ಕಾರ್ಕಳ: ಪೆರ್ವಾಜೆ ಶಾಲಾ ಸಮೀಪ ಲೋಕೋಪಯೋಗಿ ಇಲಾಖೆಯು ನಿರ್ಮಿಸಿದ ಪ್ರವಾಸಿ ಮಂದಿರದ ಕಾಮಗಾರಿ ಪೂರ್ಣ ಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.
ಕಳೆದ ವರ್ಷ ಶಿಲಾನ್ಯಾಸಗೊಂಡಿರುವ ಕಾರ್ಕಳ ಪ್ರವಾಸಿ ಬಂಗಲೆಯು ರೂ. 1.5 ಕೋಟಿ ವೆಚ್ಚದಲ್ಲಿ 174 ಚದರಡಿ ವಿಸ್ತೀರ್ಣದಲ್ಲಿ ಸುಂದರ ಪರಿಸರದಲ್ಲಿ ನಿರ್ಮಾಣವಾಗಿದೆ.
ಅತ್ಯಾಧುನಿಕ ರೀತಿಯಲ್ಲಿ ಹವಾ ನಿಯಂತ್ರಿತ ಸೌಕರ್ಯದೊಂದಿಗೆ ಎರಡು ಮನೆಗಳನ್ನು ಹೊಂದಿರುವ ಪ್ರವಾಸಿ ಮಂದಿರವು ಪ್ರತ್ಯೇಕ ಅಡುಗೆ ಕೋಣೆ, ಊಟದ ಕೋಣೆ, ವಿಶೇಷ ಚೇತನರಿಗೆ ಒಳಪ್ರವೇಶಿಸಲು ಅನುಕೂಲಕರ ವ್ಯವಸ್ಥೆ, ಹೊಸ ಪೀಠೊಪಕರಣಗಳನ್ನು ಹೊಂದಿದೆ. ಮಂದಿರದ ಮುಂಭಾಗದಲ್ಲಿ ಹೂತೋಟ ಆಕರ್ಷವಾಗಿ ನಿರ್ಮಿಸಲಾಗಿದೆ.
ಕಾಂಪೌಂಡ್ ರಚನೆ, ಇಂಟರ್ ಲಾಕ್ ಅಳವಡಿಕೆ ಕಾರ್ಯವೂ ಈಗಾಗಲೇ ಮುಗಿದಿದೆ. ಸುಮಾರು 40 ಕಾರುಗಳು ನಿಲ್ಲುವಷ್ಟು ವಿಸ್ತಾರವಾದ ಪಾರ್ಕಿಂಗ್ ಜಾಗವೂ ಇಲ್ಲಿದೆ.
ಹಳೆ ಕಟ್ಟಡ ಉಳಿಸಿಕೊಳ್ಳಲಾಗಿದೆ
ಪಾರಂಪರಿಕ ರೀತಿಯಲ್ಲಿರುವ ಹಳೆ ಕಟ್ಟಡವನ್ನು ಕೆಡವದೇ ಹಾಗೆಯೇ ಉಳಿಸಿಕೊಳ್ಳಲಾಗಿದ್ದು ಜನಸಾಮಾನ್ಯರೂ ಅದನ್ನು ಬಾಡಿಗೆಗೆ ಪಡೆಯಬಹುದಾಗಿದೆ. ಹಳೆ ಕಟ್ಟಡದಲ್ಲೂ ಎರಡು ಮನೆಗಳಿವೆ.
ಮೂರುದಿನದೊಳಗೆ ಪ್ರವಾಸಿ ಮಂದಿರ ಲೋಕಾರ್ಪಣೆಯಾಗಲಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.