Advertisement
ಕಾರ್ಕಳ-ಉಡುಪಿ ಮುಖ್ಯರಸ್ತೆಯಲ್ಲಿ ನೀರೆ ಬಳಿ ರಸ್ತೆ ಬದಿ ಅರಣ್ಯ ಪ್ರದೇಶದಲ್ಲಿ ಜನರು ಕಸ ಎಸೆಯುತ್ತಿದ್ದು, ಬ್ಲಾಕ್ ಸ್ಪಾಟ್ ಎಂದು ಗುರುತಿಸಲಾಗಿತ್ತು. ಈ ಜಾಗದಲ್ಲಿ ತಿಂಗಳಿಗೆ 200-300 ಕೆಜಿ ತ್ಯಾಜ್ಯ ಸಂಗ್ರಹವಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಪ್ರದೇಶವನ್ನು ಸ್ವತ್ಛಗೊಳಿಸಿ ಸೆಲ್ಫಿ ಕಾರ್ನರ್ ಮಾಡಲಾಗಿತ್ತು. ಬೆಂಚ್ ಅಳವಡಿಸಿ, ಟಯರ್ಗಳಿಗೆ ಬಣ್ಣ ಬಳಿದು ಸುಂದರಗೊಳಿಸಲಾಗಿತ್ತು. ಈ ಭಾಗದಲ್ಲಿ ನಿಂತರೆ ಅರಣ್ಯದ ಸುಂದರ ಚಿತ್ರಣ ಕಾಣಿಸುತ್ತದೆ.
ತಾಲೂಕಿನ ನಲ್ಲೂರಿನ ಹರಿಯಪ್ಪನ ಕೆರೆ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ ಸಮೀಪವೂ ತಾಜ್ಯ ಗುಡ್ಡೆ ನಿರ್ಮಾಣವಾಗಿದೆ. ಇಲ್ಲಿಗೆ ಬರುವವರು ನೀರಿನ ಬಾಟಲಿ, ತಿಂಡಿ ಸೇವಿಸಿ ಪರಿಸರದಲ್ಲಿ ಎಸೆದು ಹೋಗುತ್ತಿದ್ದಾರೆ. ಜೋರು ಮಳೆಯಾದಲ್ಲಿ ಈ ತ್ಯಾಜ್ಯವು ನೀರಿನೊಂದಿಗೆ ಹರಿದು ಎಲ್ಲ ಪ್ಲಾಸ್ಟಿಕ್ ತೊಟ್ಟೆ, ಬಾಟಲಿ ಟ್ರೀಪಾರ್ಕ್ ಪರಿಸರದ ಕೆರೆಗೆ ಸೇರಿ ಕೆರೆ ಮಾಲಿನ್ಯಗೊಳ್ಳುತ್ತದೆ. ಸ್ಥಳೀಯಾಡಳಿತಕ್ಕೂ ತ್ಯಾಜ್ಯ ನಿರ್ವಹಣೆ ಸವಾಲಾಗಿದೆ. ಬ್ಯಾನರ್ ಹಾಕಿ ಎಚ್ಚರಿಕೆ ನೀಡಿದರೂ ಕ್ಯಾರೇ ಅನ್ನುತ್ತಿಲ್ಲ.
Related Articles
ಕಾರ್ಕಳ ಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಗಳು ನಿಲ್ಲುವ ಹಿಂಬದಿ ಪರಿಸರದಲ್ಲಿಯೂ ಆಗಾಗ ತ್ಯಾಜ್ಯ ಸುರಿದು ಹೋಗುತ್ತಾರೆ. ಈ ತ್ಯಾಜ್ಯದಲ್ಲಿ ಹಸಿ, ಒಣಕಸ, ಪ್ಲಾಸ್ಟಿಕ್ ಎಲ್ಲ ತ್ಯಾಜ್ಯವನ್ನು ಗಂಟು ಕಟ್ಟಿ ಎಸೆದು ಹೋಗುತ್ತಾರೆ. ಪುರಸಭೆ ಸ್ವತ್ಛತಾ ಸಿಬಂದಿಗೂ ಇದನ್ನು ತೆರವುಗೊಳಿಸುವ ಕಾರ್ಯ ಸವಾಲಿನಿಂದ ಕೂಡಿದೆ.
Advertisement
ಕಾರ್ಕಳ-ಕುದುರೆಮುಖ ವನ್ಯಜೀವಿ ವಿಭಾಗ ಅಮೂಲ್ಯ ವನ್ಯಜೀವಿ ಸಂಪತ್ತು ಇರುವ ಪರಿಸರವಾಗಿದೆ. ಇಲ್ಲಿನ ಕಾಡು ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ಸಹಿತ ಎಲ್ಲ ರೀತಿಯ ತ್ಯಾಜ್ಯಗಳಿಗೆ ಕಡಿವಾಣ ಹಾಕಬೇಕಾಗಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿ, ತಿಂಡಿ ಪೊಟ್ಟಣ ಎಸೆಯುವುದು, ವನ್ಯಜೀವಿಗಳಿಗೆ ಊಟ ಕೊಡುವುದನ್ನು ನಿಯಂತ್ರಿಸಬೇಕಾಗಿದೆ. ಇಲ್ಲವಾದಲ್ಲಿ ಇದು ವನ್ಯಜೀವಿಗಳ ಆರೋಗ್ಯ ಮತ್ತು ಜೀವನಕ್ರಮದ ಮೇಲೆ ದುಷ್ಪರಿಣಾಮ ಬೀರಲಿದೆ. ಜನರಲ್ಲಿಯೂ ಅರಿವು ಮೂಡಬೇಕಿದೆ
ಅರಣ್ಯ ಪ್ರದೇಶ ವ್ಯಾಪ್ತಿ ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯುವುದಕ್ಕೆ ಕಡಿವಾಣ ಹಾಕಲು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪರಿಸರವನ್ನು ಸೆಲ್ಫಿ ಕಾರ್ನರ್ ಆಗಿ ರೂಪಿಸಿ ಸುಂದರ ಸ್ಥಳವಾಗಿಸಿದ್ದೇವೆ. ತಿಂಗಳಿಗೆ ನೂರಾರು ಕೆಜಿ ತ್ಯಾಜ್ಯ ಸುರಿಯುತ್ತಿದ್ದ ಸ್ಥಳವೀಗ ಬದಲಾಗಿದೆ. ಆದರೆ ಕೆಲವು ದೂರದೂರಿನಿಂದ ಬರುವ ಪ್ರವಾಸಿಗರು ತ್ಯಾಜ್ಯ ಎಸೆಯುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ರಮ ವಹಿಸಲಾಗುವುದು. ಜನರಲ್ಲಿ ಪರಿಸರ ಸಂರಕ್ಷಣೆ ಅರಿವು ಮೂಡಬೇಕು. ಎಸ್ಆರ್ಎಲ್ಎಂ ತಂಡ ಅಲ್ಲಿನ ಸ್ವತ್ಛತೆಗೆ ಕ್ರಮವಹಿಸುತ್ತಿದೆ.
-ಸಚ್ಛಿದಾನಂದ ಪ್ರಭು, ಅಧ್ಯಕ್ಷರು, ನೀರೆ ಗ್ರಾ.ಪಂ. -ಅವಿನ್ ಶೆಟ್ಟಿ