Advertisement
ದೀಪಾವಳಿಯ ಸಡಗರಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆಲವರಿಗೆ ಪಟಾಕಿ ತರಿಸುವುದರಲ್ಲಿ ಆಸಕ್ತಿ, ಕೆಲವರಿಗೆ ಹೊಸ ಬಟ್ಟೆ ಕೊಳ್ಳುವುದರಲ್ಲಿ ಆಸಕ್ತಿ. ಮತ್ತೆ ಕೆಲವರಿಗೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಇಡುವುದರಲ್ಲಿ ಆಸಕ್ತಿ. ವಸ್ತುಸ್ಥಿತಿ ಹೀಗಿರುವಾಗ, ಕಾರ್ಕಳದ ಚೇತನಾ ಶಾಲೆಯ ವಿಶೇಷ ಕಲಿಕಾ ಸಾಮರ್ಥ್ಯದ ಮಕ್ಕಳು ಉಳಿದವರಿಗಿಂತ ಭಿನ್ನವಾಗಿ ಯೋಚಿಸಿದ್ದಾರೆ! ದೀಪಾವಳಿಗೆ ಬಳಸುವ ಮಣ್ಣಿನ ದೀಪಗಳಿಗೆ ಬಣ್ಣ ತುಂಬಲು, ಅವುಗಳಿಗೆ ಬಗೆಬಗೆಯ ವಿನ್ಯಾಸ ಮಾಡಿ ಹೊಸ ರೂಪು ಕೊಡಲು ಮುಂದಾಗಿದ್ದಾರೆ. ತಮ್ಮ ಪ್ರಯತ್ನದಲ್ಲಿ ಯಶಸ್ಸನ್ನೂ ಕಂಡಿದ್ದಾರೆ. ಶ್ರವಣ ದೋಷ, ವಾಕ್ ದೋಷ, ಬುದ್ಧಿಮಾಂದ್ಯ ಮತ್ತು ಆಟಿಸಂನಿಂದ ಬಳಲುತ್ತಿರುವ ಮಕ್ಕಳು ತಯಾರಿಸಿರುವ ಈ ಹಣತೆಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ. ಹಣತೆಗಳ ಬೆಳಕು ಮಕ್ಕಳ ಬಾಳು ಬೆಳಗಲು ಸಹಕಾರಿಯಾಗಿದೆ.
Related Articles
Advertisement
ಇಲ್ಲಿ ಮಕ್ಕಳಿಗೆ ಔಪಚಾರಿಕ ಶಿಕ್ಷಣದ ಜೊತೆಗೆ ನಾನಾ ಬಗೆಯ ಚಟುವಟಿಕೆ, ಕೌಶಲ್ಯಗಳ ತರಬೇತಿಯುಂಟು. ಕಲಿಕೆಯಲ್ಲಿ ಆಸಕ್ತಿ ಹೊಂದಿದ ಮಕ್ಕಳು ಹೆಚ್ಚಿನ ಶಿಕ್ಷಣ ಪಡೆಯುತ್ತಾರೆ. ಉಳಿದವರು ಕನಿಷ್ಠ ಎಸ್‌ಎಸ್‌ಎಲ್‌ಸಿವರೆಗೂ ವ್ಯಾಸಂಗ ಮಾಡಿ, ತಮ್ಮ ಇಚ್ಛೆಯ ಕೆಲಸ ಕಲಿತು, ಜೀವನ ಕಟ್ಟಿಕೊಳ್ಳುತ್ತಾರೆ. ಶಿಕ್ಷಣದ ಜೊತೆಗೆ ವಿಶೇಷ ಮಕ್ಕಳ ಶಾರೀರಿಕ, ಬೌದ್ಧಿಕ ವಿಕಸನಕ್ಕೂ ಗಮನ ಹರಿಸಬೇಕು. ನಾಲ್ಕು ಜನರ ನಡುವೆ ಆ ಮಕ್ಕಳು ಎಲ್ಲರಂತೆ ಸ್ವಾವಲಂಬಿ ಬದುಕು ನಡೆಸಬೇಕು ಎಂಬುದು ನಮ್ಮ ಆಶಯ. ಪ್ರತಿ ವರ್ಷ ವೃತ್ತಿಪರ ಶಿಕ್ಷಣದ ಭಾಗವಾಗಿ ಒಂದಿಲ್ಲೊಂದು ಹೊಸ ಚಟುವಟಿಕೆಯನ್ನು ಮಕ್ಕಳಿಗೆ ನೀಡುತ್ತೇವೆ. ಹೀಗೆ ಕಳೆದ ವರ್ಷದಿಂದ ಆರಂಭವಾದದ್ದೇ ಹಣತೆ ಮಾಡುವ ಕೆಲಸ. ದೀಪಾವಳಿಗೆ ಎಲ್ಲರ ಮನೆ ಮುಂದೆ ಹಣತೆಗಳು ಬೆಳಗುತ್ತವೆ. ಅಂಥ ಬೆಳಕು ಈ ವಿಶೇಷ ಮಕ್ಕಳ ಬಾಳಲ್ಲೂ ಬರಲಿ ಎಂಬ ಸದಾಶಯದೊಂದಿಗೆ ಈ ಕೆಲಸ ಆರಂಭಿಸಿದೆವು ಅನ್ನುತ್ತಾರೆ ಶಾಲೆಯ ಸಂಚಾಲಕ ರಘುನಾಥ್ ಶೆಟ್ಟಿ.
ಬಣ್ಣ ತುಂಬುವ ಮಕ್ಕಳು
ಸ್ಥಳೀಯ, ಬೆಂಗಳೂರು ಹಾಗೂ ಇತರ ಕಡೆಯಿಂದ ಮಣ್ಣಿನ ಹಣತೆಗಳನ್ನು ತರಿಸಿಕೊಳ್ಳುತ್ತೇವೆ. ಅವುಗಳಿಗೆ ಬಣ್ಣ ಹಾಕುವ ಮತ್ತು ವಿನ್ಯಾಸ ಮಾಡುವ ಕೆಲಸವನ್ನು ಮಾತ್ರ ಶಾಲೆಯ ಮಕ್ಕಳು ಮಾಡುತ್ತಾರೆ. ಬಣ್ಣ ತುಂಬುವ ಪ್ರಕ್ರಿಯೆ ಎರಡು ಮೂರು ಹಂತಗಳಲ್ಲಿ ಸಾಗುತ್ತದೆ. ಮಣ್ಣಿನ ಹಣತೆಗಳಿಗೆ ಮೊದಲು ಬಿಳಿ ಬಣ್ಣದ ಲೇಪನ, ನಂತರ ಅದಕ್ಕೆ ಕೆಂಪು, ಹಳದಿ, ನೀಲಿ ಹೀಗೆ ಬೇರೆ ಬೇರೆ ಬಣ್ಣಗಳನ್ನು ಹಚ್ಚುತ್ತಾರೆ. ಅದು ಒಣಗಿದ ಮೇಲೆ, ಅದರ ಮೇಲೆ ಚುಕ್ಕಿಗಳ ವಿನ್ಯಾಸ, ಹೂವಿನ ಚಿತ್ತಾರ ಹೀಗೆ ಬಗೆಬಗೆಯ ವಿನ್ಯಾಸ ಮಾಡಲಾಗುತ್ತದೆ. ಹಣತೆಗಳಲ್ಲದೆ ವಿವಿಧ ಆಕಾರಗಳ ಹೂ ಕುಂಡ, ಇತರ ಮಣ್ಣಿನ ಶೋ ಪೀಸ್‌ಗಳನ್ನು ಹೊರಗಡೆಯಿಂದ ತರೆಸಿ, ಅದಕ್ಕೆ ಬಣ್ಣ ಹಚ್ಚಿ, ವಿನ್ಯಾಸಗೊಳಿಸಿ ಕೊಡುತ್ತಾರೆ. ಇಲ್ಲಿ ಎಲ್ಲ ಕೆಲಸವನ್ನೂ ಒಬ್ಬ ವಿದ್ಯಾರ್ಥಿ ಮಾಡುವುದಿಲ್ಲ. ಮೊದಲು ಬಿಳಿ ಬಣ್ಣ ಹಚ್ಚುವವರು ಬೇರೆ, ಅದಕ್ಕೆ ನಿರ್ದಿಷ್ಟ ಬಣ್ಣ ಹಚ್ಚುವವರು ಇನ್ನೊಂದು ತಂಡ, ಕೊನೆಗೆ ಅದರ ಮೇಲೆ ಚಿತ್ತಾರ ಮೂಡಿಸಿ, ಅಂತಿಮ ಸ್ಪರ್ಶ ನೀಡುವವರು ಬೇರೆಯವರು. ಈ ಎಲ್ಲ ಪ್ರಕ್ರಿಯೆ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ನಡೆಯುತ್ತದೆ.
ಸಿಂಗಪೂರ್‌ನಿಂದಲೂ ಆರ್ಡರ್!
ಸಣ್ಣ ಪ್ರಮಾಣದಲ್ಲಿ ಆರಂಭವಾದ ಈ ಚಟುವಟಿಕೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರಕಲೆ, ಕರಕುಶಲಗಳಲ್ಲಿ ಆಸಕ್ತಿ ಹೊಂದಿದ ವಿದ್ಯಾರ್ಥಿಗಳು, ತರಗತಿಗಳ ಬಿಡುವಿನ ಸಮಯದಲ್ಲಿ ದಿನಕ್ಕೆ 3-4 ಗಂಟೆಗಳ ಕಾಲ ಹಣತೆಗೆ ಹೊಸ ರೂಪು ಕೊಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದಾರೆ. ಮಕ್ಕಳು ತಯಾರಿಸಿದ ಹಣತೆಗಳಿಗೆ ಕಾರ್ಕಳವಷ್ಟೇ ಅಲ್ಲ, ಬೆಂಗಳೂರು, ಬಾದಾಮಿ, ಬೀದರ್, ಬಾಗಲಕೋಟೆ, ಮೈಸೂರು, ಶಿವಮೊಗ್ಗ ಹೀಗೆ ಹಲವು ಊರುಗಳಿಂದ ಬೇಡಿಕೆ ಬರುತ್ತಿದೆ. ಕೆಲವರು ವಿಶೇಷ ಮಕ್ಕಳು ಮಾಡಿದ ಹಣತೆ ಎಂದು ಆಸಕ್ತಿಯಿಂದ ಖರೀದಿಸಿದರೆ, ಇನ್ನು ಕೆಲವರು ನಿರ್ದಿಷ್ಟ ವಿನ್ಯಾಸದೊಂದಿಗೆ ಹೇಳಿ ಮಾಡಿಸುತ್ತಾರೆ. ಈವರೆಗೆ 2000 ಹಣತೆಗಳು ಸಿದ್ಧಗೊಂಡಿವೆ. ಹೋದ ವರ್ಷ ಪ್ರಾಯೋಗಿಕವೆಂದು ಖರೀದಿಸಿದವರು, ಈ ವರ್ಷ ದುಪ್ಪಟ್ಟು ಪ್ರಮಾಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಸಿಂಗಪೂರ್‌ನಿಂದ 100 ಹಣತೆಗಳಿಗೆ ಆರ್ಡರ್ ಬಂದಿರುವುದು ವಿಶೇಷ.
ಲಾಭವೆಲ್ಲಾ ಮಕ್ಕಳಿಗೆ…
ಇವುಗಳನ್ನು ಸ್ಥಳೀಯವಾಗಿಯೂ ಮಾರಾಟ ಮಾಡುತ್ತೇವೆ. ಬೇರೆ ಊರುಗಳಿಗೆ ಕೊರಿಯರ್ ಮೂಲಕ ಕಳಿಸುತ್ತೇವೆ. 10 ರೂ. ನಿಂದ 40 ರೂ. ವರೆಗೆ ವಿವಿಧ ಬಣ್ಣ, ವಿನ್ಯಾಸಗಳ ಹಣತೆಗಳು ನಮ್ಮಲ್ಲಿ ಲಭ್ಯ. ಬಹಳ ಜನ ಆನ್ ಲೈನ್ ಮೂಲಕ ಸಿಗುತ್ತದೆಯೇ ಎಂದು ಕೇಳುತ್ತಿದ್ದಾರೆ. ಸದ್ಯ ನಾವಿನ್ನೂ ಆ ವ್ಯವಸ್ಥೆ ಮಾಡಿಕೊಂಡಿಲ್ಲ. ಕಳೆದ ವರ್ಷ ಖರ್ಚೆಲ್ಲ ಕಳೆದು ಸುಮಾರು 30 ಸಾವಿರ ರೂ. ಲಾಭ ಉಳಿಯಿತು. ಆ ಹಣವನ್ನು ಹಣತೆ ತಯಾರಿಸಿದ ಮಕ್ಕಳಿಗೆ ಮೀಸಲಿಟ್ಟೆವು. ಈ ವರ್ಷ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿರುವುದರಿಂದ ಹೆಚ್ಚಿನ ಲಾಭ ನಿರೀಕ್ಷಿಸುತ್ತಿದ್ದೇವೆ. ಇದರಿಂದ ಏನೇ ಲಾಭ ಬಂದರೂ ಅದು ಶಾಲೆಗಲ್ಲ, ಮಕ್ಕಳಿಗೆ. ವಿಶೇಷ ಕಲಿಕಾ ಸಾಮರ್ಥ್ಯದ ಮಕ್ಕಳು ಉದ್ಯೋಗಿಗಳಾಗಲಿ ಎಂಬುದೇ ನಮ್ಮ ಗುರಿ. ಹಣತೆಗಳನ್ನುಕೊಳ್ಳುವ ಇಚ್ಛೆಯಿದ್ದವರು 9448725305 ದೂರವಾಣಿಗೆ ಸಂಪರ್ಕಿಸಬಹುದು ಎನ್ನುತ್ತಾರೆ ರಘುನಾಥ್ ಶೆಟ್ಟಿ.
ಪಾಲಕರ ಹರ್ಷ
ಮಕ್ಕಳು ಹಣತೆ ಮಾಡುತ್ತಿರುವ ವಿಷಯ ಕೇಳಿ ಅವರ ಪಾಲಕರು ಹರ್ಷಗೊಂಡಿದ್ದಾರೆ. ಕೆಲ ಮಕ್ಕಳು ಮನೆಯಲ್ಲಿ ಏನೂ ಮಾಡದೆ ಇದ್ದವರು, ಶಾಲೆಗೆ ಬಂದಾಗ ಹಣತೆ ತಯಾರಿಸುತ್ತಿರುವುದನ್ನು ನೋಡಿ ಹೆಮ್ಮೆಪಟ್ಟಿದ್ದಾರೆ. ನಮ್ಮ ಮಕ್ಕಳು ಸುಮ್ಮನೆ ಕೂತಿಲ್ಲ, ಏನೋ ಹೊಸತೊಂದನ್ನು ಕಲಿಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ವೃತ್ತಿಪರ ತರಬೇತಿಗೆ ಆದ್ಯತೆ
ವಿಶೇಷ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನಾನಾ ಬಗೆಯ ಚಟುವಟಿಕೆಗಳು, ಕೌಶಲ್ಯ ತರಬೇತಿಗಳನ್ನು ಈ ಶಾಲೆ ಒದಗಿಸುತ್ತದೆ. ವಿದ್ಯಾರ್ಥಿಗಳ ಬೌದ್ಧಿಕ ಮಟ್ಟದ ಅನುಸಾರವಾಗಿ ವೈಯಕ್ತಿಕ ಮಾರ್ಗದರ್ಶನ ಹಾಗೂ ಶಿಕ್ಷಣ ನೀಡಲಾಗುತ್ತದೆ. ಬಟ್ಟೆಯ ಕೈಚೀಲ, ಪೇಪರ್ ಕವರ್ ಹಾಗೂ ಅದರ ಮೇಲೆ ಸ್ಕ್ರೀನ್ ಪ್ರಿಂಟಿಂಗ್, ಹೊಲಿಗೆ, ಕಂಪ್ಯೂಟರ್ ತರಬೇತಿ ಹೀಗೆ ಯಾವ ಕ್ಷೇತ್ರದಲ್ಲಿ ಮಕ್ಕಳಿಗೆ ಆಸಕ್ತಿ ಇದೆಯೋ ಅದನ್ನು ಕಲಿಸಲಾಗುತ್ತದೆ. ಪಠ್ಯೇತರ ಚಟುವಟಿಕೆಯಾಗಿ ಹಾಡು, ನೃತ್ಯ, ಯೋಗ, ಕ್ರೀಡೆ ಹೀಗೆ ಕಲಿಕೆಯ ವೈವಿಧ್ಯತೆಯಿದೆ.
ಎರಡು ದಶಕಗಳಿಂದ ಸಕ್ರಿಯ:
ಕಾರ್ಕಳದ ಭಾರತಿ ಸೇವಾ ಮಂಡಳಿ ಟ್ರಸ್ಟ್ ಅಡಿಯಲ್ಲಿ, ಚೇತನಾ ವಿಶೇಷ ಮಕ್ಕಳ ಶಾಲೆ 2004ರಲ್ಲಿ ಆರಂಭವಾಯಿತು. ಸರ್ಕಾರದಿಂದ ಅಲ್ಪ ಪ್ರಮಾಣದ ಅನುದಾನವೂ ಶಾಲೆಗಿದೆ. ಆದರೆ, ಶಾಲೆ ಹೆಚ್ಚಾಗಿ ನಡೆಯುವುದು ದಾನಿಗಳ ನೆರವಿನಿಂದ. ಸದ್ಯ 104 ವಿದ್ಯಾರ್ಥಿಗಳು, 28 ಸಿಬ್ಬಂದಿಗಳು ಶಾಲೆಯಲ್ಲಿದ್ದಾರೆ. ಕನ್ನಡ ಮಾಧ್ಯಮದ ಈ ಶಾಲೆಯಲ್ಲಿ ಶಿರಸಿ, ಹಾವೇರಿ, ಶಿವಮೊಗ್ಗ, ಬಾಗಲಕೋಟೆ, ಹಾಸನ, ಮೈಸೂರು, ಬೆಂಗಳೂರು, ಮುಂಬೈನ ವಿಕಲಾಂಗರು ಹಾಗೂ ಬುದ್ಧಿಮಾಂದ್ಯರು, ಶ್ರವಣ ದೋಷ, ವಾಕ್ ದೋಷ, ಸೆರೆಬ್ರಲ್ ಪಾಲ್ಸಿ, ಆಟಿಸಂ, ಕಲಿಕಾ ನ್ಯೂನತೆ ಇರುವ ಮಕ್ಕಳಿದ್ದಾರೆ. ಸ್ಥಳೀಯರಿಗೆ ಬಸ್ ಸೌಲಭ್ಯ, ಬೇರೆ ಊರಿನವರಿಗೆ ಹಾಸ್ಟೆಲ್ ಸೌಲಭ್ಯವೂ ಇಲ್ಲುಂಟು.
-ಮಂಜುಳಾ, ಕಾರ್ಕಳ