Advertisement

ಕಳೆಗುಂದಿದ್ದ ಕರ್ಕುಂಜೆ ಕನ್ನಡ ಶಾಲೆಗೆ ನವರೂಪ

10:43 PM Jan 29, 2022 | Team Udayavani |

ಕುಂದಾಪುರ: ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ, ಬೆಳೆಸಬೇಕು ಎನ್ನುವ ಕೂಗು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದಕ್ಕೊಂದು ನಿದರ್ಶನ ಎಂಬಂತೆ “ಕನ್ನಡ ಮನಸುಗಳು ಪ್ರತಿಷ್ಠಾನ’ ಎಂಬ ತಂಡವೊಂದು ತಮ್ಮ ಸ್ವಂತ ಹಣ ಮಾತ್ರವಲ್ಲದೆ, ದಾನಿಗಳಿಂದಲೂ ಹಣ ಸಂಗ್ರಹಿಸಿ ಗ್ರಾಮೀಣ ಭಾಗಗಳ ಕನ್ನಡ ಶಾಲೆಗಳಿಗೆ ನವರೂಪ ನೀಡಿ, ಅಭಿವೃದ್ಧಿಪಡಿಸಲು ಟೊಂಕಕಟ್ಟಿ ನಿಂತಿದೆ.

Advertisement

ಈ ಕನ್ನಡ ಮನಸುಗಳು ಪ್ರತಿಷ್ಠಾನವು ಸರಕಾರಿ ಕನ್ನಡ ಶಾಲೆ ಉಳಿಸಿ ಅಭಿಯಾನವನ್ನು ಕೈಗೊಂಡಿದ್ದು, ಅದರಡಿ ಈ ಬಾರಿ ಬೈಂದೂರು ವಲಯದ 94 ವರ್ಷಗಳ ಇತಿಹಾಸವಿರುವ ಕರ್ಕುಂಜೆ ಸರಕಾರಿ ಹಿ.ಪ್ರಾ. ಶಾಲೆಯನ್ನು ಆಯ್ಕೆ ಮಾಡಿಕೊಂಡಿದೆ. ಶಾಲೆಗೆ ಸುಣ್ಣ- ಬಣ್ಣ ಬಳಿದು, ಹೊಸ ಮೆರುಗು ನೀಡುವುದರ ಜತೆಗೆ, ಇನ್ನಿತರ ಪೀಠೊ ಪಕರಣ ಗಳನ್ನು ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗುವ ಕಾರ್ಯವನ್ನು ಮಾಡಿದೆ.

60 ಮಂದಿಯ ತಂಡ
ದೂರದ ಬೆಂಗಳೂರಿನಿಂದ ಆಗಮಿ ಸಿರುವ ಈ ಕನ್ನಡ ಮನಸುಗಳು ತಂಡದಲ್ಲಿ ಒಟ್ಟು 100 ಮಂದಿಯಿದ್ದು, ಈ ಬಾರಿ ಈ ಶನಿವಾರ ಕರ್ಕುಂಜೆ ಶಾಲೆ ಹಾಗೂ ಕೂಡಿಗಿ ಕಿರಿಯ ಪ್ರಾಥಮಿಕ ಶಾಲೆಗೆ ಕೈಂಕರ್ಯಕ್ಕಾಗಿ 60 ಮಂದಿ ಆಗಮಿಸಿದ್ದಾರೆ. ಈ ತಂಡದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಯುವಕ-ಯುವತಿಯರು ಸೇರಿಕೊಂಡಿದ್ದಾರೆ. ಉದ್ಯೋಗದ ಜತೆ- ಜತೆಗೆ ಕನ್ನಡ ಶಾಲೆಗಳನ್ನು ಉಳಿಸುವ ಸಮಾಜಮುಖೀ ಕಾಯಕದಲ್ಲಿಯೂ ತೊಡಗಿಸಿಕೊಂಡಿರುವುದು ಅನು ಕರಣೀಯ. ರಾಜ್ಯದ 31 ಜಿಲ್ಲೆಗಳಲ್ಲಿ ತಲಾ 2 ಶಾಲೆ ಆಯ್ಕೆ ಮಾಡಿಕೊಂಡು, ಹೊಸ ರೂಪ ಕೊಡುವ ಪಣ ತೊಟ್ಟಿದ್ದಾರೆ.

11ನೇ ಶಾಲೆ
ಈವರೆಗೆ ರಾಮನಗರ, ಬೆಂಗಳೂರು, ಮಂಡ್ಯ, ಹಾಸನ, ಶಿವಮೊಗ್ಗ ಸೇರಿದಂತೆ ದ.ಕ ಜಿಲ್ಲೆಯ ಸುಳ್ಯ ಶಾಲೆ ಸೇರಿದಂತೆ 10 ಶಾಲೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಿದ್ದು, ಇದು 11ನೇ ಶಾಲೆಯಾಗಿದೆ. 31 ಜಿಲ್ಲೆಯಿಂದ ಬರೋಬ್ಬರಿ 62 ಶಾಲೆಗಳ ಅಭಿವೃದ್ಧಿಗೆ ಪಣತೊಟ್ಟಿರುವ ಈ ತಂಡಕ್ಕೆ ಸೂರ್ಯ ಫೌಂಡೇಶನ್‌ ಪ್ರಧಾನ ನೆರವು ನೀಡುತ್ತಿದ್ದು, 50 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಪೇಂಟಿಂಗ್‌ ವೆಚ್ಚ ಭರಿಸುತ್ತದೆ. ಇನ್ನಿತರ ದಾನಿಗಳಿಂದ ಶಾಲೆಗೆ ಅಗತ್ಯವಿರುವ ಪೀಠೊಪಕರಣ, ಫ್ಯಾನ್‌, ವಿದ್ಯುತ್‌ ದೀಪ, ಡಿಜಿಟಲೀಕರಣ, ಪ್ರಾಜೆಕ್ಟರ್‌ ಇನ್ನಿತರ ಸಲಕರಣಗಳನ್ನು ಸಹ ಈ ತಂಡ ಒದಗಿಸಿಕೊಡುತ್ತದೆ.

ನಮ್ಮೂರ ಶಾಲೆಯ ಬಗ್ಗೆ ನಮ್ಮ ತಂಡದಲ್ಲಿ ಮನವಿ ಮಾಡಿಕೊಂಡಿದ್ದೆ. ನಮ್ಮೂರಿಗೆ ಬಂದು ನಮ್ಮ ಶಾಲೆಯನ್ನು ಅವರ ಶಾಲೆ ಎಂದು ಭಾವಿಸಿ ಖುಷಿಂದಲೇ ಕೆಲಸ ಮಾಡಿದ್ದಾರೆ ಎನ್ನುತ್ತಾರೆ ತಂಡದ ಸದಸ್ಯ, ಸ್ಥಳೀಯರಾದ ಗಣೇಶ್‌ ಕೊಡ್ಲಾಡಿ.

Advertisement

25 ಶಾಲೆಗಳಿಂದ ಬೇಡಿಕೆ
ಆರಂಭದಲ್ಲಿ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಕೇವಲ ಬಣ್ಣ ಮಾತ್ರ ಬಳಿಯುತ್ತಿದ್ದೇವು. ಈಗೀಗ ಕಲಿಕೆಗೆ ಪೂರಕವಾದ ಪೀಠೊಪಕರಣಗಳಿಗೂ ಬೇಡಿಕೆ ಬರುತ್ತಿದೆ. ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದ ಶಾಲೆಗಳಿಗೆ ನಮ್ಮ ಮೊದಲ ಪ್ರಾಶಸ್ತ್ಯ ಕೊಡಲಾಗುತ್ತಿದೆ. ರಾಜ್ಯದ ಬೇರೆ ಬೇರೆ ಸುಮಾರು 25ಕ್ಕೂ ಹೆಚ್ಚು ಶಾಲೆಗಳಿಂದ ಈಗಾಗಲೇ ಬೇಡಿಕೆ ಬಂದಿದೆ. ಹಂತ-ಹಂತವಾಗಿ ಆ ಶಾಲೆಗಳ ಅಭಿವೃದ್ಧಿಪಡಿಸುತ್ತೇವೆ.
-ಪವನ್‌, ತಂಡದ ಪ್ರಮುಖರು

ಅನೇಕ ನೆರವು
116 ಮಕ್ಕಳು ಓದುತ್ತಿದ್ದು, ಶತಮಾನೋತ್ಸವಕ್ಕೆ ಕೇವಲ ಆರು ವರ್ಷಗಳು ಬಾಕಿ ಇವೆ. ಅನೇಕ ಅಭಿವೃದ್ಧಿ ಕೆಲಸ ಆಗಬೇಕಿತ್ತು. ಪಂಚಾಯತ್‌ ಹಾಗೂ ಹಳೆ ವಿದ್ಯಾರ್ಥಿ ಗಣೇಶ್‌ ಅವರ ನೆರವಿಂದ ಕನ್ನಡ ಮನಸುಗಳು ತಂಡದವರು ನಮ್ಮ ಶಾಲೆಗೆ ಬಂದಿದ್ದಾರೆ. ಬಣ್ಣ ಬಳಿಯುವ ಜತೆಗೆ ನಮ್ಮ ಶಾಲೆಗೆ ಅಗತ್ಯವಿರುವ ಬೇಡಿಕೆಗಳಾದ ಪ್ರಾಜೆಕ್ಟರ್‌, ಪ್ರಿಂಟರ್‌, ಟ್ಯೂಬ್‌ಲೈಟ್‌, ಮ್ಯಾಟ್‌, 14 ಕೋಣೆಗಳಿಗೆ ಬೇಕಾಗಿರುವ ಫ್ಯಾನ್‌ಗಳನ್ನು ಈಡೇರಿಸಿದ್ದಾರೆ. ಈ ತಂಡಕ್ಕೆ ಕೃತಜ್ಞತೆ.
– ಮೋತಿಲಾಲ್‌ ಲಮಣಿ, ಮುಖ್ಯೋಪಾಧ್ಯಾಯರು, ಕರ್ಕುಂಜೆ ಶಾಲೆ

Advertisement

Udayavani is now on Telegram. Click here to join our channel and stay updated with the latest news.

Next