ಇಂದು ಕಾರ್ಗಿಲ್ ವಿಜಯ ದಿವಸ. ಜಮ್ಮು ಕಾಶ್ಮೀರದ ಕಾರ್ಗಿಲ್ ನಲ್ಲಿ ಪ್ರವೇಶ ಮಾಡಿದ್ದ ಪಾಕಿಸ್ಥಾನಿಗಳನ್ನು ಒದ್ದೋಡಿಸಿ ಜಗತ್ತಿನ ಮುಂದೆ ಭಾರತ ತನ್ನ ಶಕ್ತಿ ಪ್ರದರ್ಶನ ಮಾಡಿದ ದಿನ. ಭಾರತದ ವೀರ ಯೋಧರು ಕೆಚ್ಚೆದೆಯಿಂದ ಹೋರಾಡಿ, ಶತ್ರುಗಳನ್ನು ಹಿಮ್ಮಟ್ಟಿಸಿ ಭಾರತದ ತ್ರಿವರ್ಣ ಧ್ವಜವನ್ನು ಬಾನೆತ್ತೆರಕ್ಕೆ ಹಾರಿಸಿದ್ದ ದಿನ. ಕಾರ್ಗಿಲ್ ಕದನದ ಐವರು ವೀರ ಕಲಿಗಳ ಪರಿಚಯ ಇಲ್ಲಿದೆ.
ಕ್ಯಾ. ವಿಕ್ರಮ್ ಬಾತ್ರಾ
ಕಾರ್ಗಿಲ್ ವೀರ ಕಥನದಲ್ಲಿ ಅಚ್ಚಳಿಯಿದ ಹೆಸರು ಕ್ಯಾ. ವಿಕ್ರಮ್ ಬಾತ್ರಾ. 13 ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ನ ಭಾಗವಾಗಿದ್ದ ವಿಕ್ರಮ್ ಬಾತ್ರಾ ತನ್ನ 24ನೇ ವಯಸ್ಸಿನಲ್ಲಿಯೇ ಯುದ್ದದಲ್ಲಿ ಮಡಿದರು. ಜಾಹಿರಾತಿನ ಟ್ಯಾಗ್ ಲೈನ್ ಆಗಿದ್ದ ‘ದಿಲ್ ಮಾಂಗೆ ಮೋರ್’ ಅನ್ನು ಯುದ್ಧ ಘೋಷಣೆಯನ್ನಾಗಿ ಮಾಡಿದರು. ಅಪ್ರತಿಮ ಧೈರ್ಯವಂತ ಬಾತ್ರಾ ಸುಡುತ್ತಿರುವ ಜ್ವರದ ಮಧ್ಯೆಯೂ ಅತೀ ಎತ್ತರದ ಶಿಖರ ಪಾಯಿಂಟ್ 4875 ಗೆ ನುಗ್ಗಿ ಅದನ್ನು ಶತ್ರುಗಳ ಕೈಯಿಂದ ವಶಪಡಿಸಿಕೊಂಡರು.
ಯುದ್ದಕ್ಕೆ ಹೋಗುವ ಮೊದಲು ಬಾತ್ರ, “ನಾನು ಭಾರತದ ಧ್ವಜವನ್ನು ಹೆಮ್ಮೆಯಿಂದ ಹಾರಿಸಿಕೊಂಡು ಬರುತ್ತೇನೆ. ಇಲ್ಲವಾದರೆ ಸುತ್ತಿದ ಧ್ವಜದೊಂದಿಗೆ ನನ್ನ ದೇಹ ಬರುತ್ತದೆ” ಎಂದಿದ್ದರು. ಪಾಯಿಂಟ್ 4875 ವಶಪಡಿಸಿಕೊಳ್ಳುವ ಹಂತದಲ್ಲಿ ಮತ್ತೊಬ್ಬ ಯೋಧನನ್ನು ರಕ್ಷಿಸುವ ಹಂತದಲ್ಲಿ ಗಾಯಗೊಂಡರು.
ಮರಣೋತ್ತರವಾಗಿ ವಿಕ್ರಮ್ ಬಾತ್ರಾ ಅವರಿಗೆ ಅತ್ಯುನ್ನತ ಪರಮ ವೀರ ಚಕ್ರ ಗೌರವ ನೀಡಲಾಯಿತು. ವೀರಾವೇಶದ ಯೋಧ ಬಾತ್ರಾಗೆ ‘ಕಾರ್ಗಿಲ್ ಹೀರೋ, ಕಾರ್ಗಿಲ್ ನ ಸಿಂಹ ಎಂದೆಲ್ಲಾ ಬಿರುದುಗಳಿಂದ ಕರೆಯಲಾಗುತ್ತದೆ.
ಲೆ. ಬಲ್ವಾನ್ ಸಿಂಗ್
ಈಗ ಕರ್ನಲ್ ಪದವಿಗೇರಿರುವ ಬಲ್ವಾನ್ ಸಿಂಗ್ ಅವರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಲೆಫ್ಟಿನೆಂಟ್ ಆಗಿದ್ದರು. 25 ವರ್ಷದ ಲೆ. ಸಿಂಗ್ ಗೆ ನೀಡಿದ್ದು ಟೈಗರ್ ಹಿಲ್ ಅನ್ನು ವಶಪಡಿಸಿಕೊಳ್ಳುವ ಕಾರ್ಯ. ಅತ್ಯಂತ ದುರ್ಗಮ, ಸದಾ ಅಪಾಯಕಾರಿಯಾದ ದಾರಿಯಲ್ಲಿ ತನ್ನ ತುಕಡಿಯನ್ನು ಕರೆದುಕೊಂಡು ಹೋಗಬೇಕಿತ್ತು. ಕಠಿಣ ಪರ್ವತವನ್ನು ಭಾರತೀಯ ಸೈನಿಕರು ಹತ್ತಿ ಬರಲಾರರು ಎಂದು ಪಾಕ್ ಸೈನಿಕರು ನಿರಾಳರಾಗಿದ್ದರು. ಆದರೆ ಅಲ್ಲಿ ಹುಲಿಯಂತೆ ಘರ್ಜಿಸಿದ್ದು ಬಲ್ವಾನ್ ಸಿಂಗ್ ಪಡೆ.
ಟೈಗರ್ ಬೆಟ್ಟವೇರಿದ ಬಲ್ವಾನ್ ಸಿಂಗ್ ನಾಲ್ವರು ಶತ್ರು ಸೈನಿಕರನ್ನು ಹೊಡೆದುರುಳಿಸಿದ್ದರು. ಸ್ವತಃ ಗಾಯಗೊಂಡರೂ ವೀರಾವೇಶದಿಂದ ಹೋರಾಡಿದರು. ಇವರ ಹೋರಾಟ ಕಂಡ ಪಾಕ್ ಸೈನಿಕರು ಪ್ರತಿದಾಳಿ ಮುಂದುವರಿಸದೆ ಸ್ಥಳದಿಂದ ಓಡಿಹೋಗಿದ್ದರು. ಬಲ್ವಾನ್ ಸಿಂಗ್ ಅವರಿಗೆ ನಂತರ ಮಹಾವೀರ ಚಕ್ರ ಪ್ರಧಾನ ಮಾಡಲಾಯಿತು.
ಲೆ. ಮನೋಜ್ ಕುಮಾರ್ ಪಾಂಡೆ
ಗೂರ್ಖಾ ರೈಫಲ್ಸ್ ನ ಭಾಗವಾಗಿದ್ದ ಮನೋಜ್ ಕುಮಾರ್ ಪಾಂಡೆ ಮತ್ತು ತಂಡವನ್ನು ಖಲುಬಾರ್ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಶತ್ರುಗಳ ಕಣ್ಣಿಗೆ ಬೀಳದಂತೆ ಅವರ ಮೇಲೆ ದಾಳಿ ನಡೆಸಲು ಹೇಳಲಾಗಿತ್ತು. ಎದುರಿಗೆ ಸಿಕ್ಕ ಶತ್ರುಗಳನ್ನು, ಅವರ ನೆಲೆಗಳನ್ನು ಪುಡಿಗಟ್ಟುತ್ತಾ ಸಾಗಿದ ಪಾಂಡೆ, ನಂತರ ಶತ್ರುಗಳ ಗುಂಡಿಗೆ ಪ್ರಾಣ ತೆತ್ತರು. ಆದರೆ ಖಲುಬಾರ್ ಪ್ರದೇಶ ಭಾರತೀಯರ ವಶವಾಗಿತ್ತು.
ವೀರ ಸೇನಾನಿ ಲೆ. ಮನೋಜ್ ಕುಮಾರ್ ಪಾಂಡೆ ಸೇನೆ ಸೇರಿದ ಪ್ರಮುಖ ಉದ್ದೇಶ ಅತ್ಯುನ್ನತ ಪರಮ ವೀರ ಚಕ್ರ ಪುರಸ್ಕಾರ ಪಡೆಯುವುದು. ಕಾರ್ಗಿಲ್ ಯುದ್ಧದ ನಂತರ ಮರಣೋತ್ತರವಾಗಿ ಪಾಂಡೆಯವರಿಗೆ ಪರಮ ವೀರ ಚಕ್ರ ನೀಡಿ ಪುರಸ್ಕರಿಸಲಾಯಿತು.
ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್
ಯೋಗೇಂದ್ರ ಸಿಂಗ್ ಯಾದವ್ ಅಪ್ರತಿಮ ಸೇನಾನಿ. ಟೈಗರ್ ಹಿಲ್ ನ ಬಂಕರ್ ಗಳನ್ನು ವಶಪಡಿಸಿಕೊಳ್ಳಲು ಹೋದ ಘಾತಕ್ ಪ್ಲಾಟೂನ್ ನ ಭಾಗವಾಗಿದ್ದ ಯೋಗೇಂದ್ರ ಸಿಂಗ್ ಯಾದವ್ ಗೆ ಆಗ ಕೇವಲ 19 ವರ್ಷ.
ಸಾಗುತ್ತಿದ್ದ ಯಾದವ್ ತಂಡದ ಮೇಲೆ ಶತ್ರುಗಳು ದಾರಿ ಮಧ್ಯೆ ದಾಳಿ ನಡೆಸಿದ್ದರು. ಯಾದವ್ ಜೊತೆಗಿದ್ದ ಸೈನಿಕರು ದಾಳಿಯಲ್ಲಿ ಅಸುನೀಗಿದರು. ಯಾದವ್ ಕೂಡಾ ಗಂಭೀರ ಗಾಯಗೊಂಡರು. ಅವರ ಎಡಗೈ ಜರ್ಜರಿತವಾಗಿತ್ತು.
ಧೃತಿಗೆಡದ ಯಾದವ್ ತನ್ನ ಬೆಲ್ಟ್ ನಿಂದ ಎಡಗೈಯನ್ನು ಸೊಂಟಕ್ಕೆ ಕಟ್ಟಿಕೊಂಡು ಶತ್ರುಗಳ ಮೇಲೆ ದಾಳಿ ಮಾಡಿದರು. ನಾಲ್ಕು ಶತ್ರು ಸೈನಿಕರನ್ನು ತರಿದರು. ಶತ್ರುಗಳ ಪ್ರತಿದಾಳಿಯನ್ನು ನಿಲ್ಲಿಸಿದರು. ಈ ಮೂಲಕ ತನ್ನ ಮತ್ತೊಂದು ತುಕಡಿಗೆ ತೆರಳಲು ಅನುವು ಮಾಡಿಕೊಟ್ಟು ಪ್ರದೇಶವನ್ನು ವಶಪಡಿಸಿಕೊಳ್ಳಲು ಸಹಾಯಕವಾದರು.
19 ನೇ ವರ್ಷಕ್ಕೆ ಯೋಗೇಂದ್ರ ಸಿಂಗ್ ಯಾದವ್ ಅವರಿಗೆ ಪರಮ ವೀರ ಚಕ್ರ ಪ್ರಶಸ್ತಿ ದೊರೆಯಿತು. ಈಗ ಅವರು ಮೇಜರ್ ಸುಬೇದಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೇಜರ್ ರಾಜೇಶ್ ಅಧಿಕಾರಿ
1999 ಮೇ 14ರಂದು 16 ಸಾವಿರ ಅಡಿ ಎತ್ತರದ ಟೋಲೊಲಿಂಗ್ ಪ್ರದೇಶವನ್ನು ವಶಪಡಿಸಿಕೊಳ್ಳು ತೆರಳಿದ್ದ 10 ಸೈನಿಕರ ಕೇಂದ್ರ ವಿಭಾಗ ತಂಡದ ಮುಖ್ಯಸ್ಥ ಮೇ. ರಾಜೇಶ್ ಅಧಿಕಾರಿ.
ಟೋಲೊಲಿಂಗ್ ನಲ್ಲಿ ಬಂಕರ್ ಗಳನ್ನು ಸ್ಥಾಪಿಸಿದ್ದ ಪಾಕಿಸ್ಥಾನಿ ಸೈನಿಕರೊಂದಿಗೆ ನೇರ ಯುದ್ದಕ್ಕೆ ನಿಂತ ಮೇ. ರಾಜೇಶ್ ಅಪ್ರತಿಮ ಹೋರಾಟ ಪ್ರದರ್ಶಿಸಿದರು. ಶತ್ರುಗಳ ಗಡಿ ದಾಟಿ ಒಳಕ್ಕೆ ನುಗ್ಗಿ ಹೋರಾಡಿದ ರಾಜೇಶ್ ಯುದ್ಧ ಭೂಮಿಯಲ್ಲಿ ವೀರ ಮರಣ ಹೊಂದಿದರು.
13 ದಿನಗಳ ನಂತರ ಮೇ. ರಾಜೇಶ್ ಅಧಿಕಾರಿ ಅವರ ಶರೀರ ದೊರಕಿತ್ತು. ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ಎರಡನೇ ಯೋಧ ಇವರಾಗಿದ್ದರು. ರಾಜೇಶ್ ಸಮವಸ್ತ್ರದ ಕಿಸೆಯಲ್ಲಿ ಪತ್ನಿಗೆ ಬರೆದ ಪತ್ರವೊಂದಿತ್ತು. ಮರಣೋತ್ತರವಾಗಿ ಇವರಿಗೆ ಮಹಾವೀರ ಚಕ್ರ ನೀಡಲಾಯಿತು.