ಭಾರತಾಂಬೆಯ ಹೆಮ್ಮೆಯ ಕುವರರಿಗೆ ಗೌರವಾರ್ಪಣೆಯ ದಿನವಿದು. ಕಾರ್ಗಿಲ್ ಯುದ್ಧ ನಡೆದು ಇಪ್ಪತ್ತೆರಡು ವರುಷಗಳೇ ಕಳೆದಿವೆ, ಆದರೆ ಅದರ ನೆನಪು ಸಾವಿರ ವರುಷಗಳು ಕಳೆದರು ಹೋಗುವಂತದಲ್ಲ. ಮೇ 3, 1999 ರಂದು ಶುರುವಾಗಿ ಸತತವಾಗಿ 85 ದಿನಗಳ ಕಾಲ ಸುದೀರ್ಘವಾಗಿ ಯುದ್ಧ ನಡೆದು 26 ಜುಲೈ 1999 ರಂದು ಭಾರತ ವಿಜಯಸಾಧಿಸಿ, ವಿಜಯಪತಾಕೆ ಹಾರಿಸಿ ಶೌರ್ಯ ಮೆರೆಯುವ ತನಕ ನಡೆದಿತ್ತು ಘೋರ ಯುದ್ಧ. ಭಾರತದ ಶಕ್ತಿ ಇಡೀ ವಿಶ್ವದೆದುರು ಪ್ರದರ್ಶನಗೊಂಡು ಪಾಪೀ ಪಾಕಿಸ್ತಾನವನ್ನು ವಿಶ್ವದೆದುರು ಬೆತ್ತಲಾಗಿಸಿತು.
ಕಾರ್ಗಿಲ್ ಯುದ್ಧ ಎನ್ನುವುದು ನಾವು ಭಾರತೀಯರು ಮುಂದೆಹೋಗಿ ಯುದ್ಧ ಶುರು ಮಾಡಿದ್ದಲ್ಲ. ಪಾಪಿ ಪಾಕಿಸ್ತಾನವೇ ಒಳಸಂಚು ರೂಪಿಸಿ, ಪಿತೂರಿ ಮಾಡಿಕೊಂಡು ಮೋಸದಿಂದ ನಮ್ಮ ಸೈನಿಕರು ಕಾರ್ಗಿಲ್ ಭಾಗದಲ್ಲಿ ಇಲ್ಲದ ಸಮಯವನ್ನು ಬಳಸಿ ಹೊಂಚು ಹಾಕಿ ಒಳನುಸುಳಿ ನಮ್ಮ ಪ್ರದೇಶವನ್ನು ಆಕ್ರಮಿಸಿ ಸಂಗರ್ ಗಳನ್ನು ನಿರ್ಮಿಸಿ ಬಂಕರ್ ಗಳಲ್ಲಿ ಆಕ್ರಮಿಸಿ ಕುಳಿತು ಯುದ್ಧಕ್ಕೆ ಸಜ್ಜಾಗಿದ್ದು.
ಇದನ್ನೂ ಓದಿ : ಬಿಎಸ್ ವೈ ಬಗ್ಗೆ ಅನುಕಂಪವಿದೆ, ಅವರ ಮುಂದಿನ ಜೀವನ ಸುಖಕರವಾಗಿರಲಿ : ಮಾಜಿ ಸಿಎಂ ಸಿದ್ದು
ಕುರಿಗಾಹಿಗಳ ಮುಖೇನ ಅಪರಿಚಿತರು ನಮ್ಮ ಭೂ ಪ್ರದೇಶದ ಒಳನುಸುಳಿ ಆಕ್ರಮಿಸಿ ಕುಳಿತಿರುವ ಮಾಹಿತಿ ನಮ್ಮ ಸೈನ್ಯಕ್ಕೆ ಸಿಕ್ಕೊಡನೆ, 15 ಮೇ1999 ರಂದು ಕ್ಯಾ. ಸೌರಬ್ ಕಾಲಿಯಾ ನೇತೃತ್ವದಲ್ಲಿ ಒಟ್ಟು ಆರು ಜನ ಸೈನಿಕ ಮಿತ್ರರು ಕಕ್ಸಾರ್ ಭಾಗದ ಭಜರಂಗ್ ಪೋಸ್ಟ್ ನತ್ತ ಹೊರಟರು. ಮೊದಲ ಬಾರಿಗೆ ಭಾರತೀಯ ಸೇನೆಗೆ ಲೆ. ಸೌರಬ್ ಕಾಲಿಯಾ ಮುಖೇನ ಪಾಕಿಸ್ತಾನಿ ಸೈನಿಕರ ಸ್ಪಷ್ಟ ಚಿತ್ರಣ ದೊರೆತಿದ್ದು. ಲೆ. ಸೌರಭ್ ಕಾಲಿಯಾ ಅವರಿಗೆ ಭಾರತದೊಳಗೆ ಪ್ರವೇಶಿಸಿ ಬಂಕರ್ ಗಳಲ್ಲಿ ನೆಲೆಸಿರುವ ಪಾಕಿಗಳನ್ನು ನೋಡಿ ಸಹಿಸಿಕೊಳ್ಳಲಾಗಲಿಲ್ಲ. ತಮ್ಮ ಜೊತೆ ಬಂದಿದ್ದ ಸೈನಿಕ ಮಿತ್ರರೊಡಗೂಡಿ ನೇರವಾಗಿ ಪಾಕಿಗಳ ಮೇಲೆ ಎರಗಿ ಬಿಟ್ಟರು. ಅಲ್ಲಿಯವರೆಗೂ ಮತಾಂಧ ಜಿಹಾದಿಗಳು ಎಂದು ತಿಳಿದಿದ್ದ ನುಸುಳುಕೋರರು ಸರ್ವಸನ್ನದ್ಧವಾಗಿ ಯುದ್ಧಕ್ಕೆ ಸಿದ್ಧವಾಗಿರುವ ಪಾಕಿ ಸೈನಿಕರೆನ್ನುವುದು ಸ್ಪಷ್ಟವಾಯಿತು. ಲೆ. ಸೌರಬ್ ಕಾಲಿಯಾ ಮತ್ತು ಸಂಗಡಿಗರು ಹೊತ್ತು ತಂದಿದ್ದ ಮದ್ದುಗುಂಡುಗಳೆಲ್ಲ ಬಹುಬೇಗನೆ ಮುಗಿದುಹೋದವು, ಆದರೆ ಮುಗಿದದ್ದು ಕೇವಲ ಮದ್ದುಗುಂಡುಗಳಷ್ಟೇ ನಮ್ಮ ಸೈನಿಕರ ಶೌರ್ಯ ಧೈರ್ಯಗಳಲ್ಲ. ಪಾಕಿಸ್ತಾನ ಲೆ. ಸೌರಭ್ ಕಾಲಿಯಾ ರನ್ನು ಸೇರಿ 6 ಜನ ನಮ್ಮ ಸೈನಿಕರನ್ನು ಜೀವಂತವಾಗಿ ಸೆರೆ ಹಿಡಿದು ಪಾಕಿಸ್ತಾನಕ್ಕೆ ಕರೆದೊಯ್ದು ಒಟ್ಟು 22 ದಿನಗಳ ಕಾಲ ಸೆರೆಯಲ್ಲಿ ಇರಿಸಿಕೊಂಡು ಹಿಂಸಿಸಿತ್ತು. ಈ ಮಾಹಿತಿಯನ್ನು ಪಾಕಿಸ್ತಾನದ ‘ರೇಡಿಯೋ ಸ್ಕರ್ದು’ ಪಾಕಿಸ್ತಾನ ಸೇನೆ ಕ್ಯಾಪ್ಟನ್ ಸೌರಭ್ ಕಾಲಿಯಾರನ್ನು ವಶಪಡಿಸಿಕೊಂಡಿರುವ ಸುದ್ದಿ ಪ್ರಕಟಿಸಿತ್ತು.
22 ದಿನಗಳ ಕಾಲ ಪಾಪಿ ಪಾಕಿಸ್ತಾನದ ಲೆ. ಸೌರಬ್ ಕಾಲಿಯಾರವರಿಗೆ ಭಯಾನಕವಾಗಿ ಚಿತ್ರಹಿಂಸೆ ನೀಡಿತ್ತು. ಸೌರಬ್ ಕಾಲಿಯಾರ ದೇಹವನ್ನು ಅಮಾನುಷವಾಗಿ ಸಿಗರೇಟಿನಿಂದ ಸುಡಲಾಗಿತ್ತು, ಕ್ರೂರಿಗಳು ಕಾಲಿಯಾರ ಕಿವಿಯೊಳಗೆ ಕಾದ ಕಬ್ಬಿಣದ ಸಲಾಕೆಯನ್ನು ತುರುಕಿ ಕಿವಿ ತಮಟೆಯನ್ನು ಒಡೆದು ವಿಕೃತಿ ಮೆರೆದರು. ಅಷ್ಟಕ್ಕೇ ಸುಮ್ಮನಾಗದ ಪಾಪಿಗಳು ಕಣ್ಣು ಕಿತ್ತರು, ಬಹುತೇಕ ಹಲ್ಲುಗಳನ್ನೆಲ್ಲ ಕಿತ್ತಿದ್ದರು. ತಲೆಬುರುಡೆಯನ್ನು ಸೇರಿಸಿದಂತೆ ಅನೇಕ ಮೂಳೆಗಳನ್ನು ಪುಡಿಗೈದರು. ತುಟಿ ಹರಿದು, ಮೂಗು ಕತ್ತರಿಸಿ ಮರ್ಮಾಂಗವನ್ನು ಕತ್ತರಿಸಿ ಮಾನಸಿಕವಾಗಿ ದೈಹಿಕವಾಗಿ ಬಗೆಬಗೆಯಾಗಿ ಕಿರಿಕಿರಿ ಉಂಟು ಮಾಡಿ ಕ್ರೂರವಾಗಿ ಹಿಂಸಿಸಿದ ನಂತರ ಪಾಪಿಗಳು ತಮ್ಮ ತೃಪ್ತಿಗಾಗಿ ಕಾಲಿಯಾರಿಗೆ ಗುಂಡು ಹೊಡೆದು ಕೊಂದು ಜೂನ್ 9, 1999 ರಂದು ಭಾರತೀಯ ಸೇನೆಗೆ ಪ್ರಾರ್ಥಿವ ಶರೀರ ಹಸ್ತಾಂತರಿಸಿತು. ಅವರ ಶವವನ್ನು ನೋಡಿದ ಪ್ರತಿಯೊಬ್ಬ ಸೈನಿಕ ಬೆಚ್ಚಿ ಬಿದ್ದಿದ್ದ. ಅವರನ್ನು ಅಷ್ಟೊಂದು ಕ್ರೂರವಾಗಿ ಹಿಂಸಿಸಿ ಕೊಲ್ಲಲಾಗಿತ್ತು. ಕಾಲಿಯಾರ ಮರಣೋತ್ತರ ಪರೀಕ್ಷೆಯ ವರದಿ ಇಡೀ ದೇಶವನ್ನೇ ಗಾಬರಿಗೆ ನೂಕಿತ್ತು. ಪಾಪೀ ಪಾಕಿಸ್ತಾನ ಎಷ್ಟೊಂದು ಅಮಾನುಷ ಮತ್ತು ಕ್ರೂರಿ ಎನ್ನುವುದು ವಿಶ್ವದೆದುರು ಅನಾವರಣಗೊಂಡಿತ್ತು.
ಇದನ್ನೂ ಓದಿ : ಯಡಿಯೂರಪ್ಪನವರು ತಮ್ಮ ನೋವಿನ ಕಣ್ಣೀರಿನ ಹಿಂದಿನ ಕಾರಣ ಯಾರೆಂದು ಹೇಳಲಿ: ಡಿ.ಕೆ. ಶಿವಕುಮಾರ್
ಸೌರಬ್ ಕಾಲಿಯಾರ ವೀರೋಚಿತ ಹೋರಾಟ ಅಪ್ರತಿಮ ಶೌರ್ಯ ಬಲಿದಾನ ಅದೆಷ್ಟೋ ಯುವ ಸೈನಿಕರಿಗೆ ಸ್ಫೂರ್ತಿಯ ಚಿಲುಮೆಯಾಯಿತು.
ಇಷ್ಟೆಲ್ಲಾ ಕಷ್ಟ-ಕೋಟಲೆಗಳನ್ನು ಅನುಭವಿಸಿ ತಾಯಿ ಭಾರತಿಗಾಗಿ ತನ್ನ ಜೀವನವನ್ನೇ ನೀಡಿದ ಕಾಲಿಯಾಗೆ ಆದ ವರ್ಷವಾದರೂ ಎಷ್ಟು.! 29 ಜೂನ್ 1976 ರಲ್ಲಿ ಜನಿಸಿ 23 ವರ್ಷ ತುಂಬುವ ಮೊದಲೇ ವೀರಸ್ವರ್ಗ ಪ್ರಾಪ್ತಿಯಾಗಿತ್ತು. 12 ಡಿಸೆಂಬರ್ 1998 ರಲ್ಲಿ ಸೇನೆಗೆ ಸೇರಿದ ಕಾಲಿಯಾ ವರುಷವೊಂದು ತುಂಬುವ ಮೊದಲೇ ಸಾಹಸ ಪ್ರದರ್ಶಿಸಿ ಅಪ್ರತಿಮ ವೀರನಾಗಿ ತಾಯಿ ಭಾರತಾಂಬೆಯ ಮಡಿಲಲ್ಲಿ ವಿಶ್ರಮಿಸಿದ.
ಕಾಲಿಯರಂತೆ ನಮ್ಮ ವೀರ ಸೈನಿಕರು ಭಾರತಾಂಬೆಯ ನೆಲದಿಂದ ಪಾಪಿಗಳನ್ನು ಹೊರಗಟ್ಟಲು ಹಿಮದಿಂದ ಆವೃತವಾದ ಕಡಿದಾದ ಬೆಟ್ಟ-ಗುಡ್ಡಗಳಲ್ಲಿ ತಮ್ಮ ಪ್ರಾಣವ ಲೆಕ್ಕಿಸದೆ, ಹಗಲು ಇರುಳು ಎನ್ನದೆ ಹೋರಾಡಿ 26 ಜುಲೈ 1999ರಂದು ವಿಜಯ ಪತಾಕೆ ಹಾರಿಸುವ ಮೊದಲೇ 527 ಸೈನಿಕರು ಯುದ್ಧಭೂಮಿಯಲ್ಲಿ ವೀರಸ್ವರ್ಗ ಪಡೆದು ತಾಯಿ ಭಾರತಾಂಬೆಯ ಮಡಿಲಲ್ಲಿ ಚಿರನಿದ್ರೆಗೆ ಜಾರಿದ್ದರು.
ದೇಶದ ವಿಚಾರ ಬಂದಾಗ ತಮ್ಮ ಜೀವವನ್ನು ಲೆಕ್ಕಿಸದೆ ಹುತಾತ್ಮರಾದ ಸೈನಿಕರಿಗೆ ಈ ಜಗದೊಳು ಬೇರೆ ಸರಿಸಾಟಿ ಇಲ್ಲ. ಸೈನಿಕರ ವಿರೋಚಿತ ಹೋರಾಟಗಳು ಪ್ರತಿಯೊಬ್ಬ ಭಾರತೀಯನು ತಿಳಿಯುವಂತಾಗಲಿ. ದೇಶದ ಗಡಿಯಲ್ಲಿ ಮಳೆ, ಗಾಳಿ, ಬಿಸಿಲು, ಚಳಿಯನ್ನು ಲೆಕ್ಕಿಸದೆ ದಿನದ 24 ಗಂಟೆ ವರ್ಷದ 365 ದಿನವೂ ದೇಶದ ಭದ್ರತೆಗಾಗಿ ಅವಿರತ ಶ್ರಮ ಪಡುತ್ತಿರುವ ಹೆಮ್ಮೆಯ ಸೈನಿಕರು ನಮಗೆ ಸ್ಫೂರ್ತಿಯಾಗಬೇಕು.
ದೇಶದ ಗಡಿಯಲ್ಲಿ ನಿಂತು ಹೋರಾಡುವ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ದೇಶದ ಒಳಗಡೆಯಿಂದ ಸದಾ ಆಗುತ್ತಿರಬೇಕು. ದೇಶ ಸೇವೆಗೆ ತನ್ನ ಮಕ್ಕಳನ್ನು ಕಳುಹಿಸುವ ಪ್ರತಿಯೊಬ್ಬ ತಂದೆ-ತಾಯಿಗೂ ನಾವು ಧೈರ್ಯ ತುಂಬುವ ಕೆಲಸ ಮಾಡಬೇಕು. ದೇಶಸೇವೆಗೆ ತನ್ನ ಮನೆಯ ಬೆಳಕನ್ನೇ ನೀಡಿ ತಾಯಿ ಭಾರತಾಂಬೆಯ ಪದ ಕಮಲದ ಜ್ಯೋತಿ ಅಖಂಡವಾಗುವಂತೆ ಮಾಡುವ ಪ್ರತಿಯೊಬ್ಬರಿಗೂ ನಾನು ಚಿರಋಣಿ…..
ಮಣೀಶ್ ಕುಮಾರ್ ಶೆಟ್ಟಿ.
ಕುಂದಾಪುರ
ಇದನ್ನೂ ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 123 ಅಂಕ ಇಳಿಕೆ; ಎಸ್ ಬಿಐ, ಆರ್ ಐಎಲ್ ಷೇರುಗಳಿಗೆ ನಷ್ಟ