ಮಡಿಕೇರಿ: ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಜಿಲ್ಲಾಸ್ಪತ್ರೆ ಮತ್ತು ಅಶ್ವಿನಿ ಆಸ್ಪತ್ರೆ ಸಹಯೋಗದೊಂದಿಗೆ ಮಡಿಕೇರಿಯ ಅಶ್ವಿನಿ ಆಸ್ಪತ್ರೆ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ನಗರದ ಆರ್ ಆರ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ನವೀನ್‌ಕುಮಾರ್ ಭಾರತೀಯ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು ಕಾರ್ಗಿಲ್ ಯುದ್ದ. ಭಾರತೀಯ ಸೇನೆಯ ಪರಾಕ್ರಮ ಹಾಗೂ ದೇಶ ರಕ್ಷಣೆ ಮಾಡುವ ಸಲುವಾಗಿ ಅವರ ತ್ಯಾಗ ಹಾಗೂ ಬಲಿದಾನಗಳನ್ನು ಕಾರ್ಗಿಲ್ ವಿಜಯೋತ್ಸವ ದಿನ ನೆನಪಿಸುತ್ತದೆ ಎಂದರು.
ಯುದ್ಧದ ಸಂದರ್ಭದಲ್ಲಿ ದೇಶದ ಹೆಮ್ಮೆ ಮತ್ತು ನಾಗರಿಕರ ಭದ್ರತೆಗಾಗಿ ವೀರತ್ವದಿಂದ ಹೋರಾಡಿದ ನಮ್ಮ ಕೆಚ್ಚೆದೆಯ ಯೋಧರನ್ನು ಪ್ರತಿದಿನವೂ ನೆನಪಿಸಿಕೊಳ್ಳಬೇಕು. ಕಾಯಿಲೆ ಬಂದಾಗ ವೈದ್ಯರ ನೆನಪಾಗುವಂತೆ ಯುದ್ದ ಬಂದಾಗ ಮಾತ್ರ ಯೋಧರ ನೆನಪಾಗಬಾರದು. ದೇಶಪ್ರೇಮ ಎಂಬುದು ಬರೀ ಬಾಯಿ ಮಾತಿನಲ್ಲಿರದೆ ಎಲ್ಲರ ತನು ಮನದಲ್ಲೂ ಇರಬೇಕು ಎಂದು ಡಾ.ನವೀನ್‌ಕುಮಾರ್ ಕರೆ ನೀಡಿದರು.
ರಕ್ತನಿಧಿ ವೈದ್ಯಾಧಿಕಾರಿ ಕರುಂಬಯ್ಯ ಮಾತನಾಡಿ, ರಕ್ತದಾನದಿಂದ ರಕ್ತದ ಅವಶ್ಯಕತೆ ಇರುವವರಿಗೆ ಮಾತ್ರ ಲಾಭವಾಗುವುದಿಲ್ಲ. ರಕ್ತದಾನಿಗಳೂ ತಮ್ಮ ಆರೋಗ್ಯ ವೃದ್ದಿಸಿಕೊಳ್ಳಬಹುದು. ಇದರಿಂದ ರಕ್ತದಾನ ಮಾಡಿದವರಲ್ಲಿ ಹೊಸ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ. ಜೊತೆಗೆ ಹೃದಯಾಘಾತದ ಸಂಭವ, ರಕ್ತದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಆದ್ದರಿಂದ ರಕ್ತದಾನ ಮಾಡಲು ಹಿಂಜರಿಯಬಾರದು. ದಾನ ಮಾಡಿದ ವ್ಯಕ್ತಿಯಲ್ಲಿ ಶುದ್ದ ರಕ್ತ ಮತ್ತೆ 3 ತಿಂಗಳಲ್ಲಿ ಪುನಃ ಉತ್ಪತ್ತಿಯಾಗುತ್ತದೆ. ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವವನ್ನು ಉಳಿಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಶ್ವಿನಿ ಆಸ್ಪತ್ರೆಯ ಆಡಳಿತಾಧಿಕಾರಿ ಶೆಣೈ, ಮೈ ಕೊರೆವ ಚಳಿಯಲ್ಲಿ, ರಕ್ತ ಹೆಪ್ಪುಗಟ್ಟಿಸುವ ಹಿಮದ ರಾಶಿಯ ನಡುವೆ ಉಗ್ರರೊಂದಿಗೆ ವೀರಾವೇಶದಿಂದ ಹೋರಾಡಿ, ಮಾತೃಭೂಮಿಗಾಗಿ ಸಾವಿರಾರು ಸೈನಿಕರು ಮಣ್ಣಲ್ಲಿ ಮಣ್ಣಾದ ದಿನವನ್ನು ಎಲ್ಲೆಡೆ ಅಭಿಮಾನದಿಂದ ಆಚರಿಸಲಾಗುತ್ತಿದೆ ಎಂದು ಕರುಂಬಯ್ಯ ಹೇಳಿದರು.
ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಡಿ.ನರಸಿಂಹ, ಬಜರಂಗದಳ ಜಿಲ್ಲಾ ಸಂಚಾಲಕ ಚೇತನ್, ಅಶ್ವಿನಿ ಆಸ್ಪತ್ರೆಯ ವೈದ್ಯರಾದ ಡಾ.ಕುಲಕರ್ಣಿ ಮತ್ತಿತರರು ಹಾಜರಿದ್ದರು