ಬೆಳ್ಮಣ್: ಕಬಡ್ಡಿ ನಮ್ಮ ಮಣ್ಣಿನ ಕ್ರೀಡೆಯಾಗಿದ್ದು ಇದೀಗ ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಿರುವುದು ಹೆಮ್ಮೆಯ ವಿಚಾರ ಎಂದು ಬೋಳ ಮಾರಗುತ್ತು ಸುಭಾಶ್ ಶೆಟ್ಟಿ ಹೇಳಿದರು
ಅವರು ಮಂಗಳವಾರ (ಆ.20) ಬೋಳಕೋಡಿಯ ನಿಟ್ಟೆ ಶಂಕರ ಅಡ್ಯಂತಾಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೆಳ್ಮಣ್ ವೃತ್ತ ಮಟ್ಟದ ಕಬಡ್ಡಿ ಪಂದ್ಯಾಟದ ಉದ್ಘಾಟನೆಯಲ್ಲಿ ಆಧ್ಯಕ್ಷತೆ ವಹಿಸಿ ಮಾತನಾಡಿದರು.
ಬೋಳ ಗ್ರಾಮ ಪಂಚಾಯತ್ ಸದಸ್ಯ ರಘುವೀರ್ ಶೆಟ್ಟಿ ಪಂದ್ಯಾಟ ಉದ್ಘಾಟಿಸಿ ಶುಭ ಹಾರೈಸಿದರು. ಪಂದ್ಯಾಟದ ಮಾರ್ಗದರ್ಶಕ ಕಲ್ಯಾ ವಸಂತ್, ಬೋಳಪರಾರಿ ವಿಕಾಸ್ ಶೆಟ್ಟಿ, ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ, ಬಾಲಾಜಿ ಶೆಟ್ಟಿ, ಶಿಕ್ಷಣ ಸಂಯೋಜಕ ಪ್ರಕಾಶ್, ಬೋಳ ಕುಸಲ್ದ ಜವನೆರ್ ತಂಡದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಬೋಳ ಕೋಡಿ ಶಾಲೆಯ ಮುಖ್ಯ ಶಿಕ್ಷಕ ಎ.ಆರ್.ಲಕ್ಕೊಂಡ, ಶಿಕ್ಷಕರಿದ್ದರು. ಸಚ್ಚೇರಿಪೇಟೆ ಸುಧೀರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಾಟದಲ್ಲಿ ಬಾಲಕರ 9 ಹಾಗೂ ಬಾಲಕಿಯರ 8 ತಂಡಗಳಿದ್ದವು. ಬಾಲಕರ ವಿಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡ್ಕೂರು ಪ್ರಥಮ ಸ್ಥಾನ ಗಳಿಸಿದರೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಟ್ಟೆ ದ್ವಿತೀಯ ಸ್ಥಾನ ಪಡೆಯಿತು.
ಬಾಲಕಿಯರ ವಿಭಾಗದಲ್ಲಿ ಎನ್.ಎಸ್.ಎ.ಎಂ ಹಿರಿಯ ಪ್ರಾಥಮಿಕ ಶಾಲೆ ಬೋಳಕೋಡಿ ಪ್ರಥಮ ಸ್ಥಾನ ಗಳಿಸಿದರೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡ್ಕೂರು ದ್ವಿತೀಯ ಸ್ಥಾನ ಪಡೆಯಿತು.