ಯಕ್ಷಗಾನದ ಗುಣಮಟ್ಟದ ಇಳಿತ ಮತ್ತು ಪ್ರೇಕ್ಷಕರ ಕೊರತೆಗಳಿಗೆ ಸಿನಿಮಾ, ಮೊಬೈಲ್ ಮತ್ತು ಸಮಕಾಲೀನ ಮನಸ್ಥಿತಿಗಳು ಕಾರಣ ಎಂಬ ನೆಪಗಳನ್ನು ಹುಡುಕಿ ಅದೇ ಸತ್ಯ ಎಂದು ಬಿಂಬಿಸಲಾಯಿತು. ಇದು ಯಕ್ಷಗಾನದ ಅನಾಥತೆಗೆ ಕಾರಣವಾಯಿತು. ಎಲ್ಲಿಯವರೆಗೆ ಅಂದರೆ ಸುಮಾರು 35 ಜನರಿರುವ ತಿಟ್ಟೊಂದರ ಪ್ರಧಾನ ಕಲಾವಿದರೇ ಕೂಡಿರುವ ಮೇಳವೊಂದರ ಪ್ರದರ್ಶನಕ್ಕೆ ಕೇವಲ 8 ಜನರೇ ಪ್ರೇಕ್ಷಕರು ಬರುವವರೆಗೆ.
ಪ್ರೇಕ್ಷಕ ಮತ್ತು ಕಲಾವಿದರ ನಡುವಿನ ಈ ಅನುಪಾತ ಕಲೆಯ ವ್ಯಾಪಕತೆಯನ್ನು ಸೂಚಿಸುತ್ತಿದೆ. ಆದರೇನು ಮಾಡುವುದು? ಕಾಲವುರುಳಿದೆ. ಮರಳಿ ಬಾರದ ಸ್ಥಿತಿಗೆ ಯಕ್ಷಗಾನ ಹೊರಳಿದೆ. ಆದರೂ ಅಲ್ಲಲ್ಲಿ ಕೆಲವೊಂದು ಆಶಾದಾಯಕ ಬೆಳವಣಿಗೆಗಳು ನಡೆಯುತ್ತಿವೆ. ಆ ಮಾಲಿಕೆಯಲ್ಲಿ ಇತ್ತೀಚೆಗೆ ಜೀವ-ಭಾವಗಳ ಸಂಘರ್ಷಗಳ ಸಮ್ಮಿಲನದ ಕಥಾ ಹಂದರ “ಕರ್ಣ ವೃಷಾಲಿ’ ಎನ್ನುವ ಪ್ರಸಂಗ. ಯುವ ಪ್ರಸಂಗಕರ್ತೆ ದಿವ್ಯಾ ಶ್ರೀಧರ ರಾವ್ ಅವರು ದ್ರೌಪದಿ ಸ್ವಯಂವರದಲ್ಲಿನ ಘಟನೆಗಳನ್ನು ಪ್ರಧಾನವಾಗಿಟ್ಟುಕೊಂಡು ಪೌರಾಣಿಕ ಪ್ರಸಂಗಕ್ಕೆ ಹೊಸತನವನ್ನು ನೀಡಿ ಆಕರ್ಷಣೆ ನೀಡುವ ಒಂದು ಉತ್ತಮ ಪ್ರಯತ್ನವನ್ನು ಈ ಪ್ರಸಂಗದಲ್ಲಿ ಮಾಡಿದ್ದಾರೆ.
ಯಕ್ಷಗಾನದಲ್ಲಿ ಕರ್ಣನ ಪಾತ್ರ ಪ್ರಧಾನವಾಗಿದ್ದ ಬಹಳಷ್ಟು ಪ್ರಸಂಗಗಳು ಇವೆ. ಆದರೆ ಆತನಿಗೆ “ವೃಷಾಲಿ’ ಎಂಬ ಪತ್ನಿ ಮತ್ತು “ಸುಧಾಮ’ ಎನ್ನುವ ಮಗನಿದ್ದ ಎನ್ನುವ ಮಾಹಿತಿ ಬಹಳಷ್ಟು ಜನರಿಗಿಲ್ಲ. ಪಾತ್ರಗಳ ಹೆಸರು ಕೇಳಿದಾಕ್ಷಣ ಇದು ಕಾಲ್ಪನಿಕ ಪಾತ್ರವೇನೊ ಎನ್ನುವ ಸಂಶಯ ಮೂಡಬಹುದು. ಅದು ಕಾಲ್ಪನಿಕವಲ್ಲ ಪುರಾಣಗಳಲ್ಲಿ ಬಂದ ಪಾತ್ರಗಳು. ಈ ಹಿಂದಿನ ಪ್ರಸಂಗಗಳಲ್ಲಿ ಅದಕ್ಕೆ ಪ್ರಾಧಾನ್ಯತೆ ನೀಡದ ಕಾರಣ ಅದು ಜನಮಾನಸದಲ್ಲಿ ನೆಲೆಸಿರಲಿಲ್ಲ.
ಬಿಡುಗಡೆಯ ಸಂದರ್ಭದಲ್ಲಿ ಸ್ಥಳೀಯ ಹವ್ಯಾಸಿ ಕಲಾವಿದರು ತಾಳಮದ್ದಳೆ ರೂಪದಲ್ಲಿ ಪ್ರಸಂಗವನ್ನು ಪ್ರದರ್ಶಿಸಿದರು. ಎಂ.ಕೆ. ರಮೇಶ್ ಆಚಾರ್ಯ ಅವರು ಪೌರಾಣಿಕ ಸಾಹಿತ್ಯಗಳಿಗೆ ಯಾವ ಕೊರತೆಯಾಗದಂತೆ ಪದ್ಯಗಳನ್ನು ರಚಿಸಿದ್ದರು. ದ್ರುಪದನ ಆಸ್ಥಾನದಲ್ಲಿ ಕೌರವನ ಹತಾಶೆ, ದ್ರುಪದನ ದ್ವಂದ್ವ, ದ್ರೌಪದಿಯ ದುಗುಡತನ, ಕರ್ಣನ ಪರಾಕ್ರಮ, ವೃಷಾಲಿಯ ಭಾವಸ್ಪಂದನ, ಸುಧಾಮನ ತ್ಯಾಗ ಸೊಗಸಾಗಿ ಅಭಿವ್ಯಕ್ತಗೊಂಡಿತು. ಅಲ್ಲಲ್ಲಿ ಪ್ರಸಂಗದ ಸ್ವಾರಸ್ಯವನ್ನು ಉಳಿಸುವ ಉದ್ದೇಶದಿಂದ ಹಾಸ್ಯ ಪಾತ್ರಗಳನ್ನು ಸೃಷ್ಟಿಸಿಕೊಂಡು ಕೊನೆಯ ವರೆಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಕಲ ಜಾಣ್ಮೆಯನ್ನು ದಿವ್ಯಾ ಪ್ರದರ್ಶಿಸಿದ್ದಾರೆ. ಪೌರಾಣಿಕ ನೆಲೆಗಟ್ಟಿನಲ್ಲೇ ಇಂತಹ ಆಯ್ಕೆಗಳಿರುವಾಗ ಪ್ರಸಂಗಕರ್ತರಲ್ಲಿ ಹೊಸತನ್ನು ಹುಡುಕುವ ಹವಣಿಕೆ ಏಕೆ ಎನ್ನುವ ಪ್ರಶ್ನೆ ಮನದಲ್ಲಿ ಮೂಡಿತು.
ಮುಸ್ತಾಕ್ ಹೆನ್ನಾಬೈಲು