ಕೋಟ: ಬಡಗುತಿಟ್ಟಿನ ಖ್ಯಾತ ಸ್ತ್ರೀವೇಷಧಾರಿ ಎಂ.ಎ.ನಾಯ್ಕ ಅವರಿಗೆ ಸಮ್ಮಾನ ಕಾರ್ಯಕ್ರಮ ಫೆ.27ರಂದು ಕಾರ್ಕಡದಲ್ಲಿ, ಸಂಬಂಧ ನರಸಿಂಹ ಐತಾಳರ ಸಂಯೋಜನೆಯಲ್ಲಿ ಜರಗಿತು. ಈ ಸಂದರ್ಭ ಗಣ್ಯರ ಸಮ್ಮುಖದಲ್ಲಿ ಎಂ.ಎ. ನಾಯ್ಕರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಕಮಲಶಿಲೆ ಮೇಳದ ಆಡಳಿತ ಮೊಕ್ತೇಸರ ಸಚ್ಚಿದಾನಂದ ಛಾತ್ರ ಅವರು ಸಮ್ಮಾನ ನೆರವೇರಿಸಿ, ರಂಗದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರಗಳು ತಲುಪಬೇಕು ಹಾಗೂ ನಿವೃತ್ತಿಯ ಅನಂತರವು ಕಲಾವಿದರನ್ನು ಗೌರವದಿಂದ ನೋಡಬೇಕು ಎಂದರು.
ಮುಖ್ಯ ಅತಿಥಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಯಕ್ಷಗಾನದಂತಹ ಶ್ರೀಮಂತ ಕಲೆಯ ಮೂಲಕ ಕರಾವಳಿಯು ವಿಶ್ವದ ಸಾಂಸ್ಕೃತಿಕ ರಾಜಧಾನಿಯಾಗಿ ಗುರುತಿಸಿಕೊಂಡಿದೆ ಎಂದರು.
ಕೋಟ ಪಡುಕರೆಯ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕಾರ್ಯಕ್ರಮದ ಸಂಯೋಜಕ ನರಸಿಂಹ ಐತಾಳ, ಮೇಳದ ಪ್ರಧಾನ ವೇಷಧಾರಿ ಸೌಡ ಗೋಪಾಲ ಉಪಸ್ಥಿತರಿದ್ದರು.
ಅಧ್ಯಕ್ಷ ತಾರಾನಾಥ ಹೊಳ್ಳ ಸ್ವಾಗತಿಸಿ, ಉಪನ್ಯಾಸಕ ಎಚ್.ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ಗುಂಡ್ಮಿ ಶ್ರೀಧರ ಶಾಸ್ತ್ರಿ ವಂದಿಸಿದರು.