Advertisement

ಕಾರ್ಕಳ: ನಾಗನ ಕಲ್ಲಿಗೂ ಬೇಡಿಕೆ ಇಲ್ಲ ; ಸಾವಿರ ನಾಗನ ಕಲ್ಲುಗಳ ಸರದಾರರಿವರು!

01:05 PM Jul 24, 2020 | mahesh |

ಕಾರ್ಕಳ: ಕಾರ್ಕಳ ಅನೇಕ ಶಿಲ್ಪಿಗಳನ್ನು ಪಡೆದ ಊರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ರೆಂಜಾಳ ಗೋಪಾಲಕೃಷ್ಣ ಶೆಣೈ, ಸತೀಶ್‌ ಆಚಾರ್ಯ ಮುಂತಾದ ಮಹಾನ್‌ ಶಿಲ್ಪಿಗಳು ಇವರಲ್ಲಿ ಪ್ರಮುಖರು. ಆದರೆ ನಾಗನಕಲ್ಲುಗಳ ಕೆತ್ತನೆಯಲ್ಲಿ ಶಿಲ್ಪಿ ಸಚ್ಚಿದಾನಂದ ನಾಯಕ್‌ ಪ್ರಮುಖರು. ಇವರ ಕೈಯಿಂದ ತಯಾರಾಗುವ ಶಿಲಾಮೂರ್ತಿಗಳಿಗೆ ರಾಜ್ಯವಷ್ಟೆ ಅಲ್ಲ ಹೊರ ರಾಜ್ಯಗಳಲ್ಲೂ ಅತಿಯಾದ ಬೇಡಿಕೆಯಿದೆ. ಈ ಬಾರಿ ಕೊರೊನಾದಿಂದ ದೇವರ ಆರಾಧನೆಗೂ ಏಟು ಬಿದ್ದಿದ್ದು, ನಾಗನ ಕಲ್ಲು, ದೇವರ ಮೂರ್ತಿಗಳಿಗೆ ಬೇಡಿಕೆಯೂ ಕುಸಿದಿದೆ.

Advertisement

12 ಸಾವಿರಕ್ಕೂ ಆಧಿಕ ಕೆತ್ತನೆ
ಇವರು ತೆಳ್ಳಾರು ಗ್ರಾಮದ ರಾಮಚಂದ್ರ ನಾಯಕ್‌ ಮತ್ತು ದಿ| ಜಯಶ್ರೀ ದಂಪತಿ ಪುತ್ರ. ಇದುವರೆಗೆ 12 ಸಾವಿರಕ್ಕೂ ಅಧಿಕ ನಾಗನ ಕಲ್ಲು, ದೇವರ ಮೂರ್ತಿಗಳನ್ನು ಇವರು ರಚಿಸಿದ್ದಾರೆ. ಬಂಟ್ವಾಳ, ಬೆಳ್ತಂಗಡಿ ಪುತ್ತೂರಿನಾದ್ಯಾಂತ ನಾಗನ ಕೆತ್ತನೆಯ ಕಲ್ಲುಗಳನ್ನು ಪೂರೈಸುತಿದ್ದಾರೆ. ಶಿವಮೊಗ್ಗ, ವಿಜಯಪುರ, ಚಿಕ್ಕಮಗಳೂರು, ಹಾಸನ, ಉಡುಪಿ, ಕೊಡಗು, ಬೆಂಗಳೂರು ಬೆಳಗಾವಿ ಜಿಲ್ಲೆಗಳ ಜತೆಗೆ ಹೊರ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಕ್ಕೆ ಹೆಚ್ಚು ಮೂರ್ತಿಗಳನ್ನು ನೀಡಿದ್ದಾರೆ.

ಹೊಸತಕ್ಕೆ ಹೊಂದುವ ಕೆತ್ತನೆ
ವಿಭಿನ್ನ, ತಾಳ್ಮೆಯ ನಾಜೂಕಾದ ಕೆಲಸ. ಕೆತ್ತನೆಯ ಶೈಲಿ ಹೊಸತನಕ್ಕೆ ಹೊಂದಿಕೊಂಡಂತೆ ಬದಲಾವಣೆ ಸಚ್ಚಿದಾನಂದರ ವಿಶೇಷತೆಯಾಗಿದೆ. ಇವರ ಈ ಶೈಲಿಗೆ ಸ್ಥಳೀಯವಷ್ಟೆ ಅಲ್ಲ ಕೇರಳದ ಕೊಟ್ಟಾಯಂನ ಹಾಗೂ ಹೊರ ರಾಜ್ಯಗಳಲ್ಲಿ ಕೂಡ ಸಮ್ಮಾನ ಗೌರವಗಳು ಲಭಿಸಿವೆ.

ಕಲಾಕಾರ!
ಇವರು ಜೋಡುಕಟ್ಟೆಯ ಕೆನರಾ ಬ್ಯಾಂಕ್‌ನ ಕರಕುಶಲ ಅಧ್ಯಯನ ಕೇಂದ್ರ ದಲ್ಲಿ ಶಿಲೆಯ ಕೆತ್ತನೆಗಳ 1999-2000ನೇ ಸಾಲಿನ ವಿದ್ಯಾರ್ಥಿ. ಗುಣವಂತೇಶ್ವರ ಭಟ್‌ ಇವರ ಗುರುಗಳು. ನಾಗನ ಕಲ್ಲು ಹಾಗೂ ದೇವರ ಮೂರ್ತಿಗಳಿಗೆ ಜೀವಂತಿಕೆ ತುಂಬುವ ಅದ್ಭುತ ಕಲಾಕಾರ ಶಿಲ್ಪಿ ಗರಪಂಚಮಿಯ ಅವಧಿಯಲ್ಲಿ ನೆನಪಿಗೆ ಬರುತ್ತಾರೆ.

ಕೋವಿಡ್‌-19ರಿಂದ ಬೇಡಿಕೆ ಕುಸಿತ
ಕರಿಯ ಕಲ್ಲು ಕಾರ್ಕಳದ ಕೃಷ್ಣ ಶಿಲೆಯ ಕಲ್ಲಿನ ಮೂರ್ತಿಗೆ ಭಾರೀ ಬೇಡಿಕೆಯಿದೆ. ಪ್ರತಿ ವರ್ಷ 300ಕ್ಕೂ ಅಧಿಕ ನಾಗನ ಕಲ್ಲುಗಳಿಗೆ ಬೇಡಿಕೆ ಇರುತ್ತಿತ್ತು. ಈ ಬಾರಿ ಕೊರೊನಾದಿಂದ 15ರಿಂದ 20ಕ್ಕೆ ಇಳಿದಿದೆ. ಶೇ.10ರಷ್ಟು ಬೇಡಿಕೆಯಿದೆ. ಹಿಂದೆಯೇ ನಿರ್ಧರಿಸಿದವರು ಮಾತ್ರ ಮೂರ್ತಿ, ಕಲ್ಲಿಗೆ ಬೇಡಿಕೆ ಇರಿಸಿದ್ದಾರೆ. ಹೊಸದಾಗಿ ನಾಗಬನ, ಮೂರ್ತಿಗಳ
ನಿರ್ಮಾಣ ನಿರ್ಧಾರಗಳು ಇಲ್ಲ. ಕೋವಿಡ್ ನಾಗಾರಾಧನೆ ಮೇಲೂ ದುಷ್ಪರಿಣಾಮ ಬೀರಿದೆ.
-ಸಚ್ಚಿದಾನಂದ, ಶಿಲ್ಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next