Advertisement

ಕಾರ್ಕಳ : 6,342 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ

10:21 PM Jun 01, 2020 | Sriram |

ಕಾರ್ಕಳ: ಮುಂಗಾರು ಮಳೆ ಆರಂಭಕ್ಕೆ ಕೆಲವೇ ದಿನ ಬಾಕಿ ಉಳಿದಿದ್ದು, ಕಾರ್ಕಳದಲ್ಲಿ 6,342 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇರಿಸಿಕೊಳ್ಳಲಾಗಿದೆ. ಈ ಬಾರಿ ನಿರೀಕ್ಷೆಯಂತೆ ಮುಂಗಾರು ಆರಂಭವಾದರೆ ಕಾರ್ಕಳದಾದ್ಯಂತ ಕೃಷಿ ಚಟುವಟಿಕೆ ಬಿರುಸುಗೊಳ್ಳಲಿದ್ದು, ಈಗಾಗಲೇ ಅನೇಕ ರೈತರು ಗದ್ದೆಯನ್ನು ಮುಂಗಾರು ಬೇಸಾಯಕ್ಕಾಗಿ ಅಣಿಗೊಳಿಸಿರುತ್ತಾರೆ. ಕಾರ್ಕಳ ಹೋಬಳಿಯಲ್ಲಿ 4,294 ಹೆಕ್ಟೆರ್‌, ಅಜೆಕಾರು ಹೋಬಳಿಯಲ್ಲಿ 2,048 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೇಸಾಯ ಮಾಡಲಾಗುತ್ತಿದೆ.

Advertisement

ಕರ್ನಾಟಕ ಬೀಜ ನಿಗಮ ಕೃಷಿ ಇಲಾಖೆಗೆ ಬಿತ್ತನೆ ಬೀಜ ಒದಗಿಸುತ್ತಿದ್ದು, ಕಾರ್ಕಳ ಕೃಷಿ ಕಚೇರಿಗೆ ಈಗಾಗಲೇ 110 ಕ್ವಿಂಟಾಲ್‌ (ಎಂಒ-4) ಬಿತ್ತನೆ ಬೀಜ ಸರಬರಾಜಾಗಿದ್ದು, ಅದರಲ್ಲಿ 72 ಕ್ವಿಂಟಾಲ್‌ ಈಗಾಗಲೇ ರೈತರಿಗೆ ವಿತರಣೆಯಾಗಿದೆ. ಅಜೆಕಾರು ಹೋಬಳಿ ಕೇಂದ್ರಕ್ಕೆ 85 ಕ್ವಿಂಟಾಲ್‌ ಭತ್ತದ ಬೀಜ ಪೂರೈಕೆಯಾಗಿದ್ದು, 64 ಕೆ.ಜಿ. ವಿತರಣೆಯಾಗಿದೆ.

ಬಿತ್ತನೆ ಬೀಜ ಪಡೆಯಬಹುದು
ಎಂಒ-4 (ಭದ್ರ) ಬಿತ್ತನೆ ಬೀಜ ಪಡೆಯಲಿಚ್ಛಿಸುವವರು ಆರ್‌ಟಿಸಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಬುಕ್‌ ನೀಡಿ ಬಿತ್ತನೆ ಬೀಜ ಪಡೆಯಲು ಕೃಷಿ ಇಲಾಖೆಯಲ್ಲಿ ಹೆಸರು ನೋಂದಾಯಿಸಬಹುದಾಗಿದೆ. 1 ಕೆ.ಜಿ. ಬಿತ್ತನೆ ಬೀಜಕ್ಕೆ 32 ರೂ. ಇದ್ದು, ಅದರಲ್ಲಿ ರೈತರಿಗೆ 8 ರೂ. ಸರಕಾರದಿಂದ ಸಹಾಯಧನ ದೊರೆಯುತ್ತಿದೆ. ಪರಿಶಿಷ್ಟ ಜಾತಿ/ಪಂಗಡದವರಿಗೆ ಇದರಲ್ಲಿ ಮತ್ತಷ್ಟು ರಿಯಾಯಿತಿಯಿದೆ.

ಯಾಂತ್ರೀಕೃತ ಬೇಸಾಯ ಪದ್ಧತಿ ಅಳವಡಿಕೆ
5 ವರ್ಷದ ಹಿಂದೆ ಕಾರ್ಕಳ ತಾಲೂಕಿನಲ್ಲಿ 8,400 ಹೆಕ್ಟೇರ್‌ನಲ್ಲಿ ಭತ್ತ ಬೇಸಾಯ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಬೇಸಾಯ ಮಾಡುವ ಪ್ರಮಾಣ ಇಳಿಮುಖವಾಗಿದ್ದು, ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಮಾರ್ಪಾಡಾಗುತ್ತಿವೆ. ಭತ್ತ ಕೃಷಿಯಲ್ಲಿ ಎದುರಿಸುತ್ತಿರುವ ಸಮಸ್ಯೆ, ಕಾರ್ಮಿಕರ ಕೊರತೆ, ದುಬಾರಿ ವೇತನ ಇದಕ್ಕೆ ಕಾರಣವಾಗಿರಬಹುದು. ಇದೀಗ ಯಾಂತ್ರೀಕೃತ ಬೇಸಾಯ ಪದ್ಧತಿ ಅಳವಡಿಕೆ ಯಾಗುತ್ತಿದ್ದು, ಹಡೀಲು ಗದ್ದೆಗಳಲ್ಲಿ ಮತ್ತೆ ಕೃಷಿ ಮಾಡುವತ್ತ ರೈತರು ಒಲವು ವ್ಯಕ್ತಪಡಿಸುತ್ತಿದ್ದಾರೆ. ರೈತಸೇವಾ ಕೇಂದ್ರಗಳು ಬಾಡಿಗೆ ಆಧಾರದಲ್ಲಿ ಸರಕಾರದ ಸಹಾಯಧನದೊಂದಿಗೆ ಆಧುನಿಕ ಯಂತ್ರೋಪಕರಣ ಒದಗಿಸುತ್ತಿವೆ. ಅಲ್ಲದೇ ಖಾಸಗಿಯವರು ಟ್ರ್ಯಾಕ್ಟರ್‌, ಕಳೆ ಕೀಳುವ ಯಂತ್ರ, ಭತ್ತದ ಕೊಯ್ಲುಗೆ ಕಟಾವು ಯಂತ್ರ ಬಾಡಿಗೆ ನೀಡುತ್ತಿದ್ದಾರೆ.

ಬಿತ್ತನೆ ಬೀಜಕ್ಕೆ ಬೇಡಿಕೆ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಈ ವರ್ಷ ರೈತರು ಹೆಚ್ಚಿನ ಉತ್ಸಾಹದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆ. ಇದರಿಂದಾಗಿ ಭತ್ತದ ಬೀಜಕೆ ಬೇಡಿಕೆಯೂ ಜಾಸ್ತಿಯಾಗಿದೆ. ಮಳೆ ಸರಿಯಾದ ಸಮಯಕ್ಕೆ ಬಂದಲ್ಲಿ ಕೃಷಿ ಉತ್ಪಾದನೆಯಲ್ಲಿ ಏರಿಕೆ ಕಾಣಬಹುದಾಗಿದೆ.
-ಜಯರಾಜ್‌ ಪ್ರಕಾಶ್‌, ಸಹಾಯಕ ಕೃಷಿ ನಿರ್ದೇಶಕ, ಕಾರ್ಕಳ

Advertisement

ಆರ್ಥಿಕ ಪ್ರಗತಿ
ಆಧುನಿಕ ಕೃಷಿ ಪದ್ಧತಿ ಅಳವಡಿಸಿ ಕೊಂಡಲ್ಲಿ ಭತ್ತದ ಬೇಸಾಯದಲ್ಲಿ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ಯಾಂತ್ರೀಕೃತ ಕೃಷಿ ಪದ್ಧ ತಿಗೆ ಸರಕಾರ ಪ್ರೋತ್ಸಾಹ ನೀಡಿ ದರೆ, ಯುವಕರು ಕೃಷಿಯತ್ತ ಒಲವು ತೋರಬಹುದು, ಕೃಷಿಯಿಂದಲೂ ಆರ್ಥಿಕ ಪ್ರಗತಿ ಕಾಣಬಹುದು.
-ಯೋಗೀಶ್‌ ಸಾಲ್ಯಾನ್‌ ಕುಕ್ಕುಂದೂರು, ಯುವ ಕೃಷಿಕ.

Advertisement

Udayavani is now on Telegram. Click here to join our channel and stay updated with the latest news.

Next