Advertisement

ಉಪಯೋಗವಿಲ್ಲದೆ ಅನಾಥವಾದ ಕಾರ್ಕಳ ಪುರಸಭೆ ಕಟ್ಟಡ

01:00 AM Feb 08, 2019 | Harsha Rao |

ಕಾರ್ಕಳ: ಸರಕಾರದ ಅನುದಾನವನ್ನು ಯಾವೆಲ್ಲ ರೀತಿಯಲ್ಲಿ ವ್ಯರ್ಥ ಮಾಡಬಹುದು ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ. 2009ರಲ್ಲಿ ಕಾರ್ಕಳ ಪುರಸಭೆ ಮುಂದುವರಿಕಾ ಶಿಕ್ಷಣ ಕೇಂದ್ರ ತೆರೆಯುವ ಉದ್ದೇಶದಿಂದ ಪುರಸಭಾ ವ್ಯಾಪ್ತಿಯ ಕಲ್ಲೊಟ್ಟೆ ಎಂಬಲ್ಲಿ ಸುಸಜ್ಜಿತ ಕಟ್ಟಡವೊಂದನ್ನು ನಿರ್ಮಿಸಿತ್ತು. ಆದರೆ, ಕಟ್ಟಡ ನಿರ್ಮಾಣವಾಗಿ ಉದ್ಘಾಟನೆಗೊಂಡು ಹತ್ತು ವರ್ಷಗಳೇ ಕಳೆದರೂ ಉಪಯೋಗವಿಲ್ಲದೇ ಬಿದ್ದಿದೆ.

Advertisement

ಯಾರಿಗೇನು ನಷ್ಟ ?

ಪುರಸಭೆ 2009ರಲ್ಲಿ ಕಟ್ಟಡ ನಿರ್ಮಾಣ ಮಾಡಿ ಮೌನಕ್ಕೆ ಶರಣಾಯಿತೇ ವಿನಃ ಕಟ್ಟಡವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬಹುದು ಎಂಬ ನಿಟ್ಟಿನಲ್ಲಿ ಕಿಂಚಿತ್ತೂ ಯೋಚನೆ ಮಾಡಿಲ್ಲ. ಹೀಗಾಗಿ ಕಟ್ಟಡ ಉಪಯೋಗವಿಲ್ಲದೇ ಪಾಳು ಬಿದ್ದಿದೆ. ಆಡಳಿತ ವರ್ಗವೂ ಈ ನಿಟ್ಟಿನಲ್ಲಿ ಗಮನ ಹರಿಸಿಲ್ಲ. ಅಧಿಕಾರಿಗಳೂ ತಮಗೇನೂ ನಷ್ಟವಿಲ್ಲವೆಂದು ಸುಮ್ಮನಿದ್ದಾರೆ.

ಕಟ್ಟಡ ನಿರ್ಮಾಣಕ್ಕಾಗಿ ಎಷ್ಟು ವೆಚ್ಚವಾಗಿದೆ ಎಂಬ ಬಗ್ಗೆ ಪುರಸಭೆಯಲ್ಲಿ ಮಾಹಿತಿಯಿಲ್ಲ. ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿಯವರ ಗಮನಕ್ಕೆ ತಂದಾಗ, ಅಂದು ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಆ ಬಳಿಕ ಯಾವುದೇ ಉದ್ದೇಶಕ್ಕೆ ಬಳಕೆಯಾಗಿಲ್ಲ. ಹಾಗೆಯೇ ಮುಂದುವರಿಯುತ್ತಿದೆ ಎಂದರು. ಕಾರ್ಕಳ ಪೇಟೆ ಸಮೀಪದಲ್ಲೇ ಕಟ್ಟಡವಿರುವ ಕಾರಣ ಸರಕಾರದ ಯಾವುದಾದರೂ ಯೋಜನೆಗೆ ಕಟ್ಟಡವನ್ನು ಬಳಸಿಕೊಳ್ಳಬಹುದು ಅಥವಾ ಹರಾಜು ಮಾಡಿ ಪುರಸಭೆಗೆ ಆದಾಯ ಪಡೆಯುವ ಕಾರ್ಯವನ್ನಾದರೂ ಮಾಡಬಹುದು ಎನ್ನುವುದು ಸಾರ್ವಜನಿಕರ ಅಭಿಮತ.

ಅಂಗನವಾಡಿಗೆ ಬೇಡಿಕೆ

Advertisement

ಪುರಸಭೆ 4ನೇ ವಾರ್ಡ್‌ ಕಲ್ಲೊಟ್ಟೆಯ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ತೆರೆಯಲಾಗುತ್ತಿದೆ ಎಂದು ಸ್ಥಳೀಯರು ಆಶಾವಾದ ಹೊಂದಿದ್ದರು. ಆದರೆ, ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಈ ಕುರಿತು ಸಿಡಿಪಿಒ ಅವರನ್ನು ಸಂಪರ್ಕಿಸಿದಾಗ ಮುಂದುವರಿಕಾ ಶಿಕ್ಷಣಕ್ಕಾಗಿ ಪುರಸಭಾ ವತಿಯಿಂದ ಕಟ್ಟಡ ನಿರ್ಮಾಣವಾಗಿತ್ತು. ಅಲ್ಲಿ ಅಂಗನವಾಡಿ ತೆರೆಯುವ ಇರಾದೆ ಇಲ್ಲ ಎಂದಿದ್ದಾರೆ. ಆದರೆ ಈ ಕಟ್ಟಡವನ್ನು ಅಂಗನವಾಡಿಗಾದರೂ ನೀಡಬಹುದು ಎಂಬ ಆಶಾವಾದ ಇದೆ.

ಅಂಗನವಾಡಿಗಾಗಿ ಪ್ರಯತ್ನ

ಕಲ್ಲೊಟ್ಟೆ ಭಾಗದ ಪುಟಾಣಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ತೆರೆಯಲು ಪ್ರಯತ್ನಿಸಲಾಗುವುದು. 2009ರಲ್ಲಿ ಕಟ್ಟಡ ನಿರ್ಮಾಣವಾಗಿ ಉದ್ಘಾಟನೆಗೊಂಡಿತ್ತೇ ವಿನಃ ಇದರಿಂದ ಯಾವುದೇ ಪ್ರಯೋಜನ ಸ್ಥಳೀಯರಿಗೆ ದೊರೆತಿಲ್ಲ.

– ಶಶಿಕಲಾ ಪಿ. ಶೆಟ್ಟಿ ವಾರ್ಡ್‌ ಸದಸ್ಯರು, ಪುರಸಭೆ ಕಾರ್ಕಳ

ಬಾಡಿಗೆಗೆ ನೀಡಲಿ

ಕಲ್ಲೊಟ್ಟೆ ಕಟ್ಟಡದಲ್ಲಿ ಅಂಗನವಾಡಿ ತೆರೆಯಲು ಸಾಧ್ಯವಾಗದಿದ್ದಲ್ಲಿ ಅಂಗಡಿಯ ಉದ್ದೇಶಕ್ಕಾದರೂ ಪುರಸಭೆ ಬಾಡಿಗೆಗೆ ನೀಡಲಿ. ಇದರಿಂದ ಓರ್ವನಿಗೆ ಉದ್ಯೋಗ ಕಲ್ಪಿಸಿಕೊಟ್ಟಂತಾಗುವುದು. ಮಾತ್ರವಲ್ಲದೇ ಪುರಸಭೆಗೂ ಆದಾಯ ಸಿಗುತ್ತದೆ.

– ಕೆ.ಎಂ. ಕಲೀಲ್‌, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next