Advertisement

Karki Movie Review: ಪ್ರೀತಿ ಅರಮನೆಯಲ್ಲಿ ಜಾತಿ ಸಂಘರ್ಷ

03:00 PM Sep 22, 2024 | Team Udayavani |

ಜಾತಿ ಸಂಘರ್ಷ ಕುರಿತಾಗಿ ಅನೇಕ ಸಿನಿಮಾಗಳು ಬಂದಿವೆ. ಅದರಲ್ಲೂ ಮುಗ್ಧ ಪ್ರೀತಿಯ ನಡುವೆ ಬರುವ ಜಾತಿ, ಮೇಲ್ವರ್ಗ, ಕೆಳವರ್ಗ ಅಂಶಗಳು ಮುಂದೆ ದೊಡ್ಡ ಕ್ರಾಂತಿಗೆ ನಾಂದಿಯಾಡುತ್ತವೆ. ಈ ವಾರ ತೆರೆಕಂಡಿರುವ “ಕರ್ಕಿ’ ಸಿನಿಮಾ ಕೂಡಾ ಇಂತಹುದೇ ಕಥಾಹಂದರ ಹೊಂದಿರುವ ಸಿನಿಮಾ.

Advertisement

ಕಾನೂನು ಪದವಿ ಪಡೆದು ದೊಡ್ಡ ವಕೀಲನಾಗಬೇಕೆಂಬ ಕನಸು ಕಾಣುವ ಕೆಳವರ್ಗದ ಹುಡುಗನಿಗೆ ಮೇಲ್ವರ್ಗದ ಹುಡುಗಿ ಜೊತೆ ಪ್ರೇಮಾಂಕುರ. ಇದು ಒಂದು ವರ್ಗದ ಕಣ್ಣು ಕೆಂಪಾಗಿಸುತ್ತದೆ. ಅಲ್ಲಿಯವರೆಗೆ ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿದ್ದ, ಸಿನಿಮಾದ ಕಥೆಗೆ ಹೊಸದೊಂದು ಆಯಾಮ ಸಿಗುತ್ತದೆ. ನೋಡ ನೋಡುತ್ತಿದ್ದಂತೆ, ಕೆಳ ವರ್ಗದ ಹುಡುಗನೊಬ್ಬನ ಆಕ್ರಂದನ ತೆರೆಮೇಲೆ ಅನಾವರಣವಾಗುತ್ತ ಹೋಗುತ್ತದೆ. ತನ್ನ ಮುಂದಿರುವ ಅನೇಕ ಅಡ್ಡಿ ಆತಂಕಗಳನ್ನು ಬದಿಗಿಟ್ಟ ಮುತ್ತು ಕಾನೂನು ಪದವಿಧರನಾಗುತ್ತಾನಾ? ಈ ಹೋರಾಟ ಹೇಗಿರುತ್ತದೆ ಎಂಬುದೇ “ಕರ್ಕಿ’ ಸಿನಿಮಾದ ಕಥಾಹಂದರ.

ಇಷ್ಟು ಹೇಳಿದ ಸಿನಿಮಾದ ಕಥೆ ಸಾಗುವ ರೀತಿಯನ್ನು ನೀವು ಗ್ರಹಿಸಬಹುದು. ಮುಖ್ಯವಾಗಿ ಇಲ್ಲಿ ಜಾತಿ ವ್ಯವಸ್ಥೆ, ಅದು ಪ್ರೀತಿಗೆ ಅಡ್ಡವಾಗುವ ರೀತಿ, ಹೋರಾಟದ ಹಾದಿ, ಮಾನವೀಯ ಅಂಶಗಳ ಸುತ್ತ “ಕರ್ಕಿ’ ಸಾಗುತ್ತದೆ. ನಿರ್ದೇಶಕ ಪವಿತ್ರನ್‌ ಒಂದಷ್ಟು ಅಂಶಗಳನ್ನು ಮನಮುಟ್ಟುವಂತೆ ಹೇಳಿದ್ದಾರೆ. ಹಾಗಾಗಿ, ಇದು ಲವ್‌ಸ್ಟೋರಿಯ ಜೊತೆಗೆ ಸಂದೇಶಾತ್ಮಕ ಚಿತ್ರವೂ ಹೌದು.

ಚಿತ್ರದಲ್ಲಿ ನಾಯಕ ಜಯಪ್ರಕಾಶ್‌ ಕಾನೂನು ವಿದ್ಯಾರ್ಥಿಯಾಗಿ ನಟಿಸಿದ್ದಾರೆ. ಹಳ್ಳಿ ಹುಡುಗನಾಗಿ ದೊಡ್ಡ ಕನಸು ಕಾಣುವ ಪಾತ್ರ ಅವರದ್ದು. ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಮೀನಾಕ್ಷಿ ಮೇಲ್ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಬಲರಾಜವಾಡಿ, ಸಾಧುಕೋಕಿಲ ಸೇರಿದಂತೆ ಅನೇಕರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next