Advertisement
ಕಾರ್ಕಳ: ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ತಾ|ನಲ್ಲಿ ದರೋಡೆ, ಕಳ್ಳತನ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಗ್ರಾಮಾಂತರ ಹಾಗೂ ನಗರ ಠಾಣೆಗಳ ವ್ಯಾಪ್ತಿಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಎಲ್ಲರೂ ಮನೆಗಳಲ್ಲಿರುವುದು ಮತ್ತು ಕಳೆದ ಲಾಕ್‌ಡೌನ್ ಅನಂತರ ಬಳಿಕ ಪೊಲೀಸರು ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸಿರುವುದು ಪ್ರಕರಣ ಇಳಿಕೆಗೆ ಕಾರಣವೆನ್ನಬಹುದು.
Related Articles
Advertisement
2ನೇ ಅಲೆಯಲ್ಲಿ ಕಳ್ಳರ ಕಾಟವಿಲ್ಲ :
ಕೋವಿಡ್ ಸೋಂಕಿನ ಎರಡನೇ ಅಲೆಯಿಂದ ಲಾಕ್‌ಡೌನ್ ನಾಗರಿಕರನ್ನು ಮನೆಯಲ್ಲಿ ಬಂಧಿಯಾಗಿಸಿದ್ದು ದರೋಡೆ, ಕಳ್ಳತನ, ಸರಗಳ್ಳತನ, ಮನೆಗಳ್ಳತನ ಮುಂತಾದ ಅಪರಾಧ ಕೃತ್ಯಗಳು ಕಡಿಮೆಯಾಗಿ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಮನೆ ಗಲಾಟೆ, ಕಿರುಕುಳ ಮತ್ತಿತರ ಕೌಟುಂಬಿಕ ಕಲಹ ಪ್ರಕರಣಗಳು ತುಸು ಹೆಚ್ಚಳವಾಗಿದೆ ಎಂದು ಪೊಲೀಸರು ಹೇಳುತ್ತಾರೆ. ಉಳಿದಂತೆ ನಿಯಮ ಉಲ್ಲಂಘನೆ ಪ್ರಕರಣಗಳು ಬಿಟ್ಟರೆ ಕಳ್ಳತನ, ದರೋಡೆ ಯಂತಹ ಪ್ರಕರಣಗಳಲ್ಲಿ ತೀರಾ ಇಳಿಕೆಯಾಗಿದೆ ಎನ್ನುತ್ತಾರವರು.
ಜನ ಜಾಗೃತರಾಗಬೇಕಿದೆ :
ಎರಡನೇ ಅಲೆಯಿಂದ ಆರ್ಥಿಕತೆಯು ಪಾತಾಳಕ್ಕೆ ಇಳಿದಿದೆ. ಸರಕಾರ ಲಾಕ್‌ಡೌನ್ ಅನ್ನು ಹಂತ ಹಂತವಾಗಿ ಇಳಿಸಲು ಸಿದ್ಧತೆ ನಡೆಸುತ್ತಿದೆ. ಅನ್‌ಲಾಕ್ ಆದ ಬೆನ್ನಿಗೆ ಮತ್ತೆ ಕಳ್ಳತನ, ದರೋಡೆ ಇತ್ಯಾದಿ ಕೃತ್ಯಗಳು ನಡೆಯುವ ಸಂಭವವಿರುವುದರಿಂದ ಅದಕ್ಕೆ ತಡೆ ತರಲು ಪೊಲೀಸರು ಈಗಿಂದೀಗಲೇ ಸನ್ನದ್ಧರಾಗುತ್ತಿದ್ದಾರೆ. ಲಾಕ್‌ಡೌನ್ ಕರ್ತವ್ಯ ನಿರ್ವಹಣೆಯ ಮಧ್ಯೆಯೂ ಅಪರಾಧ ತಡೆಗೆ ಹೆಚ್ಚಿನ ನಿಗಾವನ್ನು ಪೊಲೀಸ್ ಇಲಾಖೆ ಇರಿಸಿದೆ. ಮತ್ತೆ ಹಳ್ಳಿಗಳಲ್ಲಿ ಜನಜಾಗೃತಿ ಕೈಗೊಳ್ಳುವ, ಬೀಟ್ ಪೊಲೀಸರು ಜಾಗೃತಿಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ. ನಾಗರಿಕರೂ ಆದೇಶಗಳನ್ನು ಪಾಲಿಸಬೇಕಿದೆ.
ಲಾಕ್‌ಡೌನ್‌ನಿಂದ ಜನರು ಮನೆಯಲ್ಲೇ ಇದ್ದರು. ಆದರೆ ಮುಂದಿನ ದಿನಗಳಲ್ಲಿ ಅನ್‌ಲಾಕ್ ಆದಾಗ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ತೀರಾ ಅಗತ್ಯ.– ಮಧು ಬಿ.ಇ., ನಗರ ಠಾಣೆ ಎಸ್‌ಐ
ಅನ್‌ಲಾಕ್‌ನ ಸಂದರ್ಭದ ದಿನಗಳು ಯಾವ ರೀತಿ ಇರುತ್ತೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಅಂತಹ ಕೃತ್ಯಗಳು ನಡೆಯದಂತೆ ನಾವು ಮುನ್ನೆಚ್ಚರಿಕೆ ವಹಿಸುವುದು, ಸಾರ್ವಜನಿಕರಿಗೆ ತಿಳಿವಳಿಕೆ, ಜಾಗೃತಿ ಮೂಡಿಸುವುದನ್ನು ಕಾನೂನಿನ ಚೌಕಟ್ಟಿನಲ್ಲಿ ನಿರಂತರ ನಡೆಸುತ್ತಲೇ ಇರುತ್ತೇವೆ.– ತೇಜಸ್ವಿ , ಗ್ರಾಮಾಂತರ ಠಾಣೆ ಎಸ್‌ಐ