ಕಾರ್ಕಳ: ಸ್ವಚ್ಛತೆ, ಸಂಭ್ರಮ, ವೈಭವಕ್ಕೆ ಕೊರತೆಯಾಗದಂತೆ ಸರ್ವರೂ ಸೇರಿ ಆಚರಿಸುತ್ತಿರುವ ಕಾರ್ಕಳ ಉತ್ಸವ ನಿರೀಕ್ಷೆಗೂ ಮೀರಿ ಯಶಸ್ಸಿನ ಕಡೆಗೆ ಸಾಗುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಕಾರ್ಕಳ ಉತ್ಸವದ ಪ್ರಯುಕ್ತ ಬುಧವಾರ ಬುಲೆಟ್ ಬೈಕ್ ರ್‍ಯಾಲಿ, ಮನೆ ಮನೆಯಲ್ಲಿ ಮೆಹಂದಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ಸವದಲ್ಲಿ ತಾಲೂಕಿನ ಎಲ್ಲ ಮನೆಯವರು ಭಾಗವಹಿಸಬೇಕು ಎನ್ನುವ ಆಶಯವಿತ್ತು. ಜನರ ಉತ್ಸಾಹ ಕಂಡಾಗ ಅದು ಈಡೇರಿದೆ ಎಂಬುದು ಅರಿವಾಗುತ್ತದೆ. ರಾಜ್ಯಪಾಲರ ಆಗಮನದಿಂದ ಕಾರ್ಕಳ ಉತ್ಸವದ ಮಹತ್ವ ಹೆಚ್ಚಿದೆ.
ರಾಜಧಾನಿಯಲ್ಲೂ ಶಾಸಕರು, ಸಚಿವರು ಉತ್ಸವದ ಬಗ್ಗೆ ಕುತೂಹಲದಿಂದ ವಿಚಾರಿಸುತ್ತಿದ್ದಾರೆ. ಸರ್ವಧರ್ಮ ಸಮನ್ವಯ, ಸಹಬಾಳ್ವೆಯ ಸಂಕೇತವಾಗಿ ಎಲ್ಲರೊಂದುಗೂಡಿ ಕಾರ್ಕಳ ಉತ್ಸವದಲ್ಲಿ ಸಂಭ್ರಮಿಸುತ್ತಿದ್ದು, ಮಾ. 18ರ ಮೆರವಣಿಗೆ ವೀಕ್ಷಿಸಲು ನಾಡಿನೆಲ್ಲೆಡೆಯಿಂದ ಅಪಾರ ಸಂಖ್ಯೆಯ ಜನ ಆಗಮಿಸುವ ನಿರೀಕ್ಷೆಯಿದೆ. ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೊದಲಾದವರು ಭಾಗವಹಿಸುವರು ಎಂದು ಸುನಿಲ್ ತಿಳಿಸಿದರು.
ಸಚಿವರಿಂದ ಬುಲೆಟ್ ಸವಾರಿ!
ಸಚಿವರು ಸ್ವತಃ ಬುಲೆಟ್ ಬೈಕ್ ಚಲಾಯಿಸುವ ಮೂಲಕ ಮೆರವಣಿಗೆ ಪ್ರಚಾರದ ಬುಲೆಟ್ ಬೈಕ್ ರ್‍ಯಾಲಿ ಗೆ ಚಾಲನೆ ನೀಡಿದರು. ಮಹಿಳೆಯರು ಬುಲೆಟ್ ಬೈಕ್ ಚಲಾಯಿಸಿ ನಗರ ಸುತ್ತುವ ಮೂಲಕ ಗಮನ ಸೆಳೆದರು.