ಕಾರ್ಕಳ/ಹೆಬ್ರಿ : ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಅಡಿಕೆ ಬೆಳೆಗೆ ಅಂಬ್ರೋಸಿಯಾ ಕೀಟ ಬಾಧೆ ಕಾಣಿಸಿಕೊಂಡಿದೆ.
2018ರಲ್ಲಿ ಪುತ್ತೂರು, ಸುಳ್ಯ ಭಾಗಗಳಲ್ಲಿ ಕಂಡುಬಂದಿದ್ದ ಈ ಬಾಧೆ ಪ್ರಸ್ತುತ ಹೆಬ್ರಿ ತಾಲೂಕಿನ ಮಾಗದ್ದೆ ಹಾಗೂ ಕಾರ್ಕಳದ ಶಿರ್ಲಾಲು ಭಾಗದ ಕೆಲವು ರೈತರ ತೋಟಗಳಲ್ಲಿ ಕಾಣಿಸಿಕೊಂಡಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಪ್ರಾದೇಶಿಕ ಕೃಷಿ ಹಾಗೂ ತೋಟಗಾರಿಕೆ ಸಂಶೋಧನ ಕೇಂದ್ರ ಬ್ರಹ್ಮಾವರದ ವಿಜ್ಞಾನಿಗಳೊಂದಿಗೆ ಪರಿಶೀಲನೆ ನಡೆಸಿದ್ದಾರೆ.
ಇದು ಕುಟ್ಟೆ ಜಾತಿಯ ದುಂಬಿ ಯಾಗಿದ್ದು ಯೂಪ್ಲಾಟಿ ಪಸ್ಪಾ ರಾಲ್ಲೆಲಸ್ ಎಂದು ಗುರುತಿಸಲ್ಪಟ್ಟಿದೆ. ಸುಮಾರು 4 ಮಿ.ಮೀ. ಉದ್ದವಿದ್ದು ಕಂದು ಬಣ್ಣದ ಶರೀರದೊಂದಿಗೆ ಹಳದಿ ಬಣ್ಣದ ರೋಮಗಳನ್ನು ಹೊಂದಿರುತ್ತದೆ. ಈ ದುಂಬಿಗಳು ಸಸಿ ಗಿಡಗಳಿಗೆ ಹೆಚ್ಚಾಗಿ ಬಾಧೆ ಉಂಟುಮಾಡುತ್ತಿದ್ದು ಪ್ರೌಢ ಹೆಣ್ಣು ದುಂಬಿಯು ಅಡಿಕೆ ಮರದ ಕಾಂಡಗಳ ಮೇಲೆ 1.50 ಮಿ.ಮೀ. ಸುತ್ತಳತೆಯ 1.20ರಿಂದ 4.60 ಸೆ.ಮೀ.ನಷ್ಟು ಅಳದ ರಂದ್ರಗಳನ್ನು ಕೊರೆದು ಪ್ರವೇಶಿಸಿ ಸಂತಾನೋತ್ಪತ್ತಿ ಮುಂದುವರಿಸುತ್ತವೆ. ಪ್ರಥಮ ಹಂತದಲ್ಲಿ ಅಡಿಕೆ ಮರಗಳ ಕಾಂಡದ ಭಾಗದಲ್ಲಿ ಅಲ್ಲಲ್ಲಿ ಕಂದುಬಣ್ಣದ ಅಂಟು ದ್ರವ ಸೋರಿಕೆ ಕಂಡು ಬಂದು ಅಂಟು ದ್ರವದ ತಳಭಾಗದಲ್ಲಿ ಸಣ್ಣ ಗಾತ್ರದ ರಂಧ್ರಗಳು ಕಾಣುತ್ತವೆ. ಇದರಿಂದ ಮರದ ಬೆಳವಣಿಗೆ ಕುಂಠಿತವಾಗುತ್ತದೆ. ಅನಂತರದ ಹಂತಗಳಲ್ಲಿ ನೂರಾರು ರಂದ್ರಗಳಿಂದ ಬಿಳಿ ಬಣ್ಣದ ಪುಡಿ ಉದುರುವಿಕೆ ಪ್ರಾರಂಭವಾಗುತ್ತದೆ. ಮುಂದಿನ ಹಂತದಲ್ಲಿ ಅಡಿಕೆಮರದ ಕೆಳಭಾಗದ ಎಲೆಗಳು ಹಳದಿಯಾಗಿ ಕಳಚಿ ಬೀಳುವ ಸಂಭವವಿರುತ್ತದೆ.
ಈ ದುಂಬಿಯ ಬಾಧೆಯು ಸಾಮಾ ನ್ಯವಾಗಿ ಕಡಿಮೆ ಪ್ರಾಯದ ಗಿಡಗಳಲ್ಲಿ ಹೆಚ್ಚು ಕಂಡುಬರುತ್ತಿದ್ದು ಹೆಚ್ಚು ನೀರಾವರಿ ನೀಡುವ ತೋಟಗಳಲ್ಲಿ, ತಗ್ಗು ಪ್ರದೇಶದ ತೋಟಗಳಲ್ಲಿ ಹಾಗೂ ಅತೀ ಹೆಚ್ಚು ಪೋಷಕಾಂಶ ನೀಡುತ್ತಿರುವ ರೈತರ ತೋಟಗಳಲ್ಲಿ (ಪ್ರಮುಖವಾಗಿ ಸಾರಜನಕಯುಕ್ತ ಸಾವಯವ ಹಾಗೂ ರಾಸಾಯನಿಕ ಗೊಬ್ಬರ) ಹೆಚ್ಚಾಗಿ ಕಂಡು ಬರುತ್ತದೆ. ದುಂಬಿಯ ನಿಯಂತ್ರಣಕ್ಕೆ ಸಮ ತೋಲನ ಸಾವಯವ ಹಾಗೂ ರಾಸಾ ಯನಿಕ ರಸಗೊಬ್ಬರ ಬಳಕೆ, ಸಮರ್ಪಕ ಬಸಿ ಕಾಲುವೆ ಹಾಗೂ ಹದವಾದ ನೀರಾವರಿ ಅವಶ್ಯ. ಬಾಧಿತ ಮರ ಹಾಗೂ ಸುತ್ತಲಿನ ಮರಗಳಿಗೆ ಕ್ಲೋರೊಪೈರಿಫಾಸ್ 20 ಇ.ಸಿ. ಕೀಟನಾಶಕವನ್ನು 2 ಮಿ.ಲೀ. ಲೀಟರ್ ನೀರಿಗೆ ಬೆರೆಸಿ ಕಾಂಡದ ಭಾಗಕ್ಕೆ ಹಚ್ಚಿ ನಿಯಂತ್ರಿಸಬಹುದು.