Advertisement

Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್‌; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!

02:57 PM Jan 10, 2025 | Team Udayavani |

ಅಜೆಕಾರು: ಕಾರ್ಕಳ ತಾಲೂಕಿನ ಗ್ರಾಮೀಣ ಪಂಚಾಯತ್‌ಗಳಲ್ಲೊಂದಾದ ಶಿರ್ಲಾಲು ಗ್ರಾ.ಪಂ. ವ್ಯಾಪ್ತಿಯಲ್ಲಿ 15 ವರ್ಷಗಳ ಹಿಂದೆ ನಿರ್ಮಾಣವಾದ ಖಾಸಗಿ ಮೊಬೈಲ್‌ ಟವರ್‌ ಒಂದು ಬಿಟ್ಟರೆ ಇಡೀ ಪಂಚಾಯತ್‌ ವ್ಯಾಪ್ತಿಯಲ್ಲಿ ಬೇರೆ ಟವರ್‌ಗಳಿಲ್ಲ. ಹೀಗಾಗಿ ಶಿರ್ಲಾಲು ಮುಖ್ಯ ರಸ್ತೆಯ ಆಸುಪಾಸಿನಲ್ಲಿ ಒಂದೆರಡು ಕಿ.ಮೀ. ವ್ಯಾಪ್ತಿಗಷ್ಟೇ ನೆಟ್‌ವರ್ಕ್‌ ಸಿಗುತ್ತದೆ.

Advertisement

ಡಿಜಿಟಲ್‌ ಯುಗದಲ್ಲಿ ಎಲ್ಲದಕ್ಕೂ ಇಂಟರ್‌ನೆಟ್ ಅವಲಂಬಿಸಿಯೇ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ಶಿರ್ಲಾಲು ಜನತೆ ನೆಟ್‌ವರ್ಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶಿರ್ಲಾಲಿನ ಕೆಲ ಭಾಗಗಳಲ್ಲಿ ಇಂಟರ್‌ನೆಟ್ ಕನಸಿನ ಮಾತಾಗಿದ್ದು ಮೊಬೈಲ್‌ ಕರೆ ಮಾಡಲು ಕೂಡಾ ಸಾಧ್ಯವಾಗದ ಪರಿಸ್ಥಿತಿ ಇದೆ.

ಶಿರ್ಲಾಲಿನ ಪೈಯಂದೆ, ಎರ್ಮಾಳು, ಹಾರಾಡಿ, ಪಡಿಬೆಟ್ಟು, ಮುದೆಲ್ಕಡಿ, ಮುಡಾಯಿಗುಡ್ಡೆ, ಬೈದರ್ಲೆ ಬೆಟ್ಟು, ಪದವಿ ಪೂರ್ವ ಕಾಲೇಜು ಪರಿಸರ,  ಮುಂಡ್ಲಿ, ಕುಕ್ಕುಜೆ ಭಾಗಗಳಲ್ಲಿ 5ಜಿ ಬಿಟ್ಟು 2ಜಿ ಯೂ ಇಲ್ಲ ಕನಿಷ್ಠ ಪಕ್ಷ ಮೊಬೈಲ್‌ ಕರೆ ಮಾತನಾಡಲು ಮನೆ ಬಿಟ್ಟು ರಸ್ತೆಯಂಚಿಗೆ ಬರಬೇಕಾಗಿದೆ.

ಪಂಚಾಯತ್‌ ವ್ಯಾಪ್ತಿಯಲ್ಲಿರುವ ಖಾಸಗಿ ಕಂಪೆನಿಯ ಟವರ್‌ನಿಂದ ಹಿಂದೆ ಸ್ವಲ್ಪಮಟ್ಟಿಗಾದರೂ ಇಂಟರ್‌ನೆಟ್‌ ಸಿಗುತ್ತಿತ್ತಾದರೂ ಇತ್ತೀಚಿನ ವರ್ಷಗಳಲ್ಲಿ ಸಮರ್ಪಕ ನಿರ್ವಹಣೆ ಇಲ್ಲದೆ ಅದೂ ಇಲ್ಲದಂತಾಗಿ ಜನತೆ ತಡಕಾಡುವಂತಾಗಿದೆ. ಈಗ ಇರುವ ಒಂದು ಟವರ್‌ನ ಜತೆ ಇನ್ನೂ ಎರಡು ಮೂರು ಟವರ್‌ ಪಂಚಾಯತ್‌ ವ್ಯಾಪ್ತಿಯಲ್ಲಿ ನಿರ್ಮಾಣವಾದರೆ ಸಮಸ್ಯೆ ಬಗೆಹರಿಯಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.

400ಕ್ಕೂ ಅಧಿಕ ಮನೆಗಳಿಗೆ ಸಮಸ್ಯೆ
ಶಿರ್ಲಾಲಿನ 400ಕ್ಕೂ ಹೆಚ್ಚಿನ ಮನೆಗಳಿಗೆ ನೆಟ್ವರ್ಕ್‌ ಸಮಸ್ಯೆ ಇದ್ದು ಅಂಗನವಾಡಿ, ಶಾಲೆಗಳು, ಹಾಲು ಉತ್ಪಾದಕರ ಸಂಘ ಸೇರಿದಂತೆ ವಿವಿಧ ಸರಕಾರಿ ಕಚೇರಿಗಳಿಗೂ ನೆಟ್ವರ್ಕ್‌ ಸಮಸ್ಯೆ ಕಾಡುತ್ತಿದೆ. ತುರ್ತು ಸಂದರ್ಭಗಳಲ್ಲಿ ಈ ಭಾಗದ ಜನರು ನೆಟ್ವರ್ಕ್‌ ಗಾಗಿ ಗುಡ್ಡ ಬೆಟ್ಟಗಳನ್ನು ಏರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Advertisement

ಬೆಳೆ ಸಮೀಕ್ಷೆ ಎಂಬ ಮಹಾ ಸಂಕಷ್ಟ
ಶಿರ್ಲಾಲಿನ ಪೈಯಂದೆ, ಎರ್ಮಾಳು, ಹಾರಾಡಿ, ಪಡಿಬೆಟ್ಟು, ಮುದೆಲ್ಕಡಿ, ಮುಡಾಯಿಗುಡ್ಡೆ, ಮುಂಡ್ಲಿ, ಕುಕ್ಕುಜೆ ಭಾಗದಲ್ಲಿ ಬಹುತೇಕರು ಕೃಷಿಕರು. ಸರಕಾರದ ಬೆಳೆ ತಂತ್ರಾಂಶದಲ್ಲಿ ಬೆಳೆ ಸಮೀಕ್ಷೆ ಮಾಡಬೇಕಾದರೆ ಕೃಷಿ ಕಾರ್ಯ ಕ್ಷೇತ್ರದಲ್ಲಿಯೇ ಮಾಡಬೇಕಾಗಿದ್ದು ಆನ್‌ಲೈನ್‌ ಮುಖಾಂತರ ಮಾಡುವುದು ಈ ಭಾಗದ ಕೃಷಿಕರಿಗೆ ಕನಸಿನ ಮಾತು. ಹೀಗಾಗಿ ಆಫ್ಲೈನ್‌ನಲ್ಲಿಯೇ ಬೆಳೆ ಸಮೀಕ್ಷೆ ಮಾಡಬೇಕಾದ ಅನಿವಾರ್ಯತೆ ಇದೆ.

ಶಿರ್ಲಾಲು ಗ್ರಾಮದ ಶೇ. 70ರಷ್ಟು ಪ್ರದೇಶಗಳಲ್ಲಿ ಮೊಬೈಲ್‌ ನೆಟ್‌ವರ್ಕ್‌, ಇಂಟರ್‌ನೆಟ್ ಸೇವೆ ಇಲ್ಲದೆ ಜನರು ಸರಕಾರದ ವಿವಿಧ ಯೋಜನೆಗಳನ್ನು ಪಡೆಯಲು ಭಾರೀ ಸಮಸ್ಯೆಯಾಗುತ್ತಿದೆ, ಜತೆಗೆ ತುರ್ತು ಸಂದರ್ಭಗಳಲ್ಲಿ ಕರೆ ಮಾಡಲು ನೆಟ್‌ವರ್ಕ್‌ ಇಲ್ಲದೆ ಪರಿತಪಿಸಬೇಕಾಗುತ್ತದೆ. ಈ ಬಗ್ಗೆ ಆಡಳಿತ ವ್ಯವಸ್ಥೆ ತುರ್ತು ಕ್ರಮ ವಹಿಸಬೇಕಾಗಿದೆ.
-ರಮಾನಂದ ಪೂಜಾರಿ, ಮಾಜಿ ಅಧ್ಯಕ್ಷರು, ಶಿರ್ಲಾಲು ಗ್ರಾ.ಪಂ.

ನಿಮ್ಮೂರಲ್ಲೂ ನೆಟ್‌ವರ್ಕ್‌ ಸಮಸ್ಯೆ ಇದೆಯೇ?
ನೀವೂ ನೆಟ್‌ವರ್ಕ್‌ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದೀರಾ? ಕರೆ ಮಾಡಲೆಂದು ಎಲ್ಲೆಂದರಲ್ಲಿ ಅಲೆಯಬೇಕಾದ ಪರಿಸ್ಥಿತಿ ಇದೆಯೇ? ನೆಟ್‌ವರ್ಕ್‌ ಇಲ್ಲದೆ ಸಂಕಷ್ಟಕ್ಕೆ ಒಳಗಾದ ಘಟನೆಗಳು ನಿಮ್ಮ ಜೀವನದಲ್ಲಿ ಸಂಭವಿಸಿದೆಯೇ?  ಅಂಥವುಗಳನ್ನು ಕನ್ನಡದಲ್ಲಿ ಟೈಪ್‌ ಮಾಡಿ ಉದಯವಾಣಿ ಸುದಿನದ ವಾಟ್ಸ್ಯಾಪ್‌ ನಂಬರ್‌ 6362906071ಗೆ ಹೆಸರು, ಊರು ನಮೂದಿಸಿ ಕಳುಹಿಸಿ.

ವರ್ಕ್‌ ಫ್ರಮ್‌ ಹೋಂ ಇಲ್ಲವೇ ಇಲ್ಲ
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಶಿಕ್ಷಣ ಹಾಗೂ ವರ್ಕ್‌ ಫ್ರಮ್‌ ಹೋಂ ಎಂಬುದು ಸರ್ವೇ ಸಾಮಾನ್ಯವಾಗಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ವರ್ಕ್‌ ಫ್ರಮ್‌ ಹೋಂ ಮಾಡುವವರಿಗೆ ಸಮಸ್ಯೆಯಾಗಿದೆ. ಹಣವಂತರು ದುಬಾರಿ ಬೆಲೆ ತೆತ್ತು ಖಾಸಗಿ ಕೇಬಲ್‌ ಸಂಪರ್ಕ ಪಡೆದು ಇಂಟರ್‌ನೆಟ್ ಬಳಸಿಕೊಂಡರೆ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಕಷ್ಟವಾಗಿದೆ. ಶಿರ್ಲಾಲಿನಲ್ಲಿ ಅಂಗನವಾಡಿಯಿಂದ ಪಿಯುಸಿವರೆಗೆ ಶಾಲಾ ಕಾಲೇಜುಗಳಿದ್ದು ಶೈಕ್ಷಣಿಕ ಕಾರ್ಯಕ್ರಮಗಳನ್ನು ಆ್ಯಪ್‌ ಮೂಲಕ ಆನ್‌ಲೈನ್‌ ಅಪ್ಡೇಟ್‌ ಮಾಡಬೇಕಾಗಿದ್ದು ಇಂಟರ್‌ನೆಟ್ ಸಮಸ್ಯೆಯಿಂದ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸಂಕಷ್ಟಪಡಬೇಕಾಗಿದೆ.

-ಜಗದೀಶ್‌ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next