Advertisement

Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !

01:06 PM Nov 18, 2024 | Team Udayavani |

ಕಾರ್ಕಳ: ದೇಶದಾದ್ಯಂತ ಎರಡು ತಿಂಗಳ ಹಿಂದೆಯೇ ಆರಂಭಗೊಳ್ಳಬೇಕಿದ್ದ ಪಶು ಗಣತಿ ಪ್ರಕ್ರಿಯೆ ಆ್ಯಪ್‌ನಲ್ಲಿ ತಾಂತ್ರಿಕ ಸುಧಾರಣೆ ಮತ್ತು ದೇಶದ ವಿವಿಧ ಭಾಗದಲ್ಲಿ ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲಿ ಪ್ರಕ್ರಿಯೆ ಆರಂಭವಾಗುತ್ತಿದ್ದು, ಉಡುಪಿಯಲ್ಲಿಯೂ ಈ ವಾರದಿಂದ ಅಧಿಕೃತ ಚಾಲನೆ ದೊರೆತಿದೆ.

Advertisement

ಆದರೆ ಪಶು ಗಣತಿಯಲ್ಲಿ ಜನರ ಅಚ್ಚುಮೆಚ್ಚಿನ ಸಾಕು ಪ್ರಾಣಿಯಾಗಿರುವ ಮಾರ್ಜಾಲ ಸಮೂಹ ಬೆಕ್ಕುಗಳನ್ನು ಈ ಬಾರಿಯೂ ಕಡೆಗಣಿಸಲಾಗಿದೆ. ಗಣತಿಯಲ್ಲಿರುವ ಹೈನುಗಾರಿಕೆ ಉದ್ದೇಶ ಮತ್ತು ವಿವಿಧ ಸಾಕು ಪ್ರಾಣಿಗಳನ್ನು ಉಲ್ಲೇಖೀಸಲು ಪಟ್ಟಿಗಳನ್ನು ಮಾಡಲಾಗಿದೆ. ಹಿಂದೆ ಪುಸ್ತಕಗಳಲ್ಲಿ ಬರೆಯುತ್ತಿದ್ದರೆ ಇದೇ ಮೊದಲ ಬಾರಿಗೆ ಸ್ಮಾರ್ಟ್‌ ಫೋನ್‌ ಮೂಲಕ ಡಿಜಿಟಲ್‌ ಗಣತಿ ನಡೆಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಪಶು ಇಲಾಖೆಯು ‘ಲೈವ್‌ ಸ್ಟಾಕ್ಸ್‌ ಸೆನ್ಸಸ್‌’ ಎಂಬ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದೆ. ಮೊಬೈಲ್‌ ನೆಟ್‌ವರ್ಕ್‌ ಇಲ್ಲದ ಸ್ಥಳಗಳಲ್ಲಿಯೂ ಇದು ಕಾರ್ಯನಿರ್ವಹಿಸುತ್ತದೆ. ಪ್ರತೀ ಐದು ವರ್ಷಕ್ಕೊಮ್ಮೆ ಈ ಪಶು ಗಣತಿ ನಡೆಯಲಿದ್ದು, ಈ ಹಿಂದೆ 2019ರಲ್ಲಿ 20ನೇ ಗಣತಿ ನಡೆದಿತ್ತು.

ಬೆಕ್ಕುಗಳನ್ನು ಪರಿಗಣಿಸಬೇಕಿತ್ತು
ನಾಯಿಗಳನ್ನು ಗಣತಿಯಲ್ಲಿ ಪರಿಗಣಿಸಿರುವಾಗ ಬೆಕ್ಕುಗಳ ಬಗ್ಗೆಯೂ ಗಣತಿಯಲ್ಲಿ ಮಹತ್ವ ನೀಡಬೇಕಿತ್ತು. ಪರಿಸರ ಸಮತೋಲನ, ಆಹಾರ ಸರಪಳಿಯಲ್ಲಿ ಬೆಕ್ಕುಗಳ ಪಾತ್ರವಿದೆ ಎಂಬುದು ಬೆಕ್ಕು ಸಾಕಣೆದಾರರ ಅಭಿಪ್ರಾಯ. ಇತ್ತೀಚಿನ ದಿನಗಳಲ್ಲಿ ಪ್ಯಾನ್‌ಲ್ಯೂಕೋಪೀನಿಯ ಎಂಬ ಮಾರಕ ವೈರಸ್‌ನಿಂದ ಬೆಕ್ಕುಗಳ ಸಮೂಹ ತತ್ತರಿಸಿದ್ದು, ಸಾವಿರಾರು ಬೆಕ್ಕುಗಳು ಈ ಕಾಯಿಲೆಯಿಂದ ಮೃತಪಟ್ಟಿವೆ. ಉಡುಪಿ ಜಿಲ್ಲೆಯಲ್ಲಿಯೇ ಕಳೆದ ವರ್ಷ ಸಾವಿರಕ್ಕೂ ಅಧಿಕ ಬೆಕ್ಕುಗಳ ಪರೀಕ್ಷೆಗೆ ಒಳಪಡಿಸಿದ್ದು, 600ಕ್ಕೂ ಅಧಿಕ ಬೆಕ್ಕುಗಳಲ್ಲಿ

ವೈರಸ್‌ ಕಾಣಿಸಿಕೊಂಡಿತ್ತು. 200ಕ್ಕೂ ಅಧಿಕ ಬೆಕ್ಕುಗಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದವು.

ಮನೆಗಳ ಭೇಟಿಗೆ ಸ್ಪಂದಿಸಿ
ಗಣತಿದಾರರು ನಗರ, ಗ್ರಾಮೀಣ ಭಾಗದ ಮನೆ ಮನೆಗೆ ಭೇಟಿ ನೀಡಿ ಜಾನುವಾರುಗಳ ಲಿಂಗ, ವಯಸ್ಸು, ಆರೋಗ್ಯದ ಸ್ಥಿತಿಗತಿ, ಯಾವ ತಳಿ, ಅದನ್ನು ಸಾಕುತ್ತಿರುವ ರೈತ ಕುಟುಂಬಗಳ ವಿವರಗಳು ಸೇರಿದಂತೆ ಇತ್ಯಾದಿ ಮಾಹಿತಿ ಪಡೆಯುತ್ತಾರೆ. ಇವರ ಅಗತ್ಯ ಮಾಹಿತಿ ನೀಡುವಂತೆ ವಿನಂತಿ.
-ಡಾ| ಚೈತ್ರಾಶ್ರೀ, ಇಲಾಖೆ ವೈದ್ಯೆ, ಗಣತಿ ಅಭಿಯಾನದ ಸೂಪರ್‌ವೈಸರ್‌

Advertisement

ಸಾಧ್ಯತೆಯ ಪರಿಶೀಲನೆ
22 ಮಂದಿ ಸೂಪರ್‌ವೈಸರ್‌, 95 ಮಂದಿ ಎಣಿಕೆದಾರರನ್ನು ಒಳಗೊಂಡ ತಂಡವು ಜಿಲ್ಲೆಯಲ್ಲಿ ಪಶು ಗಣತಿಯಲ್ಲಿ ತೊಡಗಿದೆ. ಬೆಕ್ಕುಗಳನ್ನು ಗಣತಿ ಪ್ರಕ್ರಿಯೆಯಲ್ಲಿ ಸರಕಾರ ಸೇರ್ಪಡೆಗೊಳಿಸಿಲ್ಲ. ಇತರ ವಿಭಾಗದಲ್ಲಿ ಸೇರ್ಪಡೆಗೊಳಿಸಲು ಸಾಧ್ಯತೆಯ ಬಗ್ಗೆ ಪರಿಶೀಲಿಸಲಾಗುವುದು.
– ಡಾ| ರೆಡ್ಡಪ್ಪ, ಉಪ ನಿರ್ದೇಶಕರು, ಪಶು ಸಂಗೋಪನೆ ಇಲಾಖೆ, ಉಡುಪಿ ಜಿಲ್ಲೆ

ಯಾವ್ಯಾವ ಜಾನುವಾರುಗಳು ಲೆಕ್ಕಕ್ಕೆ?
ದನ, ಹಸು, ಎತ್ತು, ಎಮ್ಮೆ, ಮೇಕೆ, ಕುರಿ, ಕೋಳಿ, ನಾಯಿ, ಕುದುರೆ, ಹಂದಿ, ಬಾತುಕೋಳಿ, ಎಮು ಪಕ್ಷಿಗಳು, ಬೀಡಾಡಿ ದನಗಳು ಮತ್ತು ಬೀದಿ ನಾಯಿ ಹಾಗೂ ಸಾಕು ನಾಯಿಗಳ ಮಾಹಿತಿ ಇದರಲ್ಲಿ ಕಲೆ ಹಾಕಲಾಗುತ್ತದೆ. ದೇವಾಲಯಗಳಲ್ಲಿರುವ ಆನೆ, ಜಾನುವಾರುಗಳೂ ಸೇರುತ್ತವೆ. 10ಕ್ಕಿಂತ ಹೆಚ್ಚು ಜಾನುವಾರು, 1,000ಕ್ಕೂ ಅಧಿಕ ಕೋಳಿಗಳು ಮತ್ತು 50 ಮೇಕೆಗಳಿದ್ದರೆ ಅದನ್ನು ಫಾರ್ಮ್ ಎಂದು ಪರಿಗಣಿಸಲಾಗುತ್ತದೆ.

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next