Advertisement

ಕಾರ್ಕಳ: ಕಟಾವಿಗೂ ಮುನ್ನ ಹೊಲಕ್ಕೆ ಕಾಡುಕೋಣ ಹಾಜರು!

01:20 PM Jan 31, 2024 | Team Udayavani |

ಕಾರ್ಕಳ: ಪ್ರಕೃತಿ ವೈಪರೀತ್ಯದಿಂದಾಗಿ ಸರಿಯಾದ ಮಳೆ ಇಲ್ಲದೆ ರೈತರಿಗೆ ಸರಿಯಾದ ಬೆಳೆ ಬೆಳೆಯಲಾಗುತ್ತಿಲ್ಲ. ಅಕಾಲಿಕವಾಗಿ ಸುರಿದ ಮಳೆಯಿಂದ ಬೀಜ ಬಿತ್ತನೆಯೂ ತಡವಾಗಿತ್ತು. ಸಸಿಗಳು ನಾಶವಾಗಿದ್ದವು. ಜತೆಗೆ ಭತ್ತಕ್ಕೆ ಬಾಧಿಸಿದ ರೋಗ ಕೃಷಿಕರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಇದರ ಮಧ್ಯೆ ಕಾಡು ಪ್ರಾಣಿಗಳ ಹಾವಳಿಯಿಂದ ಇದ್ದ ಬೆಳೆಯನ್ನು ಉಳಿಸಿಕೊಳ್ಳಲಾಗದ ಸಂದಿಗ್ಧ ಸ್ಥಿತಿ ಕೃಷಿಕರದ್ದಾಗಿದೆ.

Advertisement

50 ಕ್ವಿಂಟಾಲ್‌ ಭತ್ತ ನಿರೀಕ್ಷೆ
ಇಲ್ಲೊಬ್ಬ ಕೃಷಿಕರು ಸ್ವಂತ ಹೊಲದ ಜತೆಗೆ ಹಡಿಲು ಬಿದ್ದ ಭೂಮಿಯನ್ನು ಪಡೆದು ಭತ್ತದ ಬೀಜ ಬಿತ್ತಿದ್ದರು. ಹೊಲದಲ್ಲಿ ಪೈರುಗಳಾಗಿ ಸಿದ್ಧವಾಗುವ ಮುಂಚಿತ ಸಸಿ ಹಂತದಲ್ಲಿ ಕಾಡುಕೋಣ ಹೊಲಕ್ಕೆ ಲಗ್ಗೆ ಇಟ್ಟ ಪರಿಣಾಮ
ಎಕರಗಟ್ಟಲೆ ಭತ್ತದ ಸಸಿ ನಾಶವಾಗಿದೆ. ಹೊಲವನೆಲ್ಲ ಕಾಡುಕೋಣ ಮೇಯ್ದ ಪರಿಣಾಮ ಕೃಷಿಕ ನಿರೀಕ್ಷಿಸಿದ್ದ 50 ಕ್ವಿಂಟಾಲ್‌ ಭತ್ತದ ನಿರೀಕ್ಷೆ ಮಣ್ಣು ಪಾಲಾಗಿದೆ.

ಹಡಿಲು ಬಿದ್ದ ಹೊಲ ಬಿತ್ತಿದ್ದರು
ಪ್ರಾಕೃತಿಕ ವಿಕೋಪದಲ್ಲಿನ ವ್ಯತ್ಯಯ, ಮಳೆಯ ಸುರಿಯುವಿಕೆಯಲ್ಲಿನ ವ್ಯತ್ಯಾಸ, ಭತ್ತ ಕೃಷಿಗೆ ತಗಲಿದ ರೋಗ ಮಧ್ಯೆ ಭತ್ತದ ನಾಟಿ, ಬೀಜ ಬಿತ್ತನೆ ಈ ಬಾರಿ ತ್ರಾಸದಾಯಕವಾಗಿತ್ತು. ಇದರ ನಡುವೆಯೂ ಮಿಯ್ನಾರು ಗ್ರಾಮದ ಬಲಿಪರಪಾಡಿ ಎಂಬಲ್ಲಿಯ ಕೃಷಿಕ ರಾಜೇಶ್‌ ಜೈನ್‌ ತನ್ನ ಸ್ವಂತ ಹೊಲದ ಜತೆಗೆ ಇಲ್ಲಿನ ಹಡಿಲು ಬಿದ್ದ ಗದ್ದೆಗಳನ್ನು ಪಡೆದು ನಾಟಿ, ಬೀಜ ಬಿತ್ತನೆ ಮಾಡಿದ್ದರು. ಆರು ಎಕರೆ ಹೊಲದಲ್ಲಿ 1 ಕ್ವಿಂಟಾಲ್‌ 10ಕ್ಕೂ ಅಧಿಕ ಕೆ.ಜಿ. ಬೀಜ ಬಿತ್ತನೆ ನಡೆಸಿದ್ದರು. ಜತೆಗೆ ನಾಟಿ ಕೂಡ ಮಾಡಿದ್ದರು.

ಬಿತ್ತಿದ್ದ ಬೀಜ ಮೊಳಕೆ ಬಂದು ಸಸಿಗಳಾಗಿ ಎದ್ದು ನಿಂತಿತ್ತು. ಭರಪೂರ ಫ‌ಸಲು ನೀಡುವ ನಿರೀಕ್ಷೆಯನ್ನು ಅದು ಹುಟ್ಟಿಸಿತ್ತು. ಆದರೇ ಜ.26 ತಡರಾತ್ರಿ ಕಳೆದು ಬೆಳಗ್ಗೆದ್ದು ಹೊಲಕ್ಕೆ ಬಂದು ನೋಡಿದರೆ ಎಕರೆಗಟ್ಟಲೆ ಹೊಲದ ಸಸಿ ಸಂಪೂರ್ಣ ನಾಶವಾಗಿ ಹೋಗಿದೆ. ಒಂದೆ ದಿನದಲ್ಲಿ ಎಕರೆಗಟ್ಟಲೆ ಫ‌ಸಲು ನಷ್ಟವಾಗಿದೆ. ಕಷ್ಟಪಟ್ಟು ದುಡಿದ ಶ್ರಮ ರಾತ್ರಿ ಬೆಳಗಾಗುವುದರೊಳಗೆ ವ್ಯರ್ಥವಾಗಿದಲ್ಲದೆ ವ್ಯಯಿಸಿದ ಸಹಸ್ರಾರು ರೂ. ಕಳೆದುಕೊಂಡು ನಷ್ಟ ಕ್ಕೆ ಸಿಲುಕಿದ್ದಾರೆ,

ಬೆಳಗ್ಗಿನ ಜಾವ ಬಂದಿರುವ ಶಂಕೆ
ಕಾಡುಕೋಣಗಳ ಹಿಂಡು ಇವರ ಎಕರೆಗಟ್ಟಲೆ ಭತ್ತದ ಗದ್ದೆಗೆ ಇಳಿದು ಧಾಳಿ ನಡೆಸಿದೆ. ಭತ್ತದ ಸಸಿಯನ್ನು ತಿಂದು ನಾಶಪಡಿಸಿದೆ, ಆರು ಎಕರೆಯಲ್ಲಿ ಬಲಿಪರ ಪಾಡಿಯ ಎರಡು ಎಕರೆ ಭತ್ತದ ಗದ್ದೆ ಸಂಪೂರ್ಣ ನಾಶವಾಗಿದ್ದು, ಹೊಲವನ್ನು ಸಂಪೂರ್ಣ ಮೇಯ್ದಿದೆ. ಬೆಳಗ್ಗಿನ ಜಾವದಲ್ಲಿ ಕಾಡುಕೋಣಗಳು ಗದ್ದೆಗೆ ಲಗ್ಗೆ ಇಟ್ಟಿರುವ ಸಾಧ್ಯತೆಗಳಿದ್ದು ಸಸಿಗಳಿರಬೇಕಿದ್ದ ಹೊಲ ಹಾಗೂ ದಂಡೆ ಪೂರ್ತಿ ಕಾಡುಕೋಣದ ಹೆಜ್ಜೆಗಳೇ ಕಾಣುತ್ತಿವೆ. ಹಗಲು ಹೊತ್ತಿನಲ್ಲೂ ಗದ್ದೆಯ ನೀರು ಕೆಂಪಾಗಿ ಕಾಣಬರುತ್ತಿತ್ತು..ಇದರಿಂದಾಗಿ ಬೆಳಗ್ಗಿನ ಜಾವವೇ ಧಾಳಿಯಿಟ್ಟಿರುವ ಶಂಕೆ ಯಿದೆ.

Advertisement

ರೋಗದಿಂದ ಪಾರು ಮಾಡಿದ್ದೆವು
ಬೀಜ ಬಿತ್ತನೆ ನಡೆದು ಸಸಿಗಳು ಬಂದಾಗ ರೋಗ ಭಾದೆ ಕಂಡುಬಂತಿತ್ತು. ಒಂದು ಜಾತಿಯ ಹಾರುವ ಕೀಟ (ಹಾರುವ ಪಾತೆ ದೂಪದ್ದು) ಮೊಳಕೆ ಹಂತದಲ್ಲೆ ತಿಂದು ಸಸಿ ಕರಗಿ ಹೋಗಿದ್ದವು. ಸಕಾಲದಲ್ಲಿ ಔಷಧ ಸಿಂಪಡಣೆ ನಡೆಸಿದ ಕಾರಣ ಅದರಿಂದ ಪಾರಾಗಿದ್ದು ಸಸಿ ಚೆನ್ನಾಗಿ ಬಂದಿತ್ತು.

ದಟ್ಟ ಕಾಡಿಗೆ ಅಟ್ಟಬೇಕು
ಕಾಡುಕೋಣಗಳನ್ನು ಸಂಪೂರ್ಣವಾಗಿ ಭಯಪಡಿಸಿ ಕಾಡಿಗೆ ಅಟ್ಟಲು ಸಾಧ್ಯವಿಲ್ಲ. ಹೀಗಾಗಿ ಬೇಲಿ ಅಳವಡಿಕೆ, ಸಣ್ಣ ಪ್ರಮಾಣದಲ್ಲಿ ಪ್ರತಿರೋಧ ಗಳನ್ನು ತೋರುವ ಮೂಲಕ ನಾಡಿಗೆ ಬರದಂತೆ ನೋಡಿಕೊಳ್ಳಬೇಕಿದೆ. ಕಾಡುಕೋಣ ಇತರ ಪ್ರಾಣಿಗಳಂತೆ ಅಲ್ಲ. ಅವುಗಳು ಮನುಷ್ಯರ ಮೇಲೆ ದಾಳಿಗೂ ಮುಂದಾಗುತ್ತವೆ. ಹಾಗಾಗಿ ನಾಡಿನ ಕಡೆಗೆ
ಬರುವ ಕಾಡುಕೋಣಗಳನ್ನು ದಟ್ಟ ಕಾಡಿಗೆ ಅಟ್ಟುವ ಕೆಲಸ ಅರಣ್ಯ ಇಲಾಖೆ ನಡೆಸಿದರೆ ಸ್ವಲ್ಪ ಮಟ್ಟಿಗಾದರೂ ಸಮಸ್ಯೆಗೆ ಪರಿಹಾರ ಸಿಗಬಹುದು ಎನ್ನುವುದು ಇಲ್ಲಿನ ಕೃಷಿಕರ ಒತ್ತಾಯವಾಗಿದೆ.

ನಗರ ತ್ಯಜಿಸಿ ಹಳ್ಳಿಗೆ ಬಂದ ರೈತ
ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲಿದ್ದ ರಾಜೇಶ್‌ ಜೈನ್‌ ನಗರ ಜೀವನ ತ್ಯಜಿಸಿ ಊರಿಗೆ ಮರಳಿದ್ದರು. ಕೃಷಿಯಲ್ಲಿ ಆಸಕ್ತಿ ಇದ್ದಿದ್ದರಿಂದ ಆರಂಭದಲ್ಲಿ ಹೈನುಗಾರಿಕೆ ಆರಂಭಿಸಿದ್ದರು.

ಬಳಿಕ ಹೈನುಗಾರಿಕೆಯಲ್ಲಿ ನಿರೀಕ್ಷಿತ ಲಾಭವಾಗದ ಕಾರಣ ಹೈನುಗಾರಿಕೆ ಜತೆಯಲ್ಲೆ ಭತ್ತ ಬೇಸಾಯದಲ್ಲೂ ತೊಡಗಿಸಿಕೊಂಡಿದ್ದಾರೆ. ಸ್ವಂತ ಜಮೀನಿನ ಜೊತೆಗೆ ಪರಿಸರದ ಹಡಿಲು ಬಿದ್ದ ಹೊಲವನ್ನು ಶ್ಯಾಮ ದೇವಾಡಿಗ, ಕುಟ್ಟಿ
ದೇವಾಡಿಗ ಎಂಬವರಿಂದ ಪಡೆದು ಅದರಲ್ಲಿ ಭತ್ತ ಬೇಸಾಯ ನಡೆಸಿದ್ದರು. ಬಲಿಪರಪಾಡಿ ಹಾಗೂ ಕೆಳಗಿನ ಬೈಲು ಎಂಬಲ್ಲಿ ಸುÊಮಾರು 6 ಎಕರೆ ಹೊಲದಲ್ಲಿ ಭತ್ತದ ನಾಟಿ, ಬೀಜ ಬಿತ್ತನೆ ಮಾಡಿದ್ದರು.

ಶ್ರಮ ವ್ಯರ್ಥವಾಯ್ತು ಕೂಲಿಯಾಳುಗಳ ಕೊರತೆ ಇನ್ನಿತರ ತಾಪತ್ರಯದ ನಡುವೆಯೂ ಬಿತ್ತನೆ ಮಾಡಿ 3.4 ತಿಂಗಳು ಕಷ್ಟಪಟ್ಟು ದುಡಿದ ಪರಿಣಾಮ ಒಳ್ಳೆಯ ಸಸಿಗಳಾಗಿ ಬೆಳೆದಿದ್ದವು. ಫೆಬ್ರವರಿ ಮಾರ್ಚ್‌ ತಿಂಗಳಿಗೆ ನಾಟಿ ಸಾಧ್ಯವಿತ್ತು. ಹೆಚ್ಚಿನ ಭತ್ತದ ನಿರೀಕ್ಷೆಯಲ್ಲಿ ನಾನಿದ್ದೆ. ಆದರೆ ರಾತ್ರಿ ಬೆಳಗಾಗುವುದರೊಳಗೆ ಕಾಡುಕೋಣ ಹೊಲಕ್ಕೆ ದಾಳಿ ಇಟ್ಟು ನಾಶಪಡಿಸಿದನ್ನು ಕಂಡ ಬಳಿಕ ನಿರಾಶೆ, ಚಿಂತೆಯಾಗಿದೆ.
*ರಾಜೇಶ್‌ ಜೈನ್‌, ಸಂತ್ರಸ್ತ ಕೃಷಿಕ.

* ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next