ರ ಸರಕಾರದಲ್ಲಿ ನಾನು ಸಾಕಷ್ಟು ಹಿಂಸೆ, ಕಷ್ಟ ಅನುಭವಿಸಿದ್ದೇನೆ.
– ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next