Advertisement

ಕಾರ್ಕಳ ಬಸ್ ‌ನಿಲ್ದಾಣ ಬಂಡಿ ಮಠಕ್ಕೆ: ಚರ್ಚೆ ಮುನ್ನೆಲೆಗೆ

07:36 PM Oct 10, 2020 | mahesh |

ಕಾರ್ಕಳ: ಬಂಡಿಮಠದಲ್ಲಿ ಬಹುಕೋಟಿ ರೂ. ವೆಚ್ಚದಲ್ಲಿ ಬಸ್‌ನಿಲ್ದಾಣ ನಿರ್ಮಿಸಿದ್ದರೂ, ಸಾರ್ವಜನಿಕರಿಗೆ ಪೂರ್ಣ ಪ್ರಮಾಣ ದಲ್ಲಿ ಬಳಕೆಗೆ ಸಿಕ್ಕಿಲ್ಲ. ಹಳೆ ಬಸ್‌ ನಿಲ್ದಾಣವನ್ನು ಬಂಡಿಮಠಕ್ಕೆ ಸ್ಥಳಾಂತರಿಸುವ ಚರ್ಚೆ ಕೆಲವೊಮ್ಮೆ ಮುನ್ನೆಲೆಗೆ ಬಂದು ಸರಿಯುತ್ತದೆ. ಪುರಸಭೆಗೆ ನೂತನ ಸಾರಥಿಗಳ ನೇಮಕಕ್ಕೆ ಕ್ಷಣಗಣನೆ ಆಗುತ್ತಿರುವಾಗಲೇ ಸ್ಥಳಾಂತರ ವಿಚಾರ ಗರಿಗೆದರಿವೆ.

Advertisement

ಸ್ಥಳಾವಕಾಶದ ಕೊರತೆ
ಪುರಸಭೆ ವ್ಯಾಪ್ತಿಯಲ್ಲಿ ರಸ್ತೆಗಳು ಇಕ್ಕಟ್ಟಾಗಿವೆ. ವಿಸ್ತರಣೆಗೆ ತಾಂತ್ರಿಕ ಸಮಸ್ಯೆಗಳಿವೆ. ಮುಖ್ಯ ಪೇಟೆ ಯಲ್ಲಿ ಓಡಾಟಕ್ಕೆ ಸ್ಥಳಾವಕಾಶದ ಕೊರತೆಯಿದೆ. ಒಳಚರಂಡಿ ಹಾಗೂ ರಸ್ತೆ ದುರಸ್ತಿ ಕಾಮಗಾರಿಗಳು ಕೂಡ ಆರಂಭವಾಗುವ ನಿರೀಕ್ಷೆಯಿದ್ದು, ಹಳೆ ಬಸ್‌ ನಿಲ್ದಾಣವನ್ನು ಬಂಡಿಮಠಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ಪೂರಕ ವಾಗಿ ಬಂಡಿಮಠ ಶೌಚಾಲಯ ದುರಸ್ತಿ, ಬಣ್ಣ ಬಳಿಯುವ ಕಾಮಗಾರಿ ಸಹಿತ ಕೆಲ ಕಾಮಗಾರಿಗಳು ಆರಂಭಗೊಂಡಿವೆ.

2.ಕೋ ರೂ. ವೆಚ್ಚದ ನಿಲ್ದಾಣ
ಪುರಸಭೆಯ 5ನೇ ವಾರ್ಡ್‌ನ ಬಂಡಿಮಠದಲ್ಲಿ 2011-12ರಲ್ಲಿ 2.18 ಎಕರೆ ಜಾಗವನ್ನು ಬಸ್‌ ನಿಲ್ದಾಣಕ್ಕಾಗಿ ಕಾದಿರಿಸಿ, 1.78 ಎಕರೆ ವಿಸ್ತೀರ್ಣದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ಕಾಮಗಾರಿ ನಡೆಸಿ, ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿತ್ತು.

ಸಾರ್ವಜನಿಕರ, ವರ್ತಕರ ಸಹಕಾರ ಅಗತ್ಯ
ಸ್ಥಳಾಂತರದ ಚರ್ಚೆ ಕೆಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಪುರಸಭೆಯಲ್ಲೂ ಹಲವು ಬಾರಿ ಉಲ್ಲೇಖವಾಗಿತ್ತು. ಇದು ನ್ಯಾಯಾಲಯದ ಮೆಟ್ಟಿಲೂ ಏರಿತ್ತು. ಜನ ಸಂಚಾರ, ಕಚೇರಿಗಳು ಇರುವಲ್ಲಿಂದ ಸ್ಥಳಾಂತರಿಸದಂತೆ, ಪರ- ವಿರೋಧ ಗಳಿದ್ದವು. ಲಾಬಿಗಳೂ ಇದ್ದವು. ಇದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಒತ್ತಡಕ್ಕೆ ಸಿಲುಕಿದ್ದಾರೆ. ಸದ್ಯ ಸಾರ್ವಜನಿಕರು, ವರ್ತಕರು ಸಹಕರಿಸಿದರೆ, ಬಸ್‌ ನಿಲ್ದಾಣ ಶಾಶ್ವತವಾಗಿ ಸ್ಥಳಾಂತರಗೊಳ್ಳಲಿದೆ ಎಂದು ಹೇಳಲಾಗಿದೆ.

ಸಮಾನ ಬಳಕೆಗೆ ಹೈಕೋರ್ಟ್‌ ಆದೇಶ
ಕಾರ್ಕಳದಲ್ಲಿ ಎರಡೂ ಬಸ್‌ ನಿಲ್ದಾಣಗಳನ್ನು ಸಮಾನವಾಗಿ ಬಳಕೆ ಮಾಡಬೇಕೆಂದು ಹೈಕೋರ್ಟ್‌ ಹಿಂದಿನ ತೀರ್ಪಿನಲ್ಲಿ ಸ್ಪಷ್ಟ ಪಡಿಸಿತ್ತು. ಈ ಆದೇಶ ಕೂಡ ಪಾಲಿಸಲಾಗುತಿಲ್ಲ. ಈ ಹಿಂದೆ 2 ಬಾರಿ ಬಂಡಿಮಠ ಬಸ್‌ ನಿಲ್ದಾಣದ ಪರವಾಗಿ ಹಿಂದಿನ ಜಿಲ್ಲಾಧಿಕಾರಿ ಗಳ ಅವಧಿಯಲ್ಲಿ ಆದೇಶವಾಗಿತ್ತು.

Advertisement

ಮೂಲಸೌಕರ್ಯ ಅಗತ್ಯ
ಬಂಡಿಮಠ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ, ಬಸ್‌ ಕುರಿತು ಮಾಹಿತಿ ಪಡೆಯಲು, ದೂರದೂರಿಗೆ ಪ್ರಯಾಣ ಬೆಳೆಸುವ ನಿಟ್ಟಿನಲ್ಲಿ ಮುಂಗಡವಾಗಿ ಟಿಕೆಟ್‌ ಪಡೆಯಲು ಕೌಂಟರ್‌ಗಳು, ಸ್ಥಿರ ದೂರವಾಣಿ, ಕಂಪ್ಯೂಟರ್‌, ಇಂಟರ್ನೆಟ್‌ ವ್ಯವಸ್ಥೆ ಕಲ್ಪಿಸುವುದು, ಬಸ್‌ ವೇಳಾಪಟ್ಟಿ, ಸಾರ್ವಜನಿಕ ಮಾಹಿತಿ ವ್ಯವಸ್ಥೆಗಳು ಆಗಬೇಕಿವೆ. ಬೆಳಕಿನ ವ್ಯವಸ್ಥೆಯೂ ಬೇಕಿದೆ. ಇಲ್ಲಿ ಕೆಎಸ್‌ಆರ್‌ಟಿಸಿ ಕಚೇರಿ ಇಲ್ಲದ್ದರಿಂದ ಹಿರಿಯರು, ವಿದ್ಯಾರ್ಥಿಗಳ ಪಾಸ್‌ಗೆ ದೂರದ ಉಡುಪಿಯನ್ನೇ ಅವಲಂಬಿಸಬೇಕಿದೆ.

2.18 ಎಕರೆ ಬಸ್‌ ನಿಲ್ದಾಣಕ್ಕೆ ಕಾದಿರಿಸಿದ ಜಾಗ
1.78 ಎಕರೆ ಅಭಿವೃದ್ಧಿ ಪಡಿಸಿದ ಜಾಗ
2011-12ರಲ್ಲಿ ನೂತನ ಬಸ್‌ ನಿಲ್ದಾಣ ನಿರ್ಮಾಣ 2 ಕೋಟಿ ರೂ. ವೆಚ್ಚ

ಬೇಡಿಕೆಯಿದೆ
ಬಸ್‌ನಿಲ್ದಾಣ ಸ್ಥಳಾಂತರ ಬೇಡಿಕೆ ಹಿಂದಿನಿಂದಲೂ ಇದೆ. ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ.
-ರೇಖಾ ಜೆ. ಶೆಟ್ಟಿ, ಮುಖ್ಯಾಧಿಕಾರಿ ಪುರಸಭೆ ಕಾರ್ಕಳ

ಇಲಾಖೆಗೆ ಪ್ರಸ್ತಾವ ಬಂದಿಲ್ಲ
ಸ್ಥಳಾಂತರಕ್ಕೆ ಸಂಬಂಧಿಸಿ ಇದುವರೆಗೆ ಯಾವುದೇ ಪ್ರಸ್ತಾವ ಇಲಾಖೆಗೆ ಬಂದಿಲ್ಲ. ಪುರಸಭೆ, ಜಿಲ್ಲಾಡಳಿತ ಈ ಬಗ್ಗೆ ನಿರ್ಧರಿಸಲಿದೆ.
-ಉದಯಕುಮಾರ್‌ ಶೆಟ್ಟಿ, ಡಿಪೋ ಮ್ಯಾನೇಜರ್‌ ಉಡುಪಿ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next