Advertisement
ಕಾರ್ಕಳ: ಕಾರ್ಕಳ ಪೊಲೀಸ್ ಠಾಣೆಯ ಪಕ್ಕದಲ್ಲೇ ಪೊಲೀಸ್ ಸಿಬಂದಿ ವರ್ಗಕ್ಕೆ ವಸತಿಗೃಹ ನಿರ್ಮಾಣವಾಗುತ್ತಿದೆ. 2018ರ ಜನವರಿಯಲ್ಲಿ ಕಾಮಗಾರಿಗೆ ಚಾಲನೆ ದೊರೆತಿದ್ದರೂ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಮಾತ್ರ ನಡೆದಿಲ್ಲ. ಟೆಂಡರ್ ನಿಯಮದಂತೆ 2019ರ ಮೇ ತಿಂಗಳಲ್ಲಿ ಗುತ್ತಿಗೆದಾರರು ಕಟ್ಟಡವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಬೇಕಿತ್ತು. ಅವಧಿ ಮುಗಿದು 10 ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಗುತ್ತಿಗೆದಾರರು ಇನ್ನೂ ಒಂದೆರಡು ತಿಂಗಳಲ್ಲಿ ಕಾಮಗಾರಿ ಮುಗಿಸುವುದು ಅನುಮಾನವಾಗಿದೆ.
ಕಾರ್ಕಳದ ಪೊಲೀಸ್ ವಸತಿ ಸಮುಚ್ಚಯದಲ್ಲಿ ಎರಡು ಅಂತಸ್ತಿನ 4 ಬ್ಲಾಕ್‌ಗಳಲ್ಲಿ ಒಟ್ಟು 48 ವಸತಿ ಗೃಹಗಳಿವೆ. ಇದರಿಂದ ಕಾರ್ಕಳ ನಗರ, ಗ್ರಾಮಾಂತರ ಹಾಗೂ ಅಜೆಕಾರು ಪೊಲೀಸ್ ಠಾಣೆಯ 48 ಪೊಲೀಸ್ ಕುಟುಂಬಕ್ಕೆ ಪ್ರಯೋಜನ ಲಭಿಸಲಿದೆ. ಕಾರ್ಕಳ ನಗರ ಠಾಣೆಯಲ್ಲಿ 44, ಗ್ರಾಮಾಂತರದಲ್ಲಿ 27, ಅಜೆಕಾರು ಠಾಣೆಯಲ್ಲಿ 27 ಸಿಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವರು ಹಳೆ ವಸತಿ ಗೃಹಗಳಲ್ಲಿ ವಾಸ್ತವ್ಯ ಹೂಡಿದ್ದರೆ ಮತ್ತೆ ಕೆಲವರು ಬಾಡಿಗೆ ಮನೆಯಲ್ಲಿ ವ್ಯಾಸ್ತವ್ಯ ಹೊಂದಿದ್ದಾರೆ.
Related Articles
Advertisement
ಪ್ರಾರಂಭದಲ್ಲಿ ಮರಳಿನ ಅಭಾವ ತಲೆದೋರಿದ ಹಿನ್ನೆಲೆಯಲ್ಲಿ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿತ್ತು. ಮರಳಿನ ಅಭಾವ ಖಾಸಗಿ ಮಾತ್ರವಲ್ಲದೇ ಸರಕಾರಿ ಕಟ್ಟಡ ನಿರ್ಮಾಣಕ್ಕೂ ಅಡೆತಡೆಯುಂಟು ಮಾಡಿತ್ತು.
ಶಿಥಿಲಾವಸ್ಥೆಯಲ್ಲಿ ಹಳೆ ವಸತಿಗೃಹ
35 ವರ್ಷದ ಹಿಂದೆ ನಿರ್ಮಾಣವಾದ ಪೊಲೀಸ್‌ಗೃಹಗಳು ಶಿಥಿಲಾವಸ್ಥೆಯಲ್ಲಿದ್ದು, ಮನೆ ಛಾವಣಿ ಕುಸಿಯುವ ಭೀತಿಯಲ್ಲಿದೆ. ಮಳೆಗಾಲದಲ್ಲಿ ಮಳೆ ನೀರು ಸೋರುವುದು ಸಾಮಾನ್ಯ ಇದರಿಂದಾಗಿ ಕರ್ತವ್ಯದ ಒತ್ತಡದ ಜತೆಗೆ ಮನೆ ಸಮಸ್ಯೆಯೂ ಸಿಬಂದಿಯನ್ನು ಕಾಡುತ್ತಿದೆ. ನಿರೀಕ್ಷೆ
ರಾಜ್ಯ ಗೃಹ ಸಚಿವರಾಗಿರುವ ಬಸವರಾಜ ಬೊಮ್ಮಾಯಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಹಿನ್ನೆಲೆಯಲ್ಲಿ ಉಡುಪಿ ಭಾಗದಲ್ಲಿನ ಪೊಲೀಸ್ ಠಾಣೆ, ಪೊಲೀಸ್ ವಸತಿಗೃಹಗಳ ಕುರಿತು ವಿಶೇಷ ಮುತುವರ್ಜಿ ವಹಿಸಲಿದ್ದಾರೆ ಎನ್ನುವ ನಿರೀಕ್ಷೆ ಪೊಲೀಸರದ್ದು. ಅಜೆಕಾರು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಸಿಬಂದಿ ನಕ್ಸಲ್ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಕಾರಣ ಹೊಸ ಪೊಲೀಸ್ ವಸತಿಗೃಹದಲ್ಲೇ ವಾಸ್ತವ್ಯ ಹೂಡಿದಲ್ಲಿ ತತ್‌ಕ್ಷಣಕ್ಕೆ ಕಾರ್ಯಪ್ರವೃತ್ತರಾಗಲು ಅನುಕೂಲವಾಗಲಿದೆ. ಪೊಲೀಸ್ ಠಾಣೆ ಹಾಗೂ ಉನ್ನತ ಹಂತದ ಪೊಲೀಸ್ ಅಧಿಕಾರಿಗಳ ವಸತಿ ಗೃಹ ಹೊರತುಪಡಿಸಿದಲ್ಲಿ ಈಗಿರುವ ಸಿಬಂದಿ ವಸತಿಗೃಹಕ್ಕೆ ನೀರಿನ ಸಮಸ್ಯೆ ಇದೆ. ಹೊಸ ಕಟ್ಟಡದ ಸಮೀಪ ಹೊಸ ಕೊಳವೆ ಬಾವಿ ಕೊರೆದು ಪಂಪ್ ಅಳವಡಿಸಿದ್ದರೂ ಪೈಪ್‌ಲೈನ್ ಕಾರ್ಯವಾಗಿಲ್ಲ. ಠಾಣೆಯ ಪಕ್ಕದಲ್ಲೇ ಇರುವ ಸರಕಾರಿ ಬಾವಿಗೆ ಪಂಪ್ ಅಳವಡಿಸಿ ಪೈಪ್‌ಲೈನ್ ಸಂಪರ್ಕ ನೀಡಿದಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ. ಶೀಘ್ರ ಮುಗಿಸಲು ಸೂಚನೆ
2019ರ ಮೇ ವೇಳೆ ವಸತಿಗೃಹದ ಕಾಮಗಾರಿ ಮುಗಿಯಬೇಕಿತ್ತು. ಕಾಮಗಾರಿ ವಿಳಂಬದ ಕುರಿತು ಕೆಎಸ್‌ಪಿಎಚ್, ಐಡಿಸಿಎಲ್, ಗುತ್ತಿಗೆದಾರರೊಂದಿಗೆ ಮಾತನಾಡಿ ಶೀಘ್ರವಾಗಿ ಕಾಮಗಾರಿ ಮುಗಿಸಿಕೊಡುವಂತೆ ಸೂಚಿಸಲಾಗುವುದು.
-ವಿ. ಸುನಿಲ್ ಕುಮಾರ್, ಶಾಸಕರು ಗಮನ ಹರಿಸಲಿ
ವಸತಿಗೃಹ ಕಾಮಗಾರಿ ಪೂರ್ಣಗೊಂಡು ಶೀಘ್ರವಾಗಿ ನಮಗೆ ದೊರೆತಲ್ಲಿ ಅನುಕೂಲವಾಗುತ್ತಿತ್ತು. ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲೂ ಸಂಬಂಧಪಟ್ಟವರು ಗಮನ ಹರಿಸಬೇಕು.
-ಹೆಸರು ಹೇಳಲಿಚ್ಛಿಸದ ಪೊಲೀಸ್ -ರಾಮಚಂದ್ರ ಬರೆಪ್ಪಾಡಿ