Advertisement

Karkala: ಮಳೆಗಾಲದಲ್ಲಿ ಕೆಸರು, ಈಗ ಧೂಳು!

02:56 PM Oct 29, 2024 | Team Udayavani |

ಕಾರ್ಕಳ: ಕಾರ್ಕಳ- ಉಡುಪಿ ಮುಖ್ಯ ಸಂಪರ್ಕ ರಸ್ತೆಯಲ್ಲಿ ಗುಡ್ಡೆಯಂಗಡಿಯಿಂದ ಹಿರಿಯಡಕದವರೆಗೆ ಅಂದು ಮಳೆಗಾಲದಲ್ಲಿ ಕೆಸರಿನ ಅಭಿಷೇಕವಾಗಿದ್ದರೆ, ಇಂದು ಬಿಸಿಲು ಹೊಡೆಯುತ್ತಿದ್ದಂತೆ ಧೂಳಿನ ಅಭಿಷೇಕದಲ್ಲಿ ಜನರು ವಾಹನ ಚಲಾಯಿಸುವ ಪರಿಸ್ಥಿತಿಯಿದೆ ಬಂದೊದಗಿದೆ, ಇಲ್ಲಿರುವ ಐದಾರು ಕಿಲೋಮೀಟರ್‌ ಪ್ರದೇಶದಲ್ಲಿ ರಸ್ತೆ ಹೊರತುಪಡಿಸಿ ಗುಂಡಿ ಗಳನ್ನೇ ಹೆಚ್ಚು ಹುಡುಕುವ ಪರಿಸ್ಥಿತಿ ಇದೆ.

Advertisement

ಬೃಹತ್‌ ಗಾತ್ರದ ಗುಂಡಿಗಳು ಬಾಯ್ದೆರೆದುಕೊಂಡು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಕಾರ್ಕಳ ಭಾಗದಿಂದ ಉಡುಪಿ, ಮಣಿಪಾಲ, ಹಿರಿಯಡಕ ಭಾಗಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಮತ್ತು ನೂರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿದ್ದು, ಸಾಕಷ್ಟು ಮಂದಿ ಉದ್ಯೋಗ, ಶಿಕ್ಷಣ ಸಂಬಂಧಿತ ಕಾರ್ಯಗಳಿಗೆ ಇಲ್ಲಿ ಓಡಾಡುತ್ತಾರೆ. ಆದರೆ ಈ ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿರುವುದು ಜನರಿಗೆ ಸಮಸ್ಯೆ ತಂದೊಡ್ಡಿದೆ. ಇಲ್ಲಿ ಹಲವಾರು ಮಂದಿ ದ್ವೀಚಕ್ರ ವಾಹನ ಸವಾರರು ಗುಂಡಿಗಳಿಂದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿ ಪೆಟ್ಟು ಮಾಡಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಟೆಂಡರ್‌ ಪ್ರಕ್ರಿಯೆ ಹಂತದಲ್ಲಿಯೇ ವಿಳಂಬವಾಗಿದ್ದು, ಇನ್ನಾದರೂ ಕಾಮಗಾರಿ ವ್ಯವಸ್ಥಿತವಾಗಿ ನಡೆದು ಜನರಿಗೆ ಉತ್ತಮ ರಸ್ತೆ ನಿರ್ಮಾಣಗೊಳ್ಳಬೇಕು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಂಬಂಧಪಟ್ಟ ಇಲಾಖೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಅಪಾಯಕಾರಿಯಾಗಿ ಪರಿಣಮಿಸಿದ ವೆಟ್‌ಮಿಕ್ಸ್‌ ಹುಡಿ
ಅಂದು ಮಳೆಗಾಲದಲ್ಲಿ ಗುಂಡಿಗಳು ಅದರಲ್ಲಿ ನೀರು ತುಂಬಿ ಕೆಸರುಮಯ ರಸ್ತೆಯಾಗಿದ್ದ ಇಲ್ಲಿ ಇದೀಗ ಸಂಪೂರ್ಣ ಧೂಳುಮಯ ರಸ್ತೆಯಾಗಿ ಬದಲಾಗಿದೆ. ಮಳೆಗಾಲದಲ್ಲಿ ಗುಂಡಿಗೆ ತುಂಬಿಸಿದ್ದ ವೆಟ್‌ಮಿಕ್ಸ್‌ ಈಗಿನ ಬಿಸಿಲಿನ ಸಂಪೂರ್ಣ ಒಣಗಿದ್ದು, ವಾಹನಗಳ ಓಡಾಟದ ರಭಸಕ್ಕೆ ವೆಟ್‌ಮಿಕ್ಸ್‌ ಜಲ್ಲಿಯ ಕಲ್ಲುಗಳು ರಸ್ತೆಗೆ ಹರಡಿಕೊಂಡಿದೆ. ವೆಟ್‌ಮಿಕ್ಸ್‌ ಪುಡಿ ಬಿಸಿಲಿಗೆ ಒಣಗಿ ಧೂಳಿನ ಕಣಗಳಾಗಿ ಸವಾರರಿಗೆ ಸಂಕಟ ಮತ್ತು ಕಂಟಕವನ್ನು ತಂದೊಡ್ಡಿದೆ. ಅದರಲ್ಲಿಯೂ ಎರಡು-ಮೂರು ಸಂಖ್ಯೆಯಲ್ಲಿ ಘನ ವಾಹನಗಳು ಒಟ್ಟಿಗೆ ಸಾಗಿದಲ್ಲಿ ದ್ವೀಚಕ್ರ ವಾಹನ ಸವಾರರ ಪಾಡಂತೂ ಧೂಳಿನ ಮದ್ಯೆ ಓಡಾಡಲು ಪರದಾಡುವ ಸ್ಥಿತಿ ಇದೆ.

ಅಲ್ಲಲ್ಲಿ ನಡೆಯುತ್ತಿದೆ ಕಾಮಗಾರಿ
ಹಿರಿಯಡಕ ಕೋತ್ನಕಟ್ಟೆಯಿಂದ ಮುಂದಕ್ಕೆ ಸಾಗಿದರೆ ಭಜನೆಕಟ್ಟೆ ಅನಂತರ ಕುದಿ ಕ್ರಾಸ್‌ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರಸ್ತುತ ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದೆ. ಅಲ್ಲಲ್ಲಿ ರಸ್ತೆ ವಿಸ್ತರಣೆಗಾಗಿ ಗಿಡ, ಮರಗಳನ್ನು ಕತ್ತರಿಸಿ ಟ್ರಿಮ್ಮಿಂಗ್‌ ವರ್ಕ್‌ ನಡೆದಿದೆ. ಮಳೆ ನೀರು ಸಾಗಲು ಚರಂಡಿ ವ್ಯವಸ್ಥೆಗೆ ಪೈಪ್‌ಲೈನ್‌ ಕೆಲಸವು ನಡೆಯುತ್ತಿದೆ. ಜೆಸಿಬಿ ಮತ್ತು ಬೃಹತ್‌ ಯಂತ್ರೋಪಕರಣಗಳನ್ನು ಬಳಸಿ ಮಣ್ಣು ಅಗೆಯುವುದು ಸಹಿತ, ಇನ್ನಿತರ ಕಾಮಗಾರಿ ನಡೆಯುತ್ತಿದೆ. ಕೈಗೆತ್ತಿಕೊಂಡ ಕಾಮಗಾರಿ ಯಾವುದೇ ರೀತಿ ವಿಳಂಬವಾಗದಂತೆ ಲೋಕೋಪಯೋಗಿ ಇಲಾಖೆ ಸೂಕ್ತ ಕ್ರಮವಹಿಸಿ ಕಾಮಗಾರಿ ನಿರ್ವಹಿಸುವಂತೆ ಜನರ ಒತ್ತಾಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next