ಕಾರ್ಕಳ: ಒಮಿಕ್ರಾನ್ ಸಾಂಕ್ರಾಮಿಕವನ್ನು ನಿಭಾಯಿಸಲು ಅದಾನಿ ಫೌಂಡೇಶನ್ ತನ್ನ ಸಿಎಸ್‌ಆರ್ ಯೋಜನೆಯಡಿ ಕಾರ್ಕಳದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ 10 ಐಸಿಯು ವೆಂಟಿ ಲೇಟರ್ ಬೆಡ್ ಮತ್ತು ಇತರ ವೈದ್ಯಕೀಯ ಉಪಕರಣ ಗಳನ್ನು ಸ್ಥಾಪಿಸಲು ಉಡುಪಿ ಜಿಲ್ಲಾಡಳಿತಕ್ಕೆ 78.18 ಲಕ್ಷ ರೂ.ಗಳ ಅನುದಾನ ನೀಡಿದೆ.
ಆರೋಗ್ಯ ಇಲಾಖೆ ಮತ್ತು ವಾಣಿಜ್ಯ, ಕೈಗಾರಿಕೆ ಇಲಾಖೆ ಜತೆ ನಡೆದ ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ಮಾಡಿದ ಮನವಿಗೆ ಸ್ಪಂದಿಸಿದ ಅದಾನಿ ಫೌಂಡೇಶನ್ ಕಾರ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಬೇಕಾದ ಬೆಡ್ ಮತ್ತು ಉಪಕರಣ ಸ್ಥಾಪಿಸಲು ಬೇಕಾದ ವೆಚ್ಚ ಭರಿಸಲು ಮುಂದಾಗಿದೆ ಎಂದು ಅದಾನಿ ಸಮೂಹದ ರಾಜ್ಯ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ತಿಳಿಸಿದ್ದಾರೆ.
ಕಾರ್ಕಳ ಸಾರ್ವಜನಿಕ ಆಸ್ಪತ್ರೆಯನ್ನು ಹಂತಹಂತವಾಗಿ ಸುಸಜ್ಜಿತ ಆಸ್ಪತ್ರೆಯನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಆಧುನಿಕ ಚಿಕಿತ್ಸಾ ಉಪಕರಣಗಳನ್ನು ಅಳವಡಿಸಲಾಗುತ್ತಿದೆ.
ಇದನ್ನೂ ಓದಿ:ರಾಜಕಾರಣಿಗಳಿಂದಾಗಿ ಜನರ ಆಲೋಚನೆ ದಿಕ್ಕು ಬದಲು
ಮಕ್ಕಳ ತೀವ್ರ ನಿಗಾ ಘಟಕ ಉನ್ನತೀಕರಿಸುವ ನಿಟ್ಟಿನಲ್ಲಿ ಅಂದಾಜು ಮೊತ್ತ 78.18 ಲಕ್ಷ ರೂ.ಗಳನ್ನು ಅದಾನಿ ತನ್ನ ಸಿಎಸ್‌ಆರ್ ಯೋಜನೆಯಡಿ ಬಿಡುಗಡೆ ಮಾಡಿದ್ದು ಅದರ ಚೆಕ್ ಅನ್ನು ಕಿಶೋರ್ ಆಳ್ವ ಅವರು ಜಿಲ್ಲಾಧಿಕಾರಿ ಕೂರ್ಮಾರಾವ್ ಅವರಿಗೆ ಹಸ್ತಾಂತರಿಸಿದರು.
ಕಳೆದ ಆಗಸ್ಟ್‌ನಲ್ಲಿ ಅದಾನಿ ಫೌಂಡೇಶನ್ ಉಡುಪಿ ಜಿಲ್ಲಾಡಳಿತಕ್ಕೆ ಕೊರೊನಾ ವೆಂಟಿಲೇಟರ್ ಬೆಡ್‌ಗಳಿಗಾಗಿ 40 ಲಕ್ಷ ರೂ.ಗಳ ಅನುದಾನ ನೀಡಿದ್ದು, ಒಟ್ಟು 1.18 ಕೋಟಿ ರೂ. ಅನುದಾನ ಕೊಟ್ಟಂತಾಗಿದೆ.