ಕಲಬುರಗಿ: ಅಲ್ರಿ ಸ್ವಾಮಿ. ನಾನು ನನ್ನ ಇಡೀ ಜೀವನ ತ್ಯಾಗ ಮಾಡಿದ್ದಿನಿ, ಮಾಡಿದ್ದಿನಿ ಎಂದು ಹೇಳಿಕೊಂಡು ತಿರುಗುತ್ತಿರಲ್ಲ, ನಿಮ್ಮನ್ನ ಯಾರಾದ್ರು ಬಾ ಎಂದು ಕರೆದಿದ್ದರೆ ಎಂದು ಪ್ರಧಾನಿ ಮೋದಿ ಅವರಿಗೆ ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟಾಂಗ್ ನೀಡಿದರು.
ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿ ವಿಸ್ತೃತ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿದರು. ಒಬ್ಬ ಚಾಯಿವಾಲಾ ಪ್ರಧಾನಿಯಾಗಿದ್ದು ಈ ದೇಶದಲ್ಲಿ ನಡೆದಿದೆ ಎನ್ನುವ ಮೋದಿ ಅವರೇ 60 ವರ್ಷಗಳ ಕಾಲ ಕಾಂಗ್ರೆಸ್ ದೇಶದಲ್ಲಿ ಪ್ರಜಾಪ್ರಭುತ್ವ, ಏಕತೆ, ಐಕ್ಯತೆ ಮತ್ತು ಸಾಮರಸ್ಯ ಹಾಗೂ ಸಂವಿಧಾನದ ಪಾವಿತ್ರೆತೆ ಉಳಿಸಿಕೊಂಡು ಬಂದಿರುವ ಪರಿಣಾಮ ನೀವು ಪ್ರಧಾನಿಯಾದ್ರಿ.
ಮೋದಿ ಅವರೇ ನೀವು ಪ್ರಧಾನಿಯಾಗಿದ್ದು ನಮ್ಮ ನಡತೆ ಮತ್ತು ಪ್ರಾಮಾಣಿಕತೆಯಿಂದ. ದೇಶದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂಬುದು ಈಗಲಾದ್ರೂ ಅರ್ಥವಾಯಿತಾ ಎಂದು ಪ್ರಶ್ನಿಸಿದರು. 18 ಸಾವಿರ ಹಳ್ಳಿಗೆ ಕರೆಂಟ್ ನೀಡಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎನ್ನುವ ಪ್ರಧಾನಿ ಅವರೇ ಇನ್ನುಳಿದ 6.30 ಲಕ್ಷ ಹಳ್ಳಿಗೆ ಕರೆಂಟ್ ನೀಡಿದ್ದಿವಲ್ಲ. ಅದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ನೀವು ಅಧಿಕಾರಕ್ಕೆ ಬಂದಾಗಿನಿಂದ ದೇಶ ಹೈರಾಣಾಗಿದೆ.
ಮಾಡಿರುವ ತಪ್ಪಿಗೆ ಮೊದಲು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಲೋಚಿಸಿ. ನಿಮ್ಮಲ್ಲಿ ದೇಶಕ್ಕಾಗಿ ತ್ಯಾಗ ಮಾಡಿದವರು ಯಾರು ಇದ್ದಾರೆ. ಒಂದು ಪ್ರಾಣಿಯೂ ತ್ಯಾಗ ಮಾಡಿಲ್ಲ ಎಂದರೆ ಸಿಟ್ಟಿಗೆ ಬರುತ್ತೀರಿ. ಆದ್ರೆ ನೀವು ಪದೇ ಪದೇ ತ್ಯಾಗ ಮಾಡಿದ್ದಿನಿ ಎನ್ನುತ್ತಿರಲ್ಲ ನೀವೇನಿದ್ರಿ. ಬ್ಯಾರಿಸ್ಟರಾ, ರಾಜ ಇದ್ದರಾ ಎಂದು ಕೇಳುವ ಮೊದಲು ನಿಮ್ಮ ತ್ಯಾಗದ ಮೌಲ್ಯ ನೋಡಿಕೊಳ್ಳಿ ಎಂದು ಹೇಳಿದರು.
ಮಾಜಿ ಸಚಿವ ಹಾಗೂ ಹಾಲಿ ಶಾಸಕ ಖಮರುಲ್ ಇಸ್ಲಾಂ ಮಾತನಾಡಿ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಕೊಡುವಲ್ಲಿ ಹೆಚ್ಚು ಸಕ್ರಿಯವಾಗಿದೆ. ಹಲವಾರು ಜನಕಲ್ಯಾಣ ಯೋಜನೆಗಳ ಮೂಲಕ ಜನರಿಗೆ ನೆಮ್ಮದಿ ನೀಡಿದೆ. ಸಿದ್ದರಾಮಯ್ಯ ಅವರ ಸರಕಾರ ನುಡಿದಂತೆ ನಡೆದುಕೊಳ್ಳುತ್ತಿದೆ. ಈ ಕುರಿತು ನಮ್ಮ ಕಾರ್ಯಕರ್ತರು ಜನರಿಗೆ ತಿಳಿ ಹೇಳಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಪಕ್ಷದ ಕೆಪಿಸಿಸಿ ಸದಸ್ಯ ಡಿ.ಆರ್. ಪಾಟೀಲ ಮಾತನಾಡಿದರು. ಇದಕ್ಕೂ ಮುನ್ನ ಗೃಹ ಖಾತೆ ಸಚಿವ ಜಿ. ಪರಮೇಶ್ವರ ಸಭೆ ಉದ್ಘಾಟಿಸಿದರು. ತೊಗರಿ ಮಂಡಳಿ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಾಗಣ್ಣಗೌಡ ಸಂಕನೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಚಿವ ಡಾ| ಶರಣಪ್ರಕಾಶ ಪಾಟೀಲ, ಶಾಸಕ ಡಾ| ಉಮೇಶ ಜಾಧವ, ಎಂಎಲ್‌ಸಿ ಶರಣಪ್ಪ ಮಟ್ಟೂರ, ಅಲ್ಲಂಪ್ರಭು ಪಾಟೀಲ, ದಶರಥ ಒಂಟಿ, ತಿಪ್ಪಣ್ಣಪ್ಪ ಕಮಕನೂರ, ಮಜರ್ ಹುಸೇನ್, ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಭೀಮಣ್ಣ ಸಾಲಿ, ಶಿವಕುಮಾರ ತೋರಣ, ಮಾರುತಿರಾವ ಮಾಲೆ, ಚಂದ್ರಿಕಾ ಪರಮೇಶ್ವರ, ಬಸವರಾಜ ಭೀಮಳ್ಳಿ, ನೀಲಕಂಠ ಮೂಲಗೆ, ಆಲಂ ಖಾನ್ ಇನ್ನೂ ಹಲವಾರು ನಾಯಕರು ಹಾಗೂ ಮುಖಂಡರು ಇದ್ದರು.