Advertisement

Karkala: ಹಕ್ಕುಪತ್ರಕ್ಕಾಗಿ ಸಲ್ಲಿಸಿದ್ದ 4,750ಕ್ಕೂ ಅಧಿಕ ಅರ್ಜಿ ತಿರಸ್ಕೃತ

06:11 PM Sep 14, 2023 | Team Udayavani |

ಕಾರ್ಕಳ: ಸ್ವಾಧೀನ ಹೊಂದಿ ಮನೆ ಕಟ್ಟಿ ಕುಳಿತು ದಶಕಗಳು ಕಳೆದರೂ ವಾಸವಿದ್ದ ಜಾಗದ ಭೂಮಿಯ ಒಡೆತನದ ಹಕ್ಕುಪತ್ರ ಬಡ ಕುಟುಂಬಗಳಿಗೆ ಸಿಕ್ಕಿಲ್ಲ. ಇದರಿಂದ ಕಾರ್ಕಳ ತಾಲೂಕಿನ 4750ಕ್ಕೂ ಅಧಿಕ ಕುಟುಂಬಗಳ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದು ಈ ಕುಟುಂಬಗಳು ಸರಕಾರಿ ಸವಲತ್ತುಗಳಿಂದ ವಂಚಿತವಾಗಿವೆ. ಸರಕಾರದ ನಿರ್ದೇಶನದ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ ಈ ಬಡಪಾಯಿಗಳು.

Advertisement

ಈಗಾಗಲೇ ಹಲವಾರು ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ. ಆದರೇ ಅರ್ಜಿ ಸಲ್ಲಿಸಿ ಇನ್ನು ಸಹಸ್ರಾರು ಮಂದಿ ಕಾಯುತ್ತಿದ್ದು ಅವರಿಗೆ ಹಕ್ಕು ಪತ್ರ ಸಿಕ್ಕಿಲ್ಲ. ಇವರು ಸರಕಾರದ ವಿವಿಧ ಯೋಜನೆಯಡಿ ಪಡೆಯಬಹುದಾದ ಹಲವು ಸವಲತ್ತುಗಳನ್ನು ಪಡೆಯುವಲ್ಲಿ ವಿಫ‌ಲಗೊಂಡು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ತಾಲೂಕಿನಲ್ಲಿ 94ಸಿನಲ್ಲಿ 6,103 ಅರ್ಜಿಗಳು ಸ್ವೀಕೃತಗೊಂಡು 1,191 ಹಕ್ಕುಪತ್ರ ವಿತರಣೆಯಾಗಿದೆ. 115 ಅರ್ಜಿ ವಿತರಣೆಗೆ ಬಾಕಿಯಿದೆ. 4, 637 ಅರ್ಜಿ ತಿರಸ್ಕೃತಗೊಂಡಿದೆ. 94ಸಿಸಿನಲ್ಲಿ ಸಲ್ಲಿಕೆಯಾದ 3,776 ಸ್ವೀಕೃತ ಅರ್ಜಿಗಳ ಪೈಕಿ 1,005 ಮಂದಿಗೆ ಹಕ್ಕುಪತ್ರ ವಿತರಿಸಲಾಗಿದ್ದು 100 ಅರ್ಜಿ ವಿತರಣೆಗೆ ಬಾಕಿಯಿದೆ. 2,488 ಅರ್ಜಿ ತಿರಸ್ಕೃತಗೊಂಡಿದೆ.

ಬಾಕಿಯಿದ್ದರೆ, ಸೌಕರ್ಯಗಳು ಸಿಗುತ್ತಿಲ್ಲ ದಶಕಗಳಿಂದ ಮನೆಕಟ್ಟಿ ವಾಸವಾಗಿದ್ದರೂ ಹಕ್ಕುಪತ್ರವಿಲ್ಲ ಎನ್ನುವ ಕಾರಣಕ್ಕೆ ಎಲ್ಲ
ಸೌಕರ್ಯಗಳನ್ನು ಇವರಿಗೆ ನಿರಾಕರಿಸಲಾಗುತ್ತಿದೆ. ಸರಕಾರದ ಯೋಜನೆಗಳು ಈ ಬಡಪಾಯಿ ಗಳಿಗೆ ತಲುಪುತ್ತಿಲ್ಲ, ಪ್ರಸ್ತುತ ಕುಮ್ಕಿಯಲ್ಲಿ ಸಲ್ಲಿಸಿದ ಅರ್ಜಿ ವಿಲೇವಾರಿಗಾಗಿ ಪ್ರಯತ್ನಿಸಲಾಗಿದ್ದು, ಸರಕಾರದ ನಿರ್ದೇಶನಕ್ಕಾಗಿ ಅರ್ಜಿದಾರರು
ಕಾಯುತ್ತಿದ್ದಾರೆ.

ಹಕ್ಕುಪತ್ರ ವಂಚಿತ ಈ ಕುಟುಂಬಗಳು ಕಳೆದ ಹಲವು ವರ್ಷಗಳಿಂದ ಕೂಲಿ, ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿವೆ. ಮನೆಗಳ ದುರಸ್ತಿ ಇನ್ನಿತರ ಕಾರ್ಯಗಳಿಗೆ ಕಷ್ಟಪಡುತ್ತಿದ್ದಾರೆ. ಇವರೆಲ್ಲರ ಆರ್ಥಿಕ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿ ಕಂಡುಬರುತ್ತಿವೆ. ಮಕ್ಕಳ ವಿದ್ಯಾಭ್ಯಾಸ ಇನ್ನಿತರ ಸೇವೆಗಳನ್ನು ಪೂರೈಸಿಕೊಳ್ಳುವಲ್ಲಿ ಅಸಹಾಯಕತೆ ವ್ಯಕ್ತಪಡಿಸುತ್ತಿವೆ.

Advertisement

ಅರ್ಜಿಗಳು ಯಾಕೆ ತಿರಸ್ಕೃತ
ಕುಮ್ಕಿ, ಪರಂಬೋಕು, ವಾಸ್ತವ್ಯವಿಲ್ಲದ ಜಾಗ ಇಂತಹ ಸ್ಥಳಗಳಿಗೆ ಸಂಬಂಧಿಸಿ ಮನೆ ನಿರ್ಮಿಸಿಕೊಂಡು ವಾಸವಿರುವ ಅರ್ಜಿದಾರರರಿಗೆ, ಪೂರ್ಣ ಪ್ರಮಾಣದ ಡೀಮ್ಡ್ ಫಾರೆಸ್ಟ್‌ ಸರ್ವೇ ನಂಬರ್‌ನಲ್ಲಿ ಆಶ್ರಯ ಪಡೆದುಕೊಂಡಿರುವ ಫ‌ಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಕಾನೂನಿನ ತೊಡಕುಗಳಿದ್ದು ಅಂತಹ ಅರ್ಜಿಗಳು ಬಾಕಿಯಾಗಿದೆ. 2015ರಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದ ಮನೆಗಳ ಸಕ್ರಮೀಕರಣಕ್ಕಾಗಿ ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಅನುಗುಣವಾಗಿ 94ಸಿ ಮತ್ತು 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅವಕಾಶವನ್ನು ಅಂದಿನ ಸರಕಾರ ನೀಡಿತ್ತು. ಆದರೆ ಡೀಮ್ಸ್ ಅರಣ್ಯ, ಕುಮ್ಕಿ ಹಕ್ಕು, ರಸ್ತೆ ಮಾರ್ಜಿನ್‌ ಎನ್ನುವ ಕಾರಣಗಳು ಅರ್ಜಿ ವಿಲೇವಾರಿಗೆ ತಡವಾಗಿತ್ತು ಇದೀಗ ಹಂತ ಹಂತವಾಗಿ ಹಕ್ಕು ಪತ್ರ ವಿತರಿಸಲಾಗಿದ್ದು ಕಾನೂನಿನಡಿ ಸಾಧ್ಯವಾಗದೆ ಇರುವುದು ಅತೀ ಹೆಚ್ಚಿನ ಪ್ರಮಾಣದಲ್ಲಿ ವಿಲೇವಾರಿಗೆ ಬಾಕಿಯಿದೆ.

ಹಲವರಿಗೆ ನೀಡಲಾಗಿದೆ ಅರ್ಜಿ ಸಲ್ಲಿಸಿದ ಫ‌ಲಾನುಭವಿಗಳ ಪೈಕಿ ಕಾನೂನು ಚೌಕಟ್ಟಿನಲ್ಲಿ ಸಾಧ್ಯವಿರುವವರಿಗೆ ಹಕ್ಕುಪತ್ರ ಈಗಾಗಲೇ ನೀಡಲಾಗಿದೆ. ಕಾನೂನುನಡಿ ಕೊಡಲು ಸಾಧ್ಯವಿಲ್ಲದ ಅರ್ಜಿಗಳನ್ನು ಉಳಿಸಿಕೊಂಡಿದ್ದು, ಸರಕಾರದ ನಿರ್ದೇಶನ ಬಂದಲ್ಲಿ ಅಂತಹ ಫ‌ಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುವುದು.

-ಅನಂತಶಂಕರ ಬಿ., ತಹಶೀಲ್ದಾರ್‌ ಕಾರ್ಕಳ

ಯೋಜನೆಗಳು ದಕ್ಕುತ್ತಿಲ್ಲ‌ ಅನೇಕ ವರ್ಷಗಳಿಂದ ಮನೆ ಕಟ್ಟಿ ವಾಸವಾಗಿದ್ದೇವೆ. ಹಕ್ಕುಪತ್ರವಿಲ್ಲದೆ ಯಾವುದೇ ಸರಕಾರದ ಯೋಜನೆಗಳು ನಮ್ಮ ಮನೆ ತಲುಪುತ್ತಿಲ್ಲ. ಸರಕಾರ ನಮಗೆ ಹಕ್ಕುಪತ್ರ ನೀಡಿದಲ್ಲಿ ಸರಕಾರದ ಯೋಜನೆಗಳ ಪ್ರಯೋಜನ ಪಡೆಯುವುದಕ್ಕೆ ನಮಗೂ ಅವಕಾಶ ಸಿಗುತ್ತದೆ. ಜೀವನಕ್ಕೆ ದಾರಿಯಾಗುತ್ತದೆ.
-ಕುಸುಮಾ, ಫ‌ಲಾನುಭವಿ

*ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next