Advertisement

ಕಾರ್ಕಳ: ಹೆಚ್ಚಿದ ವಾಹನ ದಟ್ಟಣೆ, ನಿರ್ವಹಣೆ ಸವಾಲು!

08:43 PM Sep 23, 2020 | mahesh |

ಕಾರ್ಕಳ: ಪೇಟೆಗೆ ಕಾಲಿಟ್ಟರೆ ಪಾದಚಾರಿಗಳಿಗೆ ಭಯ. ಫ‌ುಟ್‌ಪಾತ್‌, ರಸ್ತೆಗಳ ಮೇಲೆ ಅಡ್ಡಾದಿಡ್ಡಿ ವಾಹನಗಳ ನಿಲುಗಡೆ, ನಡೆದಾಡುವುದಕ್ಕೂ ಪರದಾಡಬೇಕಾದ ಪರಿಸ್ಥಿತಿ. ಇದು ಕಾರ್ಕಳ ಪೇಟೆಯ ಸದ್ಯದ ಚಿತ್ರಣ. ಕಿರಿದಾದ ರಸ್ತೆ ಮತ್ತು ಪಾರ್ಕಿಂಗ್‌ ಸೌಲಭ್ಯ ಇಲ್ಲದೆ ಇರುವುದರಿಂದ ಜನರು ತೊಂದರೆಗೊಳಗಾಗಿದ್ದಾರೆ. ಪಾದಚಾರಿ ಗಳು, ಸವಾರರು, ವ್ಯಾಪಾರಸ್ಥರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಒಳಚರಂಡಿ ಸಮಸ್ಯೆ ನಿವಾರಣೆವರೆಗೂ ಮುಕ್ತಿಯಿಲ್ಲ ಒಳಚರಂಡಿ ಅವ್ಯವಸ್ಥೆ, ಅಪೂರ್ಣ ಚರಂಡಿ ಕಾಮಗಾರಿ, ಜಾಗದ ಇಕ್ಕಟ್ಟು ಇದೆಲ್ಲ ಸಮಸ್ಯೆಗಳಿಂದ ಪೇಟೆಯ ಜನರು, ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಲೇ ಇದ್ದಾರೆ. ಹಳೆ ಬಸ್‌ ನಿಲ್ದಾಣದಿಂದ ಬಂಡೀಮಠ ಹಾಗೂ ಹಳೆ ಬಸ್‌ ನಿಲ್ದಾಣದಿಂದ ಅನಂತಶಯನದ ತನಕವೂ ಈ ಸಮಸ್ಯೆ ಇದೆ. ಇಲ್ಲಿಗೆ ಅತೀವ ಟ್ರಾಫಿಕ್‌ ಜಾಮ್‌ ಆಗುತ್ತಿರುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲ್ಲಿಸಲಾಗುತ್ತದೆ. ಪ್ರಯಾಣಿಕರನ್ನೂ ಹತ್ತಿ-ಇಳಿಸಲಾಗುತ್ತದೆ. ರಸ್ತೆಯೂ ಇಲ್ಲಿ ಹಾಳಾಗಿದೆ.

Advertisement

ನಿಲುಗಡೆ ವ್ಯವಸ್ಥೆ
ದೂರದ ಊರುಗಳಿಗೆ ಪ್ರಯಾಣಿಸುವ ವರು, ವಿವಿಧ ಕೆಲಸ ಮಾಡಿಸಲು ತಾಲೂಕು ಕೇಂದ್ರಕ್ಕೆ ಬರುವವ‌ರು ಜಾಗದ ಕೊರತೆಯಿಂದ ತಮ್ಮ ದ್ವಿಚಕ್ರ ಹಾಗೂ ಲಘು ವಾಹನಗಳನ್ನು ಪೇಟೆಯಲ್ಲೇ ರಸ್ತೆ ಬದಿ ನಿಲ್ಲಿಸುತ್ತಾರೆ. ಇದರಿಂದ ಟ್ರಾಫಿಕ್‌ ಅವ್ಯವಸ್ಥೆಗೆ ಕಾರಣವಾಗುತ್ತದೆ. ವಾಹನ ನಿಲುಗಡೆಗೆ ಸೂಕ್ತ ಜಾಗವಿದ್ದರೆ ಅನುಕೂಲವಾಗುತ್ತದೆ. ಯುಜಿಡಿ ಕೆಲಸ ಮುಗಿಯುವ ವರೆಗೆ ಬಸ್‌ಗಳಿಗೆ ಬಂಡಿಮಠದಲ್ಲಿ ಬಸ್‌ ನಿಲುಗಡೆ ವ್ಯವಸ್ಥೆ ಕಲ್ಪಿಸಿದರೆ ಉತ್ತಮ ಎನ್ನುವ ಅಭಿಪ್ರಾಯಗಳೂ ಇದೆ.

ಇಕ್ಕಟ್ಟಲ್ಲಿ ನಗರ ಠಾಣೆ ಪೊಲೀಸರು!
ಟ್ರಾಫಿಕ್‌ ನಿಯಂತ್ರಣ ನಗರ ಠಾಣೆ ಪೊಲೀಸರಿಗೂ ಕಷ್ಟವಾಗಿದೆ. ಸಿಬಂದಿ ಕೊರತೆ, ಕೋವಿಡ್‌ ಕ್ವಾರಂಟೈನ್‌, ಪಹರೆ, ಅಪರಾಧ ಪ್ರಕರಣಗಳ ಪರಿಶೀಲನೆ, ರೌಂಡ್ಸ್‌, ಆರೋಪಿಗಳನ್ನು ಕರೆದೊಯ್ಯುವುದು ಇತ್ಯಾದಿ ಒತ್ತಡಗಳಲ್ಲಿದ್ದಾರೆ. ಇದರೊಂದಿಗೆ ಟ್ರಾಫಿಕ್‌ ಸಮಸ್ಯೆ ಹೊರೆಯಾಗಿದೆ.

ಎಲ್ಲೆಲ್ಲಿ ಟ್ರಾಫಿಕ್‌ ಸಮಸ್ಯೆ?
ಮೂರು ಮಾರ್ಗ ಸರ್ಕಲ್‌, ವೆಂಕಟರಮಣ ದೇವಸ್ಥಾನ, ಹಳೆ ಬಸ್‌ಸ್ಟಾಂಡ್‌, ಆನೆಕೆರೆ ಪ್ರದೇಶ, ಮಾರುಕಟ್ಟೆ ರಸ್ತೆ, ಅನಂತಶಯನದಲ್ಲಿ ಟ್ರಾಫಿಕ್‌ ಜಾಮ್‌ ಹೆಚ್ಚು. ಈ ಎಲ್ಲ ಕಡೆಗಳಲ್ಲಿ ವಾಹನ ಪಾರ್ಕಿಂಗ್‌ ರಸ್ತೆಯಲ್ಲೇ ಮಾಡುತ್ತಿರುತ್ತಾರೆ.

ವಿಸ್ತರಣೆ ಆಗಿಲ್ಲ
ನಗರ ವೇಗವಾಗಿ ಬೆಳೆಯುತ್ತಿದೆ. ಹಾಗೆಂದು ರಸ್ತೆ ವಿಸ್ತರಣೆ ಆಗಿಲ್ಲ. ಖಾಸಗಿ ಭೂಮಿ ಇತ್ಯಾದಿ ಅನೇಕ ತೊಡಕುಗಳು ಇಲ್ಲಿವೆ. ವಾಹನ ದಟ್ಟಣೆಯೂ ಹೆಚ್ಚಿ ಅವುಗಳನ್ನು ಎಲ್ಲೆಂದರಲ್ಲಿ ಪಾರ್ಕ್‌ ಮಾಡುವುದರಿಂದ ರಸ್ತೆಗಳಲ್ಲಿ ವಾಹನ ಓಡಾಟಕ್ಕೆ ಸಮಸ್ಯೆಯಾಗಿದೆ. ಟ್ರಾಫಿಕ್‌ ಜಾಮ್‌ ಸಾಮಾನ್ಯವಾಗಿದೆ.

Advertisement

ಇದ್ದವರನ್ನು ಬಳಸಿ ನಿರ್ವಹಣೆ
ಪೇಟೆಯೊಳಗೆ ವಿಪರೀತ ಟ್ರಾಫಿಕ್‌ ಸಮಸ್ಯೆ ಇದೆ. ಜಾಗದ ಕೊರತೆಯೂ ಇದೆ. ಕ್ರಮಕ್ಕೆ ಮುಂದಾದರೆ ಸಾರ್ವಜನಿಕರು, ಸವಾರರು ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ. ನಾವು ಅಸಹಾಯಕರಾಗುತ್ತೇವೆ. ಸಿಬಂದಿ ಕೊರತೆಯಿದ್ದರೂ ಟ್ರಾಫಿಕ್‌ ಜಾಮ್‌ ಆಗುವ ಕಡೆಗಳಲ್ಲಿ ಇರುವವರನ್ನೇ ನೇಮಿಸಿ ನಿರ್ವಹಣೆ ಮಾಡುತ್ತೇವೆ.
-ಮಧು. ಬಿ.ಇ., ಸಬ್‌ ಇನ್‌ಸ್ಪೆಕ್ಟರ್‌, ನಗರ ಠಾಣೆ ಕಾರ್ಕಳ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next