ದಾವಣಗೆರೆ: ಮೇಯರ್, ಆಯುಕ್ತರಿಗೆ ಗುಲಾಬಿ ಹೂ ಕೊಟ್ಟು ಪಾಲಿಕೆ ವ್ಯಾಪ್ತಿಯ ಆಂಗ್ಲನಾಮಫಲಕ ತೆರವುಗೊಳಿಸಲು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಕಾರ್ಯಕರ್ತರು ಬುಧವಾರ ಆಗ್ರಹಿಸಿದ್ದಾರೆ.
ಮೇಯರ್, ಆಯಕ್ತರ ಕಚೇರಿಗೆ ತೆರಳಿದ ಕಾರ್ಯಕರ್ತರು, ಪಾಲಿಕೆ ವ್ಯಾಪ್ತಿಯಲ್ಲಿ ಆಂಗ್ಲ, ಇತರೆ ಭಾಷೆಯ ನಾಮಫಲಕ ಹೆಚ್ಚುತ್ತಿವೆ. ಇವನ್ನು ತೆರವುಮಾಡಲು ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೆ, ಈವರೆಗೆ ಆ ಕಾರ್ಯ ಆಗಿಲ್ಲ.
ದಯವಿಟ್ಟು ತಕ್ಷಣ ತೆರವಿಗೆ ಕ್ರಮ ವಹಿಸಿ ಎಂಬುದಾಗಿ ಹೋರಾಟದ ಮೊದಲ ಭಾಗವಾಗಿ ನಾವು ಗಾಂಧಿಗಿರಿ ಮೂಲಕ ಆಗ್ರಹಿಸುತ್ತಿದ್ದೇವೆ ಎಂದರು. ಕನ್ನಡ ನಾಡಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು.
ಆದರೆ, ನಮ್ಮ ನಗರದಲ್ಲಿ ಕನ್ನಡಕ್ಕಿಂತ ಅನ್ಯ ಭಾಷೆ ನಾಮಫಲಕಗಳೇ ಹೆಚ್ಚಿವೆ. ಇವನ್ನು ತೆರವು ಮಾಡಬೇಕಾದ ಕರ್ತವ್ಯ ಪಾಲಿಕೆಯದ್ದು. ಕಾನೂನು ಪ್ರಕಾರ ಶೇ.25ರಷ್ಟು ಮಾತ್ರ ಅನ್ಯ ಭಾಷೆ ಬಳಸಬೇಕು. ಅದು ಅನ್ಯ ರಾಜ್ಯದವರು ಬರುತ್ತಾರೆ ಎಂದಾದರೆ ಮಾತ್ರ.
ಆದರೆ, ನಮ್ಮ ನಗರಕ್ಕೆ ಬರುವವರು ಹೆಚ್ಚಿನವರು ನಮ್ಮವರೇ ಆದರೂ, ದೊಡ್ಡ ದೊಡ್ಡ ಕಂಪನಿ, ವ್ಯಾಪಾರಿಗಳು ಅನ್ಯಭಾಷಾ ವ್ಯಾಮೋಹಕ್ಕೆ ಸಿಲುಕಿದ್ದಾರೆ. ಅವರ ವಿರುದ್ಧ ಕಾನೂನು ರೀತಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ವೇದಿಕೆಯ ಎ.ಎಂ. ಮಂಜುಳ, ಡಿ. ಮಲ್ಲಿಕಾರ್ಜುನ್, ಬಿ. ಮಂಜುಳಾ, ಕಮಲಮ್ಮ, ಎ.ಎಚ್. ತಿಮ್ಮೇಶ್, ಸಲ್ಮಾ, ಬಸಮ್ಮ, ಕೆ.ಎಂ. ಜ್ಞಾನಮೂರ್ತಿ ಇತರರಿದ್ದರು.